ಮುಂಡಗೋಡದಲ್ಲಿ ಉದ್ಘಾಟನೆಗೆ ಅಗ್ನಿಶಾಮಕ ಠಾಣೆ ಸಿದ್ಧ

KannadaprabhaNewsNetwork |  
Published : Nov 23, 2024, 12:32 AM IST
ಮುಂಡಗೋಡದಲ್ಲಿ ನಿರ್ಮಾಣಗೊಂಡಿರುವ ಅಗ್ನಿಶಾಮಕದ ದಳದ ನೂತನ ಕಟ್ಟಡ. | Kannada Prabha

ಸಾರಾಂಶ

ಸ್ವಂತ ಕಟ್ಟಡ ಇಲ್ಲದ ಕಾರಣದಿಂದ ಸದ್ಯ ಒಂದೇ ಒಂದು ಅಗ್ನಿಶಾಮಕ ವಾಹನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ನಿರ್ಮಾಣ ಮಡಲಾಗಿರುವ ಠಾಣೆಯಲ್ಲಿ ಮೂರು ಅಗ್ನಿಶಾಮಕ ವಾಹನ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂತೋಷ ದೈವಜ್ಞ

ಮುಂಡಗೋಡ: ಸುಮಾರು ₹೩ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಟ್ಟಣದ ನೂತನ ಅಗ್ನಿಶಾಮಕ ಠಾಣೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಕಾಯುತ್ತಿದೆ. ಕೆಲವರ್ಷಗಳ ಹಿಂದೆ ತಾಲೂಕಿನ ಯಾವುದೇ ಮೂಲೆಯಲ್ಲಿ ಅಗ್ನಿ ಅನಾಹುತ ನಡೆದರೂ ಶಿರಸಿ, ಹುಬ್ಬಳ್ಳಿ ಹಾನಗಲ್ಲ ತಾಲೂಕಿಗೆ ಮಾಹಿತಿ ನೀಡಿ ಅಗ್ನಿಶಾಮಕ ವಾಹನ ಕರೆಸಬೇಕಾಗಿತ್ತು. ಆ ವಾಹನ ಬರುವಷ್ಟರಲ್ಲಿ ಬೆಂಕಿ ಸಂಪೂರ್ಣ ವ್ಯಾಪಿಸಿ ಹೆಚ್ಚು ಅನಾಹುತ ಸಂಭವಿಸುತ್ತಿತ್ತು.

ಹೀಗಾಗಿ ಹಲವು ವರ್ಷಗಳಿಂದ ಪ್ರತ್ಯೇಕ ಅಗ್ನಿಶಾಮಕ ಠಾಣೆ ಬೇಕೆಂಬ ಬೇಡಿಕೆ ಹೆಚ್ಚಾದ ಹಿನ್ನೆಲೆ ೨೦೧೩ರಲ್ಲಿ ಅಂದಿನ ಶಾಸಕ ವಿ.ಎಸ್. ಪಾಟೀಲ ಅವರ ಇಚ್ಛಾಶಕ್ತಿ ಹಾಗೂ ಪ್ರಯತ್ನದ ಫಲವಾಗಿ ತಾಲೂಕಿಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆ ಮಂಜೂರು ಮಾಡಿಸಿದ್ದರು. ಇಲ್ಲಿಯ ಪಂಚಾಯತ್ ರಾಜ್ ಇಲಾಖೆಯ ಕಚೇರಿಯ ಆವರಣದಲ್ಲಿ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆ ನಿರ್ಮಿಸಿ, ಅಗ್ನಿಶಾಮಕ ವಾಹನ ನಿಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

೨೦೨೦ರಲ್ಲಿ ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿ(ಎಪಿಎಂಸಿ) ಆವರಣದಲ್ಲಿ ಪಪಂನಿಂದ ಕೊಳವೆ ಬಾವಿ ಕೊರೆದು ತಾತ್ಕಾಲಿಕ ಶೆಡ್ ನಿರ್ಮಿಸಿ ಅಗ್ನಿಶಾಮಕ ಠಾಣೆಯನ್ನು ಸ್ಥಳಾಂತರಿಸಲಾಯಿತು. ಆ ಬಳಿಕ ಶಾಸಕ ಶಿವರಾಮ ಹೆಬ್ಬಾರ ಸಚಿವರಾದ ವೇಳೆ ಅಗ್ನಿಶಾಮಕ ಠಾಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಎಪಿಎಂಸಿ ಆವರಣದಲ್ಲಿ ಲೀಜ್ ಮೂಲಕ ಜಾಗ ಪಡೆದು ಸುಮಾರು ₹೩ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಅನುದಾನ ನೀಡಿದ್ದರು. ಅದರಂತೆ ಈಗಾಗಲೇ ಸುಸಜ್ಜಿತವಾದ ಅಗ್ನಿಶಾಮಕ ಠಾಣೆ ಕಟ್ಟಡ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ.ಸ್ವಂತ ಕಟ್ಟಡ ಇಲ್ಲದ ಕಾರಣದಿಂದ ಸದ್ಯ ಒಂದೇ ಒಂದು ಅಗ್ನಿಶಾಮಕ ವಾಹನ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ನಿರ್ಮಾಣ ಮಡಲಾಗಿರುವ ಠಾಣೆಯಲ್ಲಿ ಮೂರು ಅಗ್ನಿಶಾಮಕ ವಾಹನ ನಿಲ್ಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಅದರಂತೆ ಹೆಚ್ಚುವರಿ ವಾಹನ ಮತ್ತು ಸಿಬ್ಬಂದಿಗಳನ್ನು ನೇಮಿಸಬೇಕೆಂಬುವುದು ಸಾರ್ವಜನಿಕರ ಆಗ್ರಹವಾಗಿದೆ.

ಶೀಘ್ರ ಉದ್ಘಾಟನೆ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸಚಿವರಿಂದ ದಿನಾಂಕ ನಿಗದಿಪಡಿಸಿ ಅಗತ್ಯ ಅಗ್ನಿಶಾಮಕ ವಾಹನ ಹಾಗೂ ಸಕಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಶೀಘ್ರವೇ ಅಗ್ನಿಶಾಮಕ ಠಾಣೆ ಕಟ್ಟಡ ಉದ್ಘಾಟನೆ ಮಾಡಲಾಗುವುದು ಎಂದು ಶಾಸಕ ಶಿವರಾಮ ಹೆಬ್ಬಾರ ತಿಳಿಸಿದರು.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ: ಅಗ್ನಿಶಾಮಕ ಠಾಣೆ ಇಲ್ಲದ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಈಗ ಅಗ್ನಿಶಾಮಕ ಠಾಣೆ ಸ್ವಂತ ಕಟ್ಟಡ ನಿರ್ಮಾಣವಾಗಿದ್ದು, ವಿಳಂಬ ಮಾಡದೆ ತಕ್ಷಣ ಉದ್ಘಾಟನೆ ಮಾಡಿ ಅಗತ್ಯ ಅಗ್ನಿಶಾಮಕ ವಾಹನ ಮತ್ತು ಸಿಬ್ಬಂದಿಯನ್ನು ನೇಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಶೇಟ್ ಆಗ್ರಹಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ