ನೀಲಗಿರಿ ಪ್ಲಾಂಟೇಷನ್‌ಗೆ ಬೆಂಕಿ, ವೃಕ್ಷಗಳಿಗೆ ಹಾನಿ

KannadaprabhaNewsNetwork | Published : Feb 27, 2025 12:33 AM

ಸಾರಾಂಶ

ತಾಲೂಕಿನ ಬೆಂಕಿಕೆರೆ ಕಣಿವೆಯ ನೀಲಗಿರಿ ಪ್ಲಾಂಟೇಷನ್‌ಗೆ ಬೆಂಕಿಬಿದ್ದು ಭಾರಿ ಪ್ರಮಾಣದ ನೀಲಗಿರಿ ಮತ್ತು ತ್ಯಾಗ, ಅಕೇಶಿಯಾ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ.

- ಚನ್ನಗಿರಿ- ಹೊಳಲ್ಕೆರೆ ಮಾರ್ಗದ ಬೆಂಕಿಕೆರೆ ಕಣಿವೆ ಬಳಿ ಘಟನೆ - - - ಚನ್ನಗಿರಿ: ತಾಲೂಕಿನ ಬೆಂಕಿಕೆರೆ ಕಣಿವೆಯ ನೀಲಗಿರಿ ಪ್ಲಾಂಟೇಷನ್‌ಗೆ ಬೆಂಕಿಬಿದ್ದು ಭಾರಿ ಪ್ರಮಾಣದ ನೀಲಗಿರಿ ಮತ್ತು ತ್ಯಾಗ, ಅಕೇಶಿಯಾ ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿವೆ. ಈ ಪ್ರದೇಶವು ಚನ್ನಗಿರಿ ವಲಯ ಅರಣ್ಯ ಪ್ರದೇಶಕ್ಕೆ ಸೇರಿದ್ದು, ಪಟ್ಟಣದಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ-13ರಲ್ಲಿನ ಚನ್ನಗಿರಿ- ಹೊಳಲ್ಕೆರೆಗೆ ಹೋರುವ ರಸ್ತೆಯ ಅಕ್ಕಪಕ್ಕದ ಅರಣ್ಯಪ್ರದೇಶ ಇದಾಗಿದೆ. ಮೂಡಣ ಗಾಳಿ ಬೀಸುತ್ತಿರುವ ಮಧ್ಯೆ ಈಗ ಬೆಂಕಿಬಿದ್ದ ಹಿನ್ನೆಲೆ ಅಕ್ಕಪಕ್ಕದ ಹೊನ್ನನಾಯ್ಕನಹಳ್ಳಿ, ನಾರಶೆಟ್ಟಿಹಳ್ಳಿ ಜನರಲ್ಲಿ ಗ್ರಾಮಕ್ಕೂ ಬೆಂಕಿ ಆವರಿಸುವ ಆತಂಕ ಎದುರಾಗಿದೆ.

ನಾರಶೆಟ್ಟಿಹಳ್ಳಿ ಗ್ರಾಮದ ಶಂಕರಪ್ಪ, ತಿಪ್ಪೇಶಪ್ಪ ಅರಣ್ಯಕ್ಕೆ ಬೆಂಕಿ ಬಿದ್ದಿರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದರೂ, ಬೆಂಕಿ ನಂದಿಸುವಲ್ಲಿ ಇಲಾಖೆಯಿಂದ ಯಾವುದೇ ತುರ್ತು ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಈ ಅರಣ್ಯ ಪ್ರದೇಶಕ್ಕೆ ಬಿದ್ದಿರುವ ಬೆಂಕಿಯ ಹೊಗೆಯು ರಾಷ್ಟ್ರೀಯ ಹೆದ್ದಾರಿ- 13ರಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಕೊಂಚ ಕಿರಿಕಿರಿಯಾಗಿದೆ. ಬೆಂಕಿಯ ಕಿಡಿ ಮತ್ತು ಹೊಗೆ ಆವರಿಸಿಕೊಳ್ಳುತ್ತಿರುವುದು ಚಾಲಕರಿಗೆ ಸಮಸ್ಯೆಯಾಗಿಸಿದೆ.

ನಿರಂತರ ಶ್ರಮ:

ಬೆಂಕಿಕೆರೆ ಕಣಿವೆಯ ನೀಲಗಿರಿ ಪ್ಲಾಂಟೇಷನ್‌ಗೆ ಬೆಂಕಿಬಿದ್ದಿದೆ. ಈ ಬೆಂಕಿಯನ್ನು ನಂದಿಸಲು ಇಲಾಖೆಯ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸೇರಿಕೊಂಡು ಬೆಂಕಿ ನಂದಿಸುತ್ತಿದ್ದೇವೆ. ಮಂಗಳವಾರ ರಾತ್ರಿಯಿಂದ ಈ ಕಣಿವೆ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿಯಿಂದಲೇ ಬೆಂಕಿಯನ್ನು ನಂದಿಸುವ ಕಾರ್ಯ ಪ್ರಾರಂಭಿಸಲಾಗಿದೆ. ಮೂಡಣ ಗಾಳಿ ಜೋರಾಗಿ ಬೀಸುತ್ತಿದೆ. ಇದರಿಂದಾಗಿ ಬೆಂಕಿ ನಂದಿಸಲು ಅಡ್ಡಿಯಾಗಿದ್ದು, ನಿಯಂತ್ರಣ ಕಾರ್ಯ ಮುಂದುವರಿದಿದೆ ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್.ಶ್ವೇತಾ ತಿಳಿಸಿದ್ದಾರೆ.

- - - -26ಕೆಸಿಎನ್ಜಿ1, 2:

ಬೆಂಕಿಕೆರೆ ಕಣಿವೆಯ ನೀಲಗಿರಿ ಪ್ಲಾಂಟೇಷನ್‌ಗೆ ಬೆಂಕಿ ಬಿದ್ದಿರುವುದು.

Share this article