ಕಪ್ಪತ್ತಗುಡ್ಡದ ಕಡಕೋಳ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಬೆಂಕಿ: 100 ಹೆಕ್ಟೇರ್ ಅರಣ್ಯ ಆಹುತಿ!

KannadaprabhaNewsNetwork |  
Published : Feb 27, 2025, 02:04 AM ISTUpdated : Feb 27, 2025, 04:40 AM IST
ಪೋಟೊ-೨೬ ಎಸ್.ಎಚ್.ಟಿ. ೧ಕೆ- ಬೆಂಕಿಯ ಕೆನ್ನಾಲಿಗೆಗೆ ಕಪ್ಪತ್ತಗುಡ್ಡ ಸುಟ್ಟು ಕರಕಲಾಗಿರುವುದು. ೨ಕೆ- ಕಪ್ಪತ್ತಗುಡ್ಡದ ಶೆರಗಿನಲ್ಲಿರುವ ನೀಲವ್ವ ತಿಪ್ಪಣ್ಣ ಕೊಂಚಿಗೇರಿ ಅವರ ಗೋಡಂಬಿ ಬೆಳೆಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿರುವುದು. | Kannada Prabha

ಸಾರಾಂಶ

ಬೆಂಕಿಯಿಂದಾಗಿ ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ನೀಲವ್ವ ತಿಪ್ಪಣ್ಣ ಕೊಂಚಿಗೇರಿ ಎಂಬುವರಿಗೆ ಸೇರಿದ ಗೋಡಂಬಿ ತೋಟಕ್ಕೂ ಬೆಂಕಿ ತಗುಲಿ ೮ ವರ್ಷದಿಂದ ಬೆಳೆಸಿದ್ದ ಬೆಳೆ ಸುಟ್ಟು ಕರಕಲಾಗಿದೆ.

ಶಿರಹಟ್ಟಿ:ಕಪ್ಪತ್ತಗುಡ್ಡದ ಕಡಕೋಳ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ ಸುಮಾರು 100 ಹೆಕ್ಟೇರಿಗೂ ಹೆಚ್ಚು ಪ್ರದೇಶಕ್ಕೆ ಬೆಂಕಿ ಆವರಿಸಿದ್ದು, ಅಪಾರ ಪ್ರಮಾಣದ ಔಷಧೀಯ ಸಸ್ಯಗಳು ಹಾಗೂ ಹುಲ್ಲುಗಾವಲು ಸುಟ್ಟು ಕರಕಲಾಗಿದೆ.

ಬುಧವಾರ ವಿಪರೀತ ಬಿರುಗಾಳಿ ಕಾಣಿಸಿಕೊಂಡಿದ್ದು, ಗಾಳಿಯ ವೇಗಕ್ಕೆ ಬೆಂಕಿ ನಿಯಂತ್ರಣ ಕಷ್ಟವಾಗಿದ್ದರಿಂದ ಅಪಾರ ಪ್ರಮಾಣದ ಅರಣ್ಯ ಸುಟ್ಟು ಕರಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಅರಣ್ಯ ಇಲಾಖೆ ಸಂಗಮೇಶ ನೀರಲಗಿ ಹಾಗೂ ಸಿಬ್ಬಂದಿಯ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯ ರಾತ್ರಿ ೯ ಗಂಟೆಯವರೆಗೂ ಮುಂದುವರೆದಿದೆ.

ಈ ಬೆಂಕಿಯಿಂದಾಗಿ ಕಪ್ಪತ್ತಗುಡ್ಡದ ಸೆರಗಿನಲ್ಲಿರುವ ನೀಲವ್ವ ತಿಪ್ಪಣ್ಣ ಕೊಂಚಿಗೇರಿ ಎಂಬುವರಿಗೆ ಸೇರಿದ ಗೋಡಂಬಿ ತೋಟಕ್ಕೂ ಬೆಂಕಿ ತಗುಲಿ ೮ ವರ್ಷದಿಂದ ಬೆಳೆಸಿದ್ದ ಬೆಳೆ ಸುಟ್ಟು ಕರಕಲಾಗಿದೆ. ಅಂದಾಜು 7 ಲಕ್ಷ ಖರ್ಚು ಮಾಡಿದ್ದು, ರೈತ ಮಹಿಳೆ ಈಗ ಕಂಗಾಲಾಗಿದ್ದಾಳೆ. ಹೀಗೆ ಪದೇ ಪದೇ ತಗಲುವ ಬೆಂಕಿಯ ರುದ್ರ ನರ್ತನಕ್ಕೆ ಗೋಡಂಬಿ ತೋಟ, ಲಿಂಬು ತೋಟ ಹಾಗೂ ಮಾವಿನ ತೋಟ ಸೇರಿದಂತೆ 70 ಕ್ಕೂ ಹೆಚ್ಚು ಎಕರೆ ಪ್ರದೇಶದ ರೈತರ ತೋಟದ ಬೆಳೆಗೆ ಧಕ್ಕೆಯಾಗಿದೆ.

ಕಪ್ಪತ್ತಗುಡ್ಡ ಗದಗ ಜಿಲ್ಲೆಯ ಶಿರಹಟ್ಟಿ ಮತ್ತು ಮುಂಡರಗಿ ತಾಲೂಕಿನ ಮಧ್ಯೆ ಹಬ್ಬಿದ್ದು, ವನ್ಯಜೀವಿ ಮತ್ತು ಅಮೂಲ್ಯ ವನಸ್ಪತಿಯ ತಪ್ಪಲು ಪ್ರದೇಶದಲ್ಲಿ ಪ್ರತಿ ವರ್ಷವೂ ಬೇಸಿಗೆ ಬಂತೆಂದರೆ ಇಲ್ಲಿ ಹಗಲು ರಾತ್ರಿ ಎನ್ನದೇ ಬೆಂಕಿ ಕಾಣಿಸುತ್ತದೆ. ಕಳೆದ ೨೦ ದಿನಗಳಲ್ಲಿ ಲೆಕ್ಕಕ್ಕೆ ಸಿಗದಷ್ಟು ಅರಣ್ಯ ಪ್ರದೇಶ ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದೆ. ಅಗ್ನಿ ಅವಘಡಗಳಿಂದ ನೂರಾರು ಜಾತಿಯ ವನಸ್ಪತಿ ಸಸ್ಯಗಳು, ಸರಿಸೃಪಗಳು ಬೆಂದು ಕರಕಲಾಗಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ವಿವರಿಸಿದ್ದಾರೆ.

ಸಿಬ್ಬಂದಿ ಕೊರತೆ:

ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಬೇಸಿಗೆ ಸಮಯದಲ್ಲಿ ಹೆಚ್ಚುವರಿ ಸಿಬ್ಬಂದಿ ಹಾಗೂ ಬೆಂಕಿ ನಂದಿಸಲು ಆಧುನಿಕ ಸಲಕರಣೆ ನೀಡಬೇಕು ಎಂದು ಇಲಾಖೆ ಸಿಬ್ಬಂದಿಯೊಬ್ಬರು ಕನ್ನಡಪ್ರಭ ಪತ್ರಿಕೆಯೊಂದಿಗೆ ನೋವನ್ನು ಹಂಚಿಕೊಂಡಿದ್ದು, ತಾಲೂಕು ಮಟ್ಟದ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಅಮೂಲ್ಯ ವನಸ್ಪತಿಗಳಿಗೆ ಹೆಸರುವಾಸಿಯಾದ ಕಪ್ಪತ್ತಗುಡ್ಡ ರಕ್ಷಣೆಗೆ ಹೆಚ್ಚು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗುಡ್ಡಕ್ಕೆ ಹೊಂದಿಕೊಂಡಿರುವ ರೈತರ ಗೋಡಂಬಿ ತೋಟದ ಬೆಳೆಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ರೈತರು ದೂರವಾಣಿ ಕರೆ ಮಾಡಿದರೆ ಯಾವುದೇ ರೀತಿಯ ಸ್ಪಂದನೆ ಮಾಡದೇ ಬೇಜವಾಬ್ದಾರಿ ತೋರಿದ್ದು, ತೋಟಗಾರಿಕೆ ಇಲಾಖೆಯವರೇ ಗೋಡಂಬಿ ಬೆಳೆಯಲು ಸಸಿ ನೀಡಿದ್ದು, ಫಸಲು ಕೈಗೆ ಬರುವಷ್ಟರಲ್ಲಿ ಬೆಳೆ ಸುಟ್ಟು ಕರಕಲಾಗಿದ್ದು, ಸೂಕ್ತ ಪರಿಹಾರ ಕೊಡಿಸಬೇಕು ಎಂದು ರೈತ ತಿಪ್ಪಣ್ಣ ಕೊಂಚಿಗೇರಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮರಥ ಹೊರತರುವ ಮುಹೂರ್ತ, ಜಾತ್ರೆಗೆ ಕ್ಷಣಗಣನೆ
ಮಧ್ಯಪ್ರಾಚ್ಯ ಯುದ್ಧ ಬೆನ್ನಿಗೇ ಕೈಸುಡುತ್ತಿದೆ ಮೊಬೈಲ್‌ ಫೋನ್‌ ದರ!