ಶಿವಮೊಗ್ಗದಲ್ಲಿ ಪಟಾಕಿ ಭರಾಟೆ ಜೋರು, ಹಣತೆ ವ್ಯಾಪಾರ ಡಲ್ಲು

KannadaprabhaNewsNetwork | Updated : Nov 13 2023, 01:16 AM IST

ಸಾರಾಂಶ

ಚೈನಾ ಬದಲು ಮೇಕ್ ಇನ್ ಇಂಡಿಯಾ ಪಟಾಕಿಗಳ ಕಾರುಬಾರು

(ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ) - - - ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಬರಗಾಲ ಇದ್ದರೂ ಜನರು ದೀಪಾವಳಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಹಿಂದೆ ಬಿದ್ದಿಲ್ಲ. ದೀಪಾವಳಿ ಹಿನ್ನೆಲೆ ನಗರದ ಗಾಂಧಿ ಬಜಾರ್‌ನಲ್ಲಿ ಭಾನುವಾರ ಜನಜಂಗುಳಿ ಕಂಡುಬಂತು. ಹಬ್ಬಕ್ಕೆ ಬೇಕಾದ ದಿನಸಿ ಪದಾರ್ಥ, ಪೂಜೆಗೆ ಹೂವು ಹಣ್ಣು ಮತ್ತು ಪಟಾಕಿ ಮಾರಾಟ ಭರ್ಜರಿಯಾಗಿ ನಡೆಯಿತು.

ಗಾಂಧಿ ಬಜಾರ್‌ ರಸ್ತೆಯಲ್ಲಿರುವ ಅಂಗಡಿಗಳು ಹಬ್ಬಕ್ಕಾಗಿಯೇ ಸಾಕಷ್ಟು ಸಾಮಗ್ರಿಗಳನ್ನು ಶೇಖರಿಸಿಟ್ಟು, ಕೊಡುಗೆ ಇರುವ ವಸ್ತುಗಳ ಬ್ಯಾನರ್‌ ಮಾಡಿಸಿ ಅಂಗಡಿ ಮುಂದೆ ಕಟ್ಟಿ, ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಹೂವಿನ ಬೆಲೆ ಗಗನಕ್ಕೇರಿದ್ದರೂ ದೀಪಾವಳಿ ಹಬ್ಬ ಆಚರಣೆ ಮಾಡಲೇ ಬೇಕಾಗಿರುವ ಕಾರಣ ಚೌಕಾಸಿ ಮಾಡಿಯಾದ್ರೂ ಮಹಿಳೆಯರು ಖರೀದಿ ಮಾಡಿದರು.

ಪಟಾಕಿ ವ್ಯಾಪಾರ ಜೋರು:

ದಸರಾದಲ್ಲಿ ಅಂಗಡಿಗೆ ಪೂಜೆ ಮಾಡದವರು ದೀಪಾವಳಿಗೆ ಮಾಡುತ್ತಾರೆ. ಹೀಗಾಗಿ ನಗರದಲ್ಲಿ ಎಲ್ಲಿ ನೋಡಿದರೂ ಅಂಗಡಿಗಳಿಗೆ ಹೂವು, ದೀಪಾಲಂಕಾರ ಮಾಡುವುದು ಕಂಡುಬಂತು. ಈ ಹಿಂದೆ ಸೈನ್ಸ್‌ ಮೈದಾನ, ನೆಹರು ಕ್ರೀಡಾಂಗಣದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಲಾಗಿತ್ತು. ಈ ವರ್ಷ ಪ್ರೀಡಂ ಪಾರ್ಕ್‌ನಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ತಾತ್ಕಾಲಿಕ ಶೆಡ್‌ ಹಾಕಿಕೊಂಡು 67 ಮಳಿಗೆಯಲ್ಲಿ ಪಟಾಕಿ ಮಾರಾಟಗಾರರು ವ್ಯಾಪಾರ ಮಾಡುತ್ತಿದ್ದಾರೆ. ಭಾನುವಾರ ರಜೆ ದಿನವಾಗಿದ್ದರಿಂದ ಪಟಾಕಿ ಖರೀದಿಗೆ ಜನ ಮುಗಿ ಬಿದ್ದಿದ್ದರು.

ಜನರ ಅಭಿರುಚಿಗೆ ತಕ್ಕಂತೆ ದೀಪಾವಳಿ ಹಬ್ಬದ ಪಟಾಕಿಗಳು ಕೂಡ ಬದಲಾಗುತ್ತಿವೆ. ಹಳೆಯ ದೀಪಾವಳಿಗೂ, ಈಗಿನ ದೀಪಾವಳಿಗೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ. ಮೊದಲ್ಲೆಲ್ಲಾ ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದ್ದ ಚೈನಾ ಪಟಾಕಿಗಳು ಇದೀಗ ಮಾಯವಾಗಿ ಮೇಕ್ ಇನ್ ಇಂಡಿಯಾ ಪಟಾಕಿಗಳು ಲಗ್ಗೆ ಇಟ್ಟಿವೆ. ಆಗಿನ ಕಾಲದ ಮತಾಪು, ಬೆಳ್ಳುಳ್ಳಿ ಪಟಾಕಿ, ಚಿನಕುರಳಿ ಪಟಾಕಿಗಳು, ಈಗ ಕೇವಲ ಹೆಸರುಗಳಷ್ಟೇ ಕಾಣಸಿಗುತ್ತದೆ. ಪಟಾಕಿ ಮಾರುಕಟ್ಟೆಯಲ್ಲಿ ಇವುಗಳನ್ನು ಹುಡುಕುವುದೇ ಕಷ್ಟವಾಗಿದ್ದು, ಈಗೇನಿದ್ದರೂ ಡಬಲ್ ಟ್ರ್ಯಾಕರ್, ತ್ರಿಬಲ್ ಟ್ರ್ಯಾಕ್ಟರ್, ಡಬಲ್ ಸೌಂಡ್, 7 ಸೌಂಡ್ ನಂತಹ ಇಂಗ್ಲಿಷ್ ನಾಮಧೇಯದ ಪಟಾಕಿಗಳದ್ದೇ ಕಾರುಬಾರಾಗಿದೆ. ಬಾಕ್ಸ್‌ ಗಾತ್ರಕ್ಕೆ ತಕ್ಕಂತೆ ಬೆಲೆ ನಿಗದಿ ಮಾಡಿದ್ದು, 250ರಿಂದ ಹಿಡಿದು 10 ಸಾವಿರ ರು.ವರೆಗೆ ಪಟಾಕಿ ಬಾಕ್ಸ್‌ಗಳು ಇವೆ. ಭಾನುವಾರ ಪ್ರೀಡಂ ಪಾರ್ಕ್‌ನಲ್ಲಿ ತಮ್ಮ ಮಕ್ಕಳೊಂದಿಗೆ ಬಂದಿದ್ದ ಪೋಷಕರು ಮಕ್ಕಳಿಗೆ ಬೇಕಾದ ಪಟಾಕಿಗಳ ಖರೀದಿ ಮಾಡಿದರು. ಮಕ್ಕಳು ನಾನಾ ಬಗೆಯ ಪಟಾಕಿಗಳನ್ನು ಖರೀದಿ ಮಾಡಿ ಖುಷಿಪಟ್ಟರು.

ಮಣ್ಣಿನ ಹಣತೆ ವ್ಯಾಪಾರ ಡಲ್‌:

ಮಣ್ಣಿನ ಹಣತೆಗಳ ಬದಲಾಗಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಹಣತೆಗಳು ಗ್ರಾಹಕರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಇದರಿಂದ ಕುಂಬಾರರ ಬದುಕು ದುಸ್ತರವಾಗಿದೆ. ನಗರದ ಕುಂಬಾರ ಸಮುದಾಯದ ಮಹಿಳೆಯರು ಹಣತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಮಣ್ಣಿನ ಹಣತೆಗಳು ತಯಾರಿಕೆಗೆ ಸಮಯ, ಜೇಡಿ ಮಣ್ಣು ಸೇರಿದಂತೆ ದೈಹಿಕ ಶ್ರಮ ಬೇಡುತ್ತಿದ್ದು, ಇದರಿಂದ ಕುಂಬಾರರು ಸಿದ್ಧ ಹಣತೆಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಆದರೆ, ಮಣ್ಣಿನ ಹಣತೆಯನ್ನು ಕೇಳುವವರೇ ಇಲ್ಲವಾಗಿದೆ.

ಶಿವಮೊಗ್ಗಕ್ಕೆ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಹಲವೆಡೆಯಿಂದ ಹತ್ತಾರು ಬಗೆಯ ಸಾಕಷ್ಟು ದೀಪಗಳು ಮಾರುಕಟ್ಟೆಗೆ ಬಂದಿವೆ. ಮೌಲ್ಡಿಂಗ್‌ನಲ್ಲಿ ಬೇಕಾದ ವಿನ್ಯಾಸ ನೀಡುವ ಅವರ ದೀಪಗಳ ಎದುರು ಕುಂಬಾರರು ಮಾಡುವ ಮಣ್ಣಿನ ಹಣತೆಗಳು ಮಂಕಾಗಿವೆ. ಒಂದು ಡಜನ್‌ ಮಣ್ಣಿನ ಹಣತೆಗೆ ₹35 ರಿಂದ ₹50 ರವರೆಗೆ ಮಾರಾಟ ಮಾಡಲಾಗುತ್ತಿದೆ. ಆಧುನಿಕ ಭರಾಟೆಯಲ್ಲಿ ಪಿಂಗಾಣಿ ಹಣತೆ ವ್ಯಾಪಾರಕ್ಕೆ ಇಂದಿಗೂ ಬೇಡಿಕೆ ಹೆಚ್ಚಿದೆ.

ದೀಪಾವಳಿಗಾಗಿ ವಿವಿಧೆಡೆಯಿಂದ ಹಣತೆಗಳನ್ನು ತರಿಸಲಾಗಿದೆ. ವಿವಿಧ ಆಕಾರಗಳಲ್ಲಿ ಲಭ್ಯವಿದ್ದು, ಗ್ರಾಹಕರು ಇವುಗಳನ್ನೇ ಖರೀದಿ ಮಾಡುತ್ತಿದ್ದಾರೆ. ಮಣ್ಣಿನ ಹಣತೆಗಳನ್ನು ಖರೀದಿಸುವವರು ಕಡಿಮೆ ಆಗಿದ್ದಾರೆ ಎನ್ನುತ್ತಾರೆ ನಾಗಲಕ್ಷ್ಮೀ ಕುಂಬಾರ.

ದೀಪಾವಳಿ 15 ದಿನ ಇರುವಾಗಲೇ ಹಬ್ಬಕ್ಕಾಗಿ ಕುಂಬಾರರ ಕುಟುಂಬ ಹಣತೆ ತಯಾರು ಮಾಡಲು ನಿರತಾಗುತ್ತಾರೆ. ತಯಾರಿಸಿದ ಹಣತೆಗಳನ್ನು ನಗರ ಪ್ರದೇಶಗಳಿಗೆ ಹೋಗಿ ಮಾರಾಟ ಮಾಡುತ್ತಾರೆ. ಪಿಒಪಿ ಹಣತೆಗಳು ಬಂದ ಮೇಲೆ ಗ್ರಾಹಕರು ಅನಿವಾರ್ಯವಾಗಿ ಅವುಗಳಿಗೆ ಮಾರುಹೋಗಿದ್ದಾರೆ. ಕುಂಬಾರಿಕೆಯಲ್ಲೂ ಯಂತ್ರಗಳ ಬಂದಿವೆ. ಆದರೆ, ಮಣ್ಣಿನ ಮಡಿಕೆಗಳಿಗೆ ಸರಿಯಾದ ಬೇಡಿಕೆ ಸಿಗದೇ ಕುಂಬಾರರು ಪರಡಾಡುವಂತಾಗಿದೆ. ಸೂಕ್ತ ಸ್ಥಳ ಇಲ್ಲದೇ ಕುಂಬಾರರ ಕಸುಬು ಮರಿಚೀಕೆ ಆಗುತ್ತಿದೆ ಎಂದು ಕುಂಬಾರರು ಮಣ್ಣಿನ ಬದುಕಿನ ಅಳಲು ತೋಡಿಕೊಂಡರು.

- - - ಬಾಕ್ಸ್‌ ಮಾರುಕಟ್ಟೆ, ಅಂಗಡಿ-ಮಳಿಗೆಗಳಲ್ಲಿ ಜನವೋಜನದೀಪಾವಳಿಯ ಹಬ್ಬದಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಜನಸ್ತೋಮವೇ ಕಂಡುಬಂತು.

ಬೆಳಕಿನ ಹಬ್ಬ ದೀಪಾವಳಿಗೆ ಜಿಲ್ಲೆಯ ಎಲ್ಲೆಡೆ ಮನೆಯ ಮುಂಭಾಗದಲ್ಲಿ ಕಟ್ಟಲಾಗುವ ಆಕಾಶಬುಟ್ಟಿ, ಪ್ಲಾಸ್ಟಿಕ್‌ ಮಾವಿನ ತೋರಣ ಮತ್ತು ಹಣತೆ ಮತ್ತಿತರ ವಸ್ತುಗಳ ಖರೀದಿಗೆ ಗೃಹಿಣಿಯರು ಆಸಕ್ತಿ ತೋರಿದ್ದರು.

ಈಗಾಗಲೇ ಮಾರುಕಟ್ಟೆಯಲ್ಲಿ ಆಕಾಶ ಬುಟ್ಟಿಗಳು ಝಗಮಗಿಸುತ್ತಿವೆ. ರಂಗುರಂಗಿನ ಆಕಾಶಬುಟ್ಟಿ ಗಾತ್ರಕ್ಕೆ ಅನುಗುಣವಾಗಿ ಆಕಾಶ ಬುಟ್ಟಿಗಳು ಮಾರಾಟಕ್ಕಿವೆ. ₹100 ರಿಂದ ₹2000 ವರೆಗೆ ಮಾರಾಟವಾಗುತ್ತಿವೆ. ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್‌ ಡಿಸೈನ್‌, ಗುಲಾಬ್‌ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿ ಖರೀದಿದಾರರನ್ನು ಆಕರ್ಷಿಸುತ್ತಿವೆ. ಇವುಗಳನ್ನು ದೆಹಲಿ, ಮುಂಬಯಿ ಮತ್ತು ಕೋಲ್ಕತ್ತಾ, ಮಹಾರಾಷ್ಟ್ರ ಪ್ರದೇಶಗಳಿಂದ ಈ ಆಕಾಶ ಬುಟ್ಟಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಫ್ಯಾನ್ಸಿ ಸ್ಟೋರ್‌ಗಳು ರಶ್‌:

ನಗರದ ಗಾಂಧಿ ಬಜಾರ್‌ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿನ ಬಟ್ಟೆ ಮತ್ತು ಫ್ಯಾನ್ಸಿ ಸ್ಟೋರ್‌ಗಳು ಫುಲ್‌ ರಶ್‌ ಆಗಿದ್ದವು. ತಮ್ಮ ಕುಟುಂಬಗಳಿಗೆ ಬಟ್ಟೆ ಸೇರಿ ಇತರ ವಸ್ತುಗಳನ್ನು ಸಾರ್ವಜನಿಕರು ಖರೀದಿಸಿದರು. ಅಷ್ಟೇ ಅಲ್ಲದೇ, ಕಿರಾಣಿ ಅಂಗಡಿಗಳಲ್ಲಿ ಪೂಜಾ ಸಾಮಗ್ರಿ ಮಾರಾಟ ಜೋರಾಗಿತ್ತು.

- - -

-12ಎಸ್‌ಎಂಜಿಕೆಪಿ02: ಶಿವಮೊಗ್ಗದ ಪ್ರೀಡಂ ಪಾರ್ಕ್‌ನಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಖರೀದಿ ಮಾಡುತ್ತಿರು ಜನರು. -12ಎಸ್‌ಎಂಜಿಕೆಪಿ03: ಶಿವಮೊಗ್ಗ ಗಾಂಧಿಬಜಾರ್‌ನಲ್ಲಿ ಭಾನುವಾರ ಹಬ್ಬದ ಖರೀದಿಗೆ ಮುಗಿ ಬಿದ್ದ ಜನ.

-12ಎಸ್‌ಎಂಜಿಕೆಪಿ04: ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಆಕಾಶ ಬುಟ್ಟಿ ಖರೀದಿಸುತ್ತಿರುವ ಮಹಿಳೆ.

Share this article