ಗ್ರಿಡ್‌ಗೆ ವಿದ್ಯುತ್ ಸರಬರಾಜು ವಯರ್‌ನಲ್ಲಿ ಬೆಂಕಿ: ಸ್ಥಳೀಯರಿಂದ ನಿಯಂತ್ರಣ

KannadaprabhaNewsNetwork | Published : Dec 23, 2023 1:46 AM

ಸಾರಾಂಶ

ಬೆಳ್ತಂಗಡಿ ತಾಲೂಕಿನ ನೆರಿಯ ಅಣಿಯೂರು‌ ಹಳ್ಳದ ಖಾಸಗಿ ಕಿರು ಜಲವಿದ್ಯುತ್ ಯೋಜನೆಯಿಂದ ಗುರುವಾಯನಕೆರೆ ಪವರ್ ಗ್ರಿಡ್ ಗೆ ವಿದ್ಯುತ್ ಹರಿಯುವ ವಯರ್‌ನಲ್ಲಿ ರಾತ್ರಿ ಬೆಂಕಿ ಹೊತ್ತಿ‌ ಉರಿದ ಘಟನೆ ಸೋಮಂತಡ್ಕ ಶಾರದಾ ನಗರ ಅಡೂರು ಸಮೀಪದಲ್ಲಿ ನಡೆದಿದೆ.

ಬೆಳ್ತಂಗಡಿ; ನೆರಿಯ ಅಣಿಯೂರು‌ ಹಳ್ಳದ ಖಾಸಗಿ ಕಿರು ಜಲವಿದ್ಯುತ್ ಯೋಜನೆಯಿಂದ ಗುರುವಾಯನಕೆರೆ ಪವರ್ ಗ್ರಿಡ್ ಗೆ ವಿದ್ಯುತ್ ಹರಿಯುವ ವಯರ್ ನಲ್ಲಿ‌‌ ಮಧ್ಯ ರಾತ್ರಿ ಬೆಂಕಿ ಹೊತ್ತಿ‌ ಉರಿದ ಘಟನೆ ಸೋಮಂತಡ್ಕ ಶಾರದಾ ನಗರ ಅಡೂರು ತಿರುವು ಸನಿಹ ನಡೆದಿದೆ. ಇಲ್ಲಿನ ಕಿರು ಜಲವಿದ್ಯುತ್ ಯೋಜನೆಯಿಂದ ಉತ್ಪಾದನೆಯಾಗುವ ವಿದ್ಯುತ್ ಅತ್ಯಾಧುನಿಕ ಟ್ವಿಸ್ಟೆಡ್ ಕೇಬಲ್ ಮೂಲಕ ನೆರಿಯದಿಂದ ಗುರುವಾಯನಕೆರೆ ಗ್ರಿಡ್ಡ್‌ಗೆ ಪ್ರವಹಿಸುತ್ತಿದೆ. ಈ ವಯರ್ ನಲ್ಲಿ‌ 2 ಗಂಟೆ ರಾತ್ರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಉಂಡೆಗಳು ಕೆಳಬಿದ್ದು ಪೊದೆಗೆ ಬೆಂಕಿ ಹತ್ತಿಕೊಂಡಿತ್ತು. ಕೆಲವೇ ನಿಮಿಷಗಳಲ್ಲಿ‌ ಬೆಂಕಿ ವ್ಯಾಪಿಸಲಾರಂಭಿಸಿತು.ಆದರೆ ಕಳೆದ ರಾತ್ರಿ ಮಂಜುಶ್ರೀ ಭಜನಾ ಮಂದಿರದಲ್ಲಿ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮ ಇದ್ದುದರಿಂದ ರಸ್ತೆಯಲ್ಲಿ ತಡರಾತ್ರಿಯೂ ಜನ ಸಂಚಾರ ಇತ್ತು. ಪೂಜೆಯಿಂದ ಮನೆಗೆ ಮರಳುತ್ತಿದ್ದ ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಗಣೇಶ್ ಬಂಗೇರ ಅವರು ಬೆಂಕಿ ಉರಿಯುತ್ತಿದ್ದುದನ್ನು‌ ಗಮನಿಸಿದ ಇಲಾಖೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.ಬೆಂಕಿ ಹೊತ್ತಿಕೊಂಡ ಪಕ್ಕದಲ್ಲೇ ಸ್ಕ್ರಾಪ್ ಮತ್ತು ಹಳೆಯ ವಾಹನಗಳ ಬಿಡಿಭಾಗ ಮಾರಾಟದ ವಿಶಾಲ ಶೋರೂಮ್ ಇದ್ದು, ಬೆಂಕಿಯನ್ನು ಯಾರೂ ನೋಡಿರದಿದ್ದರೆ ಬೆಂಕಿ ವ್ಯಾಪಿಸಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

ವಿಷಯ ಅರಿತ ಸ್ಥಳೀಯರು ಪೊದೆಗೆ ನೀರು‌ಹಾಯಿಸಿ ಬೆಂಕಿ‌‌ ಹಬ್ಬದಂತೆ ತಡೆಯುವಲ್ಲಿ‌ ಯಶಸ್ವಿಯಾಗಿದ್ದಾರೆ. ಈ ವೇಳೆ ಹೊತ್ತಿ ಉರಿದ ಕೇಬಲ್ ತುಂಡಾಗಿ ಬೇರ್ಪಟ್ಟಿತು. ತಾಂತ್ರಿಕ ವ್ಯವಸ್ಥೆಯಿಂದಲೋ (ಟ್ರಿಪ್) ಅಥವಾ ವಯರ್ ಸಂಪೂರ್ಣ ಉರಿದು ಬಿದ್ದ ಪರಿಣಾಮದಿಂದಲೋ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಬೆಂಕಿ ನಿಂತು ಹೋಯಿತು. ಇಲ್ಲದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾದ್ಯತೆ ಇತ್ತು.

ಬುಡ ಕಿತ್ತ ಕಂಬಗಳು, ಅಲ್ಲಲ್ಲಿ‌ ಜೋತು ಬಿದ್ದ ಕೇಬಲ್ವಿದ್ಯುತ್ ಸರಬರಾಜು ಮಾರ್ಗದಲ್ಲಿ ಖಾಸಗಿ ಕಂಪೆನಿ ಅಳವಡಿಸಿದ ಕಂಬಗಳು ಕೆಲವೆಡೆ ಬುಡದ ಮಣ್ಣು ಸವಕಳಿಗೊಂಡು ವಾಲಿಕೊಂಡಿದ್ದು ಅಪಾಯದಲ್ಲಿದೆ. ಇನ್ನೂ ಹಲವೆಡೆ ಕೇಬಲ್ ಸಂಪೂರ್ಣ ಜೋತು‌ಬಿದ್ದಿದೆ.ಅಲ್ಲದೆ ವಿದ್ಯುತ್ ಮಾರ್ಗದುದ್ದಕ್ಕೂ ಪೊದೆಗಳು ವಯರ್‌ನ ಸಮೀಪದವರೆಗೂ ಎದ್ದು ನಿಂತಿದ್ದು ಇನ್ನಷ್ಟು ಅಪಾಯದ ಮುನ್ಸೂಚನೆ ನೀಡಿದೆ. ಕಂಪೆನಿ‌ ಕಡೆಯಿಂದ ಪೊದೆಗಳ ನಿರ್ವಹಣೆಯಾಗಬೇಕಿದೆ ಎಂದು ಆಗ್ರಹ ವ್ಯಕ್ತವಾಗಿದೆ.

Share this article