29ರಂದು ವಿಶ್ವಮಾನ ಧರ್ಮದ ಮೊದಲ ಮಹಾ ಅಧಿವೇಶನ: ನಾದಾನಂದನಾಥ ಸ್ವಾಮೀಜಿ

KannadaprabhaNewsNetwork |  
Published : Dec 19, 2025, 01:15 AM IST
27 | Kannada Prabha

ಸಾರಾಂಶ

ಯಾಚೇನಹಳ್ಳಿಯಲ್ಲಿ 1.50 ಕೋಟಿ ರು. ವೆಚ್ಚದಲ್ಲಿ ಕುವೆಂಪು ಸ್ಮಾರಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕುವೆಂಪು ಚಿತಾಭಸ್ಮ, 10 ಸಾವಿರ ಪುಸ್ತಕಗಳ ಗ್ರಂಥಾಲಯ, ಕುವೆಂಪು ಚಿತ್ರ ಗ್ಯಾಲರಿ, ಸಭಾಂಗಣ ನಿರ್ಮಿಸಲಾಗುತ್ತಿದೆ. 2 ತಿಂಗಳಲ್ಲಿ ಉದ್ಘಾಟನೆಯಾಗಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಷ್ಟ್ರಕವಿ ಕುವೆಂಪು ವಿಶ್ವಮಾನವ ಸಂದೇಶವನ್ನು ಪಸರಿಸಲು ಡಿ.29 ರಂದು ಜಿಲ್ಲೆಯ ಟಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಯಾಚೇನಹಳ್ಳಿಯಲ್ಲಿರುವ ಶ್ರೀರಾಮಕೃಷ್ಣ ಸೇವಾ ಕೇಂದ್ರದ ಶಾಲಾ ಆವರಣದಲ್ಲಿ ವಿಶ್ವಮಾನವ ಧರ್ಮದ ಮೊದಲ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಾದಾನಂದನಾಥ ಸ್ವಾಮೀಜಿ ತಿಳಿಸಿದರು.

ಜಗತ್ತು ಸಂಘರ್ಷಮಯ ವಾತಾವರಣದಿಂದ ಬಳಲುತ್ತಿದೆ. ನೆಮ್ಮದಿ ಇಲ್ಲವಾಗಿದೆ. ದೇವರು, ಧರ್ಮದ ಹೆಸರಿನಲ್ಲಿ ಜನಸಾಮಾನ್ಯರ ತಲೆಯಲ್ಲಿ ಮೌಢ್ಯಗಳನ್ನು ತುಂಬಿ ದಾರಿ ತಪ್ಪಿಸುವುದನ್ನು ತಪ್ಪಿಸಲು ವಿಶ್ವಮಾನವ ಧರ್ಮ ಪರ್ಯಾಯ ಮಾರ್ಗವಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕುವೆಂಪು ಅವರ ಪಂಚಸೂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ. ಈ ಪಂಚತತ್ವಗಳೇ ವಿಶ್ವಮಾನವ ಧರ್ಮದ ತಿರುಳು. ವೈಯಕ್ತಿಕ ದರ್ಶನಕ್ಕೆ ಈ ಸೂತ್ರಗಳು ಅಳವಡಿಕೆ ಅಗತ್ಯವಾಗಿದೆ. ಕೇಂದ್ರ ಸರ್ಕಾರ ನಡೆಸಲಿರುವ ಗಣತಿ ವೇಳೆ ವಿಶ್ವಮಾನವ ಧರ್ಮಕ್ಕೆ ಮಾನ್ಯತೆ ಕೊಡುವಂತೆ ಮನವಿ ಮಾಡಲು ಈ ಅಧಿವೇಶನ ನೆರವಾಗಲಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧ ಕಡೆ ನಡೆಯುವ ಸಮಾವೇಶಗಳಲ್ಲಿ ವಿಶ್ವಮಾನವ ಧರ್ಮದ ಮಾನ್ಯತೆಗಾಗಿ ಒತ್ತಾಯಿಸಲಿದ್ದೇವೆ ಎಂದರು.

ಯಾಚೇನಹಳ್ಳಿಯಲ್ಲಿ 1.50 ಕೋಟಿ ರು. ವೆಚ್ಚದಲ್ಲಿ ಕುವೆಂಪು ಸ್ಮಾರಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕುವೆಂಪು ಚಿತಾಭಸ್ಮ, 10 ಸಾವಿರ ಪುಸ್ತಕಗಳ ಗ್ರಂಥಾಲಯ, ಕುವೆಂಪು ಚಿತ್ರ ಗ್ಯಾಲರಿ, ಸಭಾಂಗಣ ನಿರ್ಮಿಸಲಾಗುತ್ತಿದೆ. 2 ತಿಂಗಳಲ್ಲಿ ಉದ್ಘಾಟನೆಯಾಗಲಿದೆ ಎಂದರು.

ಪತ್ರಕರ್ತ ಚಂದ್ರಶೇಖರ್ ದ.ಕೋ. ಹಳ್ಳಿ ಮಾತನಾಡಿ, ಡಿ.29ರ ಬೆಳಗ್ಗೆ 10ಕ್ಕೆ ಕುವೆಂಪು ಭಾವಚಿತ್ರ ಮೆರವಣಿಗೆ ನಡೆಯಲಿದೆ. ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಚಂದ್ರಶೇಖರ್ ನಂಗಲಿ ಭಾಗವಹಿಸಲಿದ್ದಾರೆ. ಕ್ರಿಶ್ಚಯನ್, ಇಸ್ಲಾಂ, ಬೌದ್ಧ ಧರ್ಮಗಳ ಗುರುಗಳನ್ನು ಆಹ್ವಾನಿಸಿದ್ದೇವೆ. ಜಾತ್ಯಾತೀತವಾಗಿ ಈ ಕಾರ್ಯಕ್ರಮ ರೂಪುಗೊಂಡಿದೆ. ನಾಡಿನಾದ್ಯಂತ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಪ್ರಗತಿಪರ ಚಿಂತಕ ವೈ.ಎನ್. ಶಂಕರೇಗೌಡ ಮಾತನಾಡಿ, ತೀರ್ಥಹಳ್ಳಿ ಬಿಟ್ಟರೆ ಯಾಚೇನಹಳ್ಳಿ ಕುವೆಂಪು ಚಿತಾಭಸ್ಮ ಇರುವ ಸ್ಥಳವಾಗಿದೆ. ಮಂತ್ರಮಾಂಗಲ್ಯ ಆಶಯದಲ್ಲಿ ಸರಳ ವಿವಾಹವಾಗುವವರಿಗೆ ಯಾಚೇನಹಳ್ಳಿ ಕೇಂದ್ರ ವೇದಿಕೆಯಾಗಲಿದೆ ಎಂದರು. ಮಂಡ್ಯ ವಿವಿ ಕನ್ನಡ ಉಪನ್ಯಾಸಕ ಉಮೇಶ್ ದಡಮಹಳ್ಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು