ಗಂಗೊಳ್ಳಿ ಬಂದರಿನ ಬೋಟು ನಿಲುಗಡೆ ಸ್ಥಳದಲ್ಲಿ ಅಗ್ನಿ ಅವಘಡ

KannadaprabhaNewsNetwork | Updated : Nov 14 2023, 01:17 AM IST

ಸಾರಾಂಶ

ಸೋಮವಾರ ಬೆಳಗ್ಗೆ ಬಂದರು ಸಮೀಪದ ಬೋಟು ನಿಲುಗಡೆ ಸ್ಥಳದಲ್ಲಿ ಕಾಣಿಸಿಕೊಂಡ ಅಗ್ನಿಯ ಕಿಡಿ ಜ್ವಾಲೆಯಾಗಿ ಹರಡಿಕೊಂಡು ಸ್ಥಳದಲ್ಲಿ ಲಂಗರು ಹಾಕಿದ್ದ ಕೋಟ್ಯಂತರ ರು. ಮೌಲ್ಯದ ಎಂಟು ಬೋಟು, ಎರಡು ಮೀನುಗಾರಿಕಾ ದೋಣಿ ಹಾಗೂ ಬೈಕ್‌ಗಳನ್ನು ಆಹುತಿ ತೆಗೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರಇಲ್ಲಿಗೆ ಸಮೀಪದ ಗಂಗೊಳ್ಳಿಯ ಮೀನುಗಾರಿಕಾ ಬಂದರಿನ ಬೋಟು ನಿಲುಗಡೆಯ ಸ್ಥಳದಲ್ಲಿ ಸೋಮವಾರ ಬೆಳಗ್ಗೆ ಕಾಣಿಸಿಕೊಂಡ ಆಕಸ್ಮಿಕ ಅಗ್ನಿ ಅವಘಡದಲ್ಲಿ ಬೋಟು, ದೋಣಿ ಹಾಗೂ ಬೈಕ್ ಸೇರಿದಂತೆ ಕೋಟ್ಯಂತರ ರು. ಮೌಲ್ಯದ ವಸ್ತುಗಳು ಅಗ್ನಿ ಜ್ವಾಲೆಗೆ ಆಹುತಿಯಾಗಿವೆ.

ಸೋಮವಾರ ಬೆಳಗ್ಗೆ ಬಂದರು ಸಮೀಪದ ಬೋಟು ನಿಲುಗಡೆ ಸ್ಥಳದಲ್ಲಿ ಕಾಣಿಸಿಕೊಂಡ ಅಗ್ನಿಯ ಕಿಡಿ ಜ್ವಾಲೆಯಾಗಿ ಹರಡಿಕೊಂಡು ಸ್ಥಳದಲ್ಲಿ ಲಂಗರು ಹಾಕಿದ್ದ ಕೋಟ್ಯಂತರ ರು. ಮೌಲ್ಯದ ಎಂಟು ಬೋಟು, ಎರಡು ಮೀನುಗಾರಿಕಾ ದೋಣಿ ಹಾಗೂ ಬೈಕ್‌ಗಳನ್ನು ಆಹುತಿ ತೆಗೆದುಕೊಂಡಿದೆ.

ಕುಂದಾಪುರ ಹಾಗೂ ಬೈಂದೂರಿನಿಂದ ಆಗಮಿಸಿದ ಅಗ್ನಿಶಾಮಕ ಘಟಕದ ಎರಡು ತಂಡಗಳ ನಿರಂತರ ಕಾರ್ಯಾಚರಣೆಯಿಂದ ಮಧ್ಯಾಹ್ನ 12 ಗಂಟೆಯ ವೇಳೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಯಾವುದೇ ಪ್ರಾಣ ಹಾನಿ, ಗಾಯಗಳು ಸಂಭವಿಸಿಲ್ಲ.

ಮೀನುಗಾರಿಕೆಯ ಋತುವಾಗಿರುವುದರಿಂದ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿರುವ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನೂರಾರು ಮೀನುಗಾರಿಕಾ ಬೋಟು ಹಾಗೂ ದೋಣಿಗಳಿದ್ದು, ಅಗ್ನಿಶಾಮಕ ಸಿಬ್ಬಂದಿ ಸಮಯೋಚಿತ ಕಾರ್ಯಾಚರಣೆಯಿಂದ ಭಾರೀ ನಷ್ಟವಾಗುವುದು ತಪ್ಪಿದೆ.ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಸಿಪಿಐ ಸವಿತ್ರತೇಜ್, ಪಿಎಸ್ಐ ಹರೀಶ್ ಆರ್. ನಾಯ್ಕ್, ಅಪರಾಧ ವಿಭಾಗದ ಪಿಎಸ್ಐ ಬಸವರಾಜ್ ಕನಶೆಟ್ಟಿ, ಮೀನುಗಾರಿಕಾ ಇಲಾಖೆಯ ಅಧಿಕಾರಿ ಅಂಜನಾದೇವಿ ಮುಂತಾದವರು ಭೇಟಿ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಸರ್ಕಾರ ಸೂಕ್ತ‌ ಕ್ರಮ‌ಕೈಗೊಳ್ಳಲಿದೆ.। ಮಾಂಕಾಳ‌ ವೈದ್ಯ, ಮೀನುಗಾರಿಕಾ ಸಚಿವರು

---------

ಮೀನುಗಾರಿಕಾ‌ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ದುರಂತದ ಪೂರ್ಣ ಮಾಹಿತಿಯನ್ನು ಪಡೆದು, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ನೀಡಲಾಗುವುದು.। ರಶ್ಮಿ ಎಸ್.ಆರ್., ಉಪವಿಭಾಗಾಧಿಕಾರಿಗಳು ಕುಂದಾಪುರ

ದುರಂತ‌ ನಡೆದ ಸ್ಥಳಕ್ಕೆ ಸಚಿವ ಮಾಂಕಾಳ ವೈದ್ಯ ಭೇಟಿಕುಂದಾಪುರ: ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ವಾರ್ಫ್ನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ರಾಜ್ಯದ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ವೈದ್ಯ ಸೋಮವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮ್ಯಾಂಗನೀಸ್ ವಾರ್ಫ್ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು 8 ಮೀನುಗಾರಿಕೆ ಬೋಟುಗಳು ಹಾಗೂ ಒಂದು ದೋಣಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಕಲಾಗಿ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಘಟನೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಮಂಕಾಳ ವೈದ್ಯ, ಘಟನೆ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಸಂತ್ರಸ್ತರಿಗೆ ಸರ್ಕಾರದಿಂದ ಏನು ಕೊಡಲು ಸಾಧ್ಯವೋ ಅದನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಷ್ಟದ ಪರಿಸ್ಥಿತಿಯಲ್ಲಿ ಮೀನುಗಾರರ ಸಹಾಯ ಸಹಕಾರಕ್ಕೆ ಇಲಾಖೆ, ಸರಕಾರ ನಿಲ್ಲುತ್ತದೆ ಎಂದರು.

ಘಟನೆ ಬಗ್ಗೆ ಪೊಲೀಸ್ ಮತ್ತು ಮೀನುಗಾರಿಕೆ ಇಲಾಖೆ ಪ್ರತ್ಯೇಕ ತನಿಖೆ ನಡೆಸುತ್ತಿದೆ. ಸಾವಿರಾರು ಕೋಟಿ ಆಸ್ತಿ ಬಂದರು ಪ್ರದೇಶಗಳಲ್ಲಿ ಇರುವುದರಿಂದ ಬಂದರಿನಲ್ಲಿ ಇಲಾಖೆ ಅಥವಾ ವಿಮಾ ಕಂಪನಿ ಮೂಲಕ ಪಂಪ್ ಹೌಸ್ ನಿರ್ಮಾಣದ ಯೋಚನೆ ಮಾಡಿ ಕ್ರಮಕೈಗೊಳ್ಳಲಾಗುವುದು ಎಂದರು.

ಬಂದರು ಇಲಾಖೆ ಅಧಿಕಾರಿ ಗೌಸ್ ಅಲಿ, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್ ಆರ್., ಜಿಪಂ ಮಾಜಿ ಸದಸ್ಯೆ ಶೋಭಾ ಜಿ.ಪುತ್ರನ್, ಮೀನುಗಾರ ಮುಖಂಡರು ಇದ್ದರು.15 ಕೋಟಿಗೂ ಹೆಚ್ಚು ನಷ್ಟ: ಪರಿಹಾರಕ್ಕೆ ಆಗ್ರಹದೀಪಾವಳಿ ರಜೆಯ ಕಾರಣ ಬಂದರಿನಲ್ಲಿ ಮೀನುಗಾರರ ಸಂಖ್ಯೆ ಕಡಿಮೆ ಇತ್ತು. ಹಾಗಾಗಿ ಅಗ್ನಿ ನಂದಿಸಲು ಸಕಾಲದಲ್ಲಿ ನೆರವು ಸಿಗದೇ ಹಾನಿಯ ಪ್ರಮಾಣ ಹೆಚ್ಚಾಗಿದೆ. ಬೋಟ್‌ಗಳ ಸುರಕ್ಷತೆಗೆ ತೆಂಗಿನ ಗರಿಯ ಮೇಲ್ಛಾವಣಿ ಹಾಕಿರುವುದರಿಂದ ಬೋಟುಗಳು ಅಗ್ನಿಯ ಕೆನ್ನಾಲಿಗೆಗೆ ತುತ್ತಾಗಿವೆ. ಬೋಟ್‌ನ ಹೊರ ಆವರಣದ ಟೈರ್‌ಗಳು, ಟರ್ಪಾಲುಗಳು ಬೆಂಕಿಯ ಅಬ್ಬರವನ್ನು ಹೆಚ್ಚಿಸಿದೆ. ಬೋಟ್‌ನೊಳಗೆ ಅಪಾರ ಪ್ರಮಾಣದ ಮೀನಿನ ಬಲೆ ರಾಶಿ ಹಾಕಲಾಗಿದ್ದು, ಈ ದುರ್ಘಟನೆಯಿಂದ ಅಂದಾಜು 15 ಕೋಟಿ ರು.ಗೂ ಅಧಿಕ ನಷ್ಟವಾಗಿದೆ.

ಬಂದರು ಪ್ರದೇಶದ ನಿರ್ವಹಣೆ ಅಸಮರ್ಪಕವಾಗಿದ್ದು, ಬೇಕಾಬಿಟ್ಟಿ ಕಸದ ರಾಶಿ, ಒಣಗಿದ ಹುಲ್ಲುಗಳಿರುವುದರಿಂದ ಈ ಅಗ್ನಿ ಅವಘಡ ಮತ್ತಷ್ಟು ತೀವ್ರಗೊಂಡಿದೆ. ಅದೃಷ್ಟವಶಾತ್ ಪಕ್ಕದಲ್ಲೇ ಪಂಚಗಂಗಾವಳಿ ನದಿ ಹರಿಯುತ್ತಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಿಂದಲೇ ನೀರು ಪಂಪ್ ಮಾಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಕುಂದಾಪುರ, ಬೈಂದೂರು, ಉಡುಪಿ, ಮಲ್ಪೆಯಿಂದ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮೀನುಗಾರರು ನೆರವಾದರು.

ಪರಿಸರದಲ್ಲಿದ್ದ ಸಣ್ಣಪುಟ್ಟ ನಾಡ ದೋಣಿಗಳಿಗೂ ಹಾನಿಯಾಗಿದೆ. ಸರ್ಕಾರ ಪರಿಹಾರ ನೀಡಬೇಕು ತಮ್ಮ ನೆರವಿಗೆ ಬರಬೇಕು ಎನ್ನುವುದು ಮೀನುಗಾರರ ಬೇಡಿಕೆಯಾಗಿದೆ.

Share this article