ಅಗ್ನಿಶಾಮಕ ಇಲಾಖೆಯಿಂದ ಬಿಎಂಸಿಆರ್‌ಸಿಯಲ್ಲಿ ಜಾಗೃತಿ ಕಾರ್ಯಕ್ರಮ
ಅಗ್ನಿ ಅವಘಡ ತಡೆಗಟ್ಟುವಿಕೆ ವೇಳೆ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಜಾಗೃತಿ ಮೂಡಿಸುವ ಕುರಿತು ನಗರದ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಆವರಣದಲ್ಲಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಅಣಕು ಪ್ರದರ್ಶನ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಬಿಮ್ಸ್ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ವತಿಯಿಂದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ತಡೆಗಟ್ಟುವಿಕೆಯಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಜವಾಬ್ದಾರಿಗಳು ಹಾಗೂ ಜಾಗೃತಿ ಮೂಡಿಸುವ ಕುರಿತು ಅಣಕು ಪ್ರದರ್ಶನದಲ್ಲಿ ವೈದ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಮನವರಿಕೆ ಮಾಡಲಾಯಿತು.ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಮಾತನಾಡಿ, ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ತುರ್ತು ಪರಿಸ್ಥಿತಿ ಸಂದರ್ಭ ಬಂದಾಗ ಆಸ್ಪತ್ರೆಯ ವೈದ್ಯಾಧಿಕಾರಿಗಳು, ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಒಂದೆಡೆ ಸೇರಲು ಧ್ವನಿವರ್ಧಕ ಅಳವಡಿಸಬೇಕು ಎಂದು ಬಿಮ್ಸ್ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಆಸ್ಪತ್ರೆಗಳಲ್ಲಿ ಅಗ್ನಿ ಅವಘಡ ಸಂಭವಿಸಿದಲ್ಲಿ ಜಾಗರೂಕರಾಗಿರಬೇಕು. ಬೆಂಕಿ ನಂದಿಸುವ ಸಾಧನಗಳನ್ನು ಸುವ್ಯವಸ್ಥೆಯಲ್ಲಿ ಇಟ್ಟುಕೊಳ್ಳಬೇಕು. ಅಗ್ನಿಶಾಮಕ ದಳದವರು 24 ಗಂಟೆಯೂ ಸೇವೆ ನೀಡುತ್ತಾರೆ. ಜನರೂ ಜಾಗ್ರತರಾಗಿರಬೇಕು ಎಂದು ಹೇಳಿದರು.
ಇದೇ ಸಂದರ್ಭ ವಿವಿಧ ಬೆಂಕಿ ಆರಿಸುವ ಸಾಧನಗಳನ್ನು ಬಳಸಿ ಬೆಂಕಿ ನಂದಿಸುವ ಕಾರ್ಯದ ಅಣಕು ಪ್ರದರ್ಶಿಸಲಾಯಿತು.
ಅಣಕು ಪ್ರದರ್ಶನದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದಲ್ಲಿ ಬಳಸಬಹುದಾದ ಬೆಂಕಿ ನಂದಿಸುವ ಸಾಧನಗಳು, ಅಗ್ನಿ ಸಂಭವಿಸಿದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸುವುದು, ಪ್ರಥಮ ಚಿಕಿತ್ಸೆ ಹಾಗೂ ಇತರ ಕ್ರಮಗಳ ಕುರಿತು ಪರಿಪೂರ್ಣ ಮಾಹಿತಿ ನೀಡಲಾಯಿತು.