ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌

| Published : Aug 05 2025, 11:50 PM IST

ಸಾರಾಂಶ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ ಕರೆ ನೀಡಿದ್ದ ಬಂದ್‌ ಮುಧೋಳದಲ್ಲಿ ವಿಫಲವಾಯಿತು. ಇಲ್ಲಿನ ಬಹುತೇಕ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಿದ್ದರಿಂದ ಬಸ್‌ ಓಡಾಟ ಎಂದಿನಂತಿತ್ತು.

ಕನ್ನಡಪ್ರಭ ವಾರ್ತೆ ಮುಧೋಳ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ ಕರೆ ನೀಡಿದ್ದ ಬಂದ್‌ ಮುಧೋಳದಲ್ಲಿ ವಿಫಲವಾಯಿತು. ಇಲ್ಲಿನ ಬಹುತೇಕ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಿದ್ದರಿಂದ ಬಸ್‌ ಓಡಾಟ ಎಂದಿನಂತಿತ್ತು. ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಆದರೆ, ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮೊದಲೇ ಗೊತ್ತಿದ್ದರಿಂದ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಮಂಗಳವಾರ ಬೆಳಗ್ಗೆಯಿಂದಲೇ ಬಸ್ ಗಳು ರಸ್ತೆಗಿಳಿದವು.ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಪೊಲೀಸ್ ಇಲಾಖೆಯವರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಮುಧೋಳ ಡಿಪೋ ದಿಂದ ಗ್ರಾಮಾಂತರ ಭಾಗಗಳಲ್ಲಿ ಓಡಾಡುವ ಎಲ್ಲ ಬಸ್ ಗಳಲ್ಲಿ ಒಬ್ಬರು ಹೋಮ್ ಗಾರ್ಡ್ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ಮುಧೋಳ ಪೊಲೀಸ್ ಸಿಬ್ಬಂದಿ ಜೊತೆಗೆ ಪಿಎಸ್ಐ ಮತ್ತು ಸಿಪಿಐ ಅವರು ಬಸ್ ನಿಲ್ದಾಣದಲ್ಲಿಯೇ ಹಾಜರಿದ್ದು, ಪ್ರಯಾಣಿಕರಿಗೆ ತೊಂದರೆ ಆಗದಂತೆ ನೋಡಿಕೊಂಡರು. ಬಸ್ ಸಂಚಾರ ಇದ್ದಿದ್ದರಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಗಳು ಉಂಟಾಗಲಿಲ್ಲ.

ಪ್ರಯಾಣಿಕರು ಸುಗಮ ಸಂಚಾರ ಮಾಡಲೆಂಬ ಉದ್ದೇಶದಿಂದ ನಾವು ಹೆಚ್ಚಿನ ಪ್ರಮಾಣದಲ್ಲಿ ಹೋಮ್ ಗಾರ್ಡ್ ಗಳನ್ನು ಮತ್ತು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ನಾವು ಕೂಡ ಸೋಮವಾರ ರಾತ್ರಿಯಿಂದಲೇ ಮಂಗಳವಾರ ಸಂಜೆಯವರೆಗೆ ಬಸ್ ನಿಲ್ದಾಣದಲ್ಲಿಯೇ ಕರ್ತವ್ಯ ನಿರ್ವಹಿಸಿದ್ದೇವೆಂದು ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ ಪತ್ರಿಕೆಗೆ ತಿಳಿಸಿದರು.