ಬೆಂಕಿ ಅವಘಡ: 3,000 ಶ್ರೀಗಂಧದ ಮರಗಳ ದಹನ, ಅಪಾರ ಬೆಳೆಹಾನಿ

KannadaprabhaNewsNetwork | Published : Feb 24, 2024 2:33 AM

ಸಾರಾಂಶ

ಮಧ್ಯಾಹ್ನದ ಸುಡು ಬಿರು ಬಿಸಿಲಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಕ್ಷಣಾರ್ಧದಲ್ಲೇ ತನ್ನ ಕೆನ್ನಾಲಿಗೆ ಚಾಚಿ ಮರದಿಂದ ಮರಕ್ಕೆ ಹಬ್ಬಿ ಇಡೀ ಎಂಟು ಎಕರೆ ಜಮೀನನ್ನು ವ್ಯಾಪಿಸಿದ್ದು, ಸುಮಾರು 3,000 ಶ್ರೀಗಂಧದ ಮರಗಳು ನಾಶವಾಗಿವೆ.

ಕನ್ನಡಪ್ರಭ ವಾರ್ತೆ ತರೀಕೆರೆ/ ಮೂಡಿಗೆರೆ

ಅಕಸ್ಮಿಕ ಬೆಂಕಿ ಅನಾಹುತದಿಂದ ಹುಲುಸಾಗಿ ಬೆಳೆದಿದ್ದ ಸುಮಾರು 3,000 ಶ್ರೀಗಂಧದ ಮರಗಳು, 50 ತೆಂಗು ಮತ್ತು 50 ಮಾವಿನ ಮರಗಳು ಸುಟ್ಟು ಕರಕಲಾಗಿ ಹೋಗಿ ಅಪಾರ ಪ್ರಮಾಣದಲ್ಲಿ ಬೆಳೆನಷ್ಟ ಸಂಭವಿಸಿದ ಘಟನೆ ತರೀಕೆರೆ ಸಮೀಪದ ಶಿವಪುರ ಗ್ರಾಮದ ಬಳಿ ನಡೆದಿದೆ.

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ರಾಜ್ಯ ಸಂಚಾಲಕರು, ಪಟ್ಟಣದ ಪ್ರಗತಿಪರ ರೈತರು, ಶ್ರೀಗಂಧ ಬೆಳೆಗಾರರಾದ ಟಿ.ಎನ್.ವಿಶುಕುಮಾರ್ ಅವರು

ಸಮೀಪದ ಶಿವಪುರ ಗ್ರಾಮದ ಸ.ನಂ.98, 99 ಮತ್ತು 100ರಲ್ಲಿ ಸುಮಾರು ಎಂಟು ಎಕರೆ ಪ್ರದೇಶದಲ್ಲಿ, ಕಳೆದ ಆರೇಳು ವರ್ಷ ಗಳಿಂದ ಬಹಳ ಶ್ರಮ ಪಟ್ಟು ಬೆಳೆದಿದ್ದ 3000 ಶ್ರೀಗಂಧ ಮರಗಳು, ಐವತ್ತು ತೆಂಗಿನ ಮರ ಹಾಗೂ ಐವತ್ತು ಮಾವಿನ ಮರಗಳು ಅಗ್ನಿ ಅನಾಹುತದಿಂದ ಸುಟ್ಟು ಕರಕಲಾಗಿದೆ.

ಮಧ್ಯಾಹ್ನದ ಸುಡು ಬಿರು ಬಿಸಿಲಿಗೆ ಮತ್ತು ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ಕೆನ್ನಾಲಿಗೆ ಚಾಚಿ ಮರದಿಂದ ಮರಕ್ಕೆ ಹಬ್ಬಿ ಇಡೀ ಎಂಟು ಎಕರೆ ಜಮೀನನ್ನು ವ್ಯಾಪಿಸಿದೆ. ಜಮೀನಿನಲ್ಲಿ ಭೂಮಿಯ ಮೇಲ್ಪದರಲ್ಲಿ ಬೆಳೆದಿದ್ದ ಒಣಗಿದ ಹುಲ್ಲುರಾಶಿಯಿಂದಾಗಿ ಬೆಂಕಿ ಬೇಗನೆ ಹರಡಲು ಕಾರಣವಾಗಿದೆ.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ, ಸಾರ್ವಜನಿಕರು ಮತ್ತು ಅಗ್ನಿ ಶ್ಯಾಮಕ ದಳದವರ ಸಹಕಾರದಿಂದ ಎರಡು ಗಂಟೆಗಳ ಕಾಲ ಶ್ರಮಪಟ್ಟು ಬೆಂಕಿಯನ್ನು ಹತೋಟಿಗೆ ತರಲಾಯಿತು ಎಂದು ಶ್ರೀಗಂಧ ಬೆಳೆಗಾರರಾದ ಟಿ.ಎನ್.ವಿಶುಕುಮಾರ್ ತಿಳಿಸಿದ್ದಾರೆ.ಶ್ರೀಗಂಧ ಮರಗಳಿಗೆ ನೀರಿನ ಸಲುವಾಗಿ ಅಳವಡಿಸಿದ್ದ ಬೆಲೆ ಬಾಳುವ ಅಪಾರ ಪ್ರಮಾಣದ ಡ್ರಿಪ್ ಪೈಪುಗಳು, ವಾಲ್ವ್ ಗಳು ಕೂಡ ಸುಟ್ಟು ಹೋಗಿವೆ.

ಎಂಟು ವರ್ಷಗಳ ಶ್ರೀಗಂಧ ಮರಗಳು: ವಿಶೇಷ ಆಸ್ಥೆ ವಹಿಸಿ ಕಾಲ ಕಾಲಕ್ಕೆ ನೀರು ಗೊಬ್ಬರ ಹಾಕಿ ಬೆಳೆಸಿದ್ದ ಶ್ರೀಗಂಧ ಮರಗಳು ಈ ರೀತಿ ಬೆಂಕಿ ಆನಾಹುತದಿಂದ ಸುಟ್ಟು ಹೋಗಿರುವುದು ಕಂಡು ಟಿ.ಎನ್.ವಿಶುಕುಮಾರ್‌ ಮಮ್ಮಲ ಮರುಗಿದ್ದಾರೆ. ಘಟನೆಯ ಕುರಿತು ಅವರು ತರೀಕೆರೆ ವಲಯ ಅರಣ್ಯಾಧಿಕಾರಿಗಳಿಗೆ ದೂರು ನೀಡಿ ಬೆಳೆನಷ್ಟ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.ಒಂಟಿ ಮನೆಗೆ ಕನ್ನ ಹಾಕಿದ ಐವರ ಸೆರೆ

ಮೂಡಿಗೆರೆ: ತಾಲ್ಲೂಕಿನ ಬಾಳೂರು ಹೋಬಳಿಯ ಜೆ.ಹೊಸಳ್ಳಿ ಗ್ರಾಮದ ಅನಂತರಾಮ್ ಎಂಬುವವರ ಮನೆಗೆ ನುಗ್ಗಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಅನ್ಸರ್ ಆಲಿಯಾಸ್ ಅಂಚು, ಬೆಳ್ತಂಗಡಿ ಮೂಲದ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಮೂಡಿಗೆರೆ ತಾಲ್ಲೂಕು ಬೆಟ್ಟದಮನೆ ಗ್ರಾಮದ ಶೈನಿಂಗ್ ಕುಮಾರ್ ಆಲಿಯಾಸ್ ಶೈನಿ, ಅಣಜೂರು ಗ್ರಾಮದ ಅಶ್ರಫ್ ಆಲಿಯಾಸ್ ಹಸರಬ್, ಜನ್ನಾಪುರ ಗ್ರಾಮದ ಉಮೇಶ್ ಬಂಧಿತರು.ಈ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಟ್ಟದಮನೆ ಮೂಲದ ಶೈನಿಂಗ್ ಕುಮಾರ್ ಎಂಬಾತ ಕಾಫಿ ವ್ಯಾಪಾರಿಯಾಗಿದ್ದು, ದರೋಡೆ ನಡೆದ ಅನಂತ ಹೆಬ್ಬಾರ್ ಅವರ ಮನೆ ಯಿಂದ ಕಾಫಿ ಖರೀದಿಸುತ್ತಿದ್ದ, ಆತನೇ ಈ ಮನೆಯನ್ನು ದರೋಡೆಗೆ ಟಾರ್ಗೆಟ್ ಮಾಡಿ ಉಳಿದವರನ್ನು ಒಟ್ಟು ಸೇರಿಸಿ ಈ ಕೃತ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ.ಇವರೆಲ್ಲರೂ ದರೋಡೆ ಮಾಡುವ ಹಿಂದಿನ ದಿನ ಕೊಟ್ಟಿಗೆಹಾರದ ಅನಿಲ್ ಲಾಡ್ಜ್‌ನಲ್ಲಿ ತಂಗಿದ್ದರು ಎನ್ನಲಾಗಿದೆ. ಇವರೆಲ್ಲಾ ಇಸ್ಪೀಟ್ ಆಟದ ಗ್ಯಾಂಗ್‌ನಲ್ಲಿ ಪರಸ್ಪರ ಪರಿಚಯಸ್ಥರು ಎಂದು ತಿಳಿದು ಬಂದಿದೆ. ದರೋಡೆ ನಡೆದ ದಿನ ಆರೋಪಿ ತಪ್ಪಿಸಿಕೊಳ್ಳುವಾಗ ಕತ್ತಲೆಯಲ್ಲಿ ದಾರಿ ತಪ್ಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಪೊಲೀಸರ ಅತಿಥಿ ಯಾಗಿದ್ದ. ಉಳಿದವರು ದರೋಡೆ ಮಾಡಿ ಬೇರೆ ಬೇರೆ ದಿಕ್ಕಿಗೆ ತೆರಳಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬೊಬ್ಬರೇ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಅನಂತರಾಮ್ ಎಂಬುವವರ ಮನೆಗೆ ನುಗ್ಗಿದ್ದ ದರೋಡೆಕೋರರು ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ, ಮನೆಯವರಿಗೆಲ್ಲಾ ಹೆದರಿಸಿ, ತಡೆಯಲು ಬಂದ ಶ್ರೀನಿವಾಸ ಮೂರ್ತಿ ಎಂಬ ಕೆಲಸಗಾರರಿಗೆ ಕತ್ತಿ, ಚಾಕುವಿನಿಂದ ಹಲ್ಲೆ ಮಾಡಿ ಮಾರಣಾಂತಿಕಗಾಯ ಮಾಡಿ, ಮನೆಯಲ್ಲಿದ್ದ ಟಿ.ವಿ.ಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೆ, ಗಾರ್ಡೇಜ್ ಬೀರುವಿನಲ್ಲಿದ್ದ 5,25,000 ರು. ನಗದು ಮತ್ತು 1,25,000 ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ದರೋಡೆ ಮಾಡಿದ್ದರು.ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಂ ಆಮಟೆ ಅವರು ಪ್ರಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶೀಘ್ರವಾಗಿ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚನೆಗಳನ್ನು ನೀಡಿದ್ದರು.

Share this article