ದಾಬಸ್‍ಪೇಟೆ: ಸೋಂಪುರ ಹೋಬಳಿ ದಕ್ಷಿಣಕಾಶಿ ಶಿವಗಂಗೆ ಬೆಟ್ಟದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಭಾನುವಾರ ರಾತ್ರಿಯಿಂದಲೇ ಕಾಡ್ಗಿಚ್ಚು ವ್ಯಾಪಿಸುತ್ತಿದೆ. ಪ್ರಸಿದ್ಧ ಪ್ರವಾಸಿ ತಾಣ ಶಿವಗಂಗೆ ಬೆಟ್ಟದಲ್ಲಿ ಕಾಡ್ಗಿಚ್ಚು 20 ಎಕರೆಯಷ್ಟು ಅರಣ್ಯ ಪ್ರದೇಶ ಸುಟ್ಟು ಭಸ್ಮ ಮಾಡಿದೆ. ಒಳಕಲ್ಲು ತೀರ್ಥದವರೆಗೂ ಬೆಟ್ಟದ ಸುತ್ತಮುತ್ತಲೂ ಸಂಪೂರ್ಣ ಬೆಂಕಿ ಆವರಿಸಿ ಆತಂಕ ಸೃಷ್ಟಿಸಿದೆ.
ಬೆಟ್ಟದ ಸುತ್ತಮುತ್ತಲೂ ಬೆಂಕಿ ಹೊತ್ತಿಕೊಂಡಿರುವ ಜಾಗಕ್ಕೆ ಅಗ್ನಿಶಾಮಕ ವಾಹನ ಸೇರಿದಂತೆ ಯಾರೂ ಹೋಗಲು ಸಾಧ್ಯವಾಗದ ಕಾರಣ ನೋಡನೋಡುತ್ತಲೇ ಬೆಂಕಿ ಮುಗಿಲೆತ್ತರಕ್ಕೆ ಆವರಿಸಿತು. ಶಿವಗಂಗೆ ಬೆಟ್ಟ ಸಾಕಷ್ಟು ಎತ್ತರವಾಗಿದ್ದು, ಬೆಟ್ಟದ ತಪ್ಪಲಿನ ಜಾಗ ಯಾರೂ ಹೋಗಲಾಗದಷ್ಟು ಕಲ್ಲುಮುಳ್ಳುಗಳ ದುರ್ಗಮ ಹಾದಿ. ಹೀಗಾಗಿ ಬೆಂಕಿ ಬಿದ್ದ ಜಾಗಕ್ಕೆ ಹೋಗಿ ಬೆಂಕಿ ನಂದಿಸೋದು ಅಸಾಧ್ಯವಾಗಿದೆ. ಇದರಿಂದ ಶಿವಗಂಗೆ ಬೆಟ್ಟದಲ್ಲಿ ಬೆಂಕಿ ಹೊತ್ತಿಕೊಂಡರೂ ತಾನಾಗೇ ಆರಿ ಹೋಗಬೇಕೆ ಹೊರತು ಬೆಂಕಿ ನಂದಿಸಲಾಗುತ್ತಿಲ್ಲ. ಹೀಗಾಗಿ ಪ್ರತಿವರ್ಷವೂ ಬೇಸಿಗೆಯಲ್ಲಿ ಇಂತಹ ಅವಘಡಗಳು ಮರುಕಳಿಸುತ್ತಲೇ ಇರುತ್ತವೆ.
ಪೋಟೋ 5 * 6 :ಶಿವಗಂಗೆ ಬೆಟ್ಟಕ್ಕೆ ಬೆಂಕಿ ಬಿದ್ದಿರುವುದು.