- ಡಿಸಿಎಂ ವಿಚಾರ ಪ್ರಸ್ತಾಪಿಸದಂತೆ ಸೂಚಿಸಿದರೂ ಪಾಲಿಸದ ಹಿರಿಯರನ್ನೇ ನಾವೂ ಅನುಕರಿಸ್ತೀವಿ: ಬಸವರಾಜ ಶಿವಂಗಂಗಾ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಮ್ಮ ಡಿ.ಕೆ.ಶಿವಕುಮಾರ ಸಾಹೇಬರನ್ನು ಮುಖ್ಯಮಂತ್ರಿ ಮಾಡಿ, 3 ಅಲ್ಲ, 8 ಅಲ್ಲ, 10 ಅಲ್ಲ 15 ಉಪ ಮುಖ್ಯಮಂತ್ರಿ ಹುದ್ದೆಗಳನ್ನಾದರೂ ಮಾಡಲಿ. ಜಾತಿಗೊಂದು ಉಪ ಮುಖ್ಯಮಂತ್ರಿ ಮಾಡಿದರೂ ಅದಕ್ಕೆ ನಮ್ಮ ವಿರೋಧವಿಲ್ಲ ಎಂದು ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ ಡಿಸಿಎಂ ಡಿ.ಕೆ.ಶಿವಕುಮಾರ ಪರ ಮತ್ತೊಮ್ಮೆ ಬಲವಾಗಿ ಬ್ಯಾಟ್ ಬೀಸಿದ್ದಾರೆ.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಆಧಾರದಲ್ಲಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹಿರಿಯರು ಬೇಡಿಕೆ ಇಡುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಈ ವಿಚಾರ ಮಾತನಾಡದಂತೆ ಹೇಳಿದರೂ ಹಿರಿಯರು ಪಾಲಿಸುತ್ತಿಲ್ಲ. ಹಾಗಾಗಿ, ನಾವೂ ಹಿರಿಯರನ್ನು ಅನುಸರಿಸಬೇಕಾಗುತ್ತದೆ ಎಂದರು.
ಈಗ ಪ್ರಸ್ತಾಪ ಸರಿಯಲ್ಲ:ಈಗಾಗಲೇ ಲೋಕಸಭೆ, ವಿಧಾನಸಭೆ ಚುನಾವಣೆಗಳೆಲ್ಲಾ ಮುಗಿದಿವೆ. ಈಗ ಉಪ ಮುಖ್ಯಮಂತ್ರಿ ಹುದ್ದೆ ವಿಚಾರ ಪ್ರಸ್ತಾಪವೂ ಸರಿಯಲ್ಲ. ಆಕಸ್ಮಾತ್ ಕೆಲ ಹಿರಿಯ ನಾಯಕರು ಉಪ ಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ. ಮೂರು ಡಿಸಿಎಂ ಹುದ್ದೆಗೆ ಬೇಡಿಕೆ ಇಡುತ್ತಿದ್ದಾರೆ. ಡಿ.ಕೆ.ಸಾಹೇಬರ ಸಂಘಟನೆ ಚತುರತೆ ಗುರುತಿಸಿ ಪಕ್ಷ ಉಪ ಮುಖ್ಯಮಂತ್ರಿಯಾಗಿ ಮಾಡಿದೆ ಹೊರತು, ಜಾತಿಯ ಆಧಾರದಲ್ಲಿ ಮಾಡಿಲ್ಲ. ಜಾತಿ ಆಧಾರದಲ್ಲೇ ಡಿಸಿಎಂ ಮಾಡುವುದಾದರೆ ಡಿ.ಕೆ. ಸಾಹೇಬರಿಗಷ್ಟೇ ಅಲ್ಲ, ಎಲ್ಲ ಸಮುದಾಯಗಳೂ ಕಾಂಗ್ರೆಸ್ಸಿಗೆ ಮತ ನೀಡಿವೆ. ಸಣ್ಣ ಜಾತಿಗಳು, ಮೈಕ್ರೋ ಕಮ್ಯುನಿಟಿಗಳೂ ಮತ ಹಾಕಿವೆ. ಅಂತಹ ಎಲ್ಲ ಜಾತಿಗೂ ಡಿಸಿಎಂ ಮಾಡಿ, ನ್ಯಾಯ ಕೊಡಲಿ. ಡಿಸಿಎಂ ಹುದ್ದೆಗಳ ಸೃಷ್ಟಿಸುವ ಮುನ್ನ ಡಿ.ಕೆ.ಶಿವಕುಮಾರ ಸಾಹೇಬರನ್ನು ಮೊದಲು ಸಿಎಂ ಮಾಡಬೇಕು. ಈ ಎಲ್ಲ ನಿರ್ಧಾರವನ್ನು ಪಕ್ಷದ ಹೈ ಕಮಾಂಡ್ ಕೈಗೊಳ್ಳಬೇಕು. ಹೈಕಮಾಂಡ್ ತೀರ್ಮಾನಕ್ಕೆ ನಾವೂ ಬದ್ಧರಿದ್ದೇವೆ ಎಂದು ಶಾಸಕ ಬಸವರಾಜ ಸ್ಪಷ್ಟಪಡಿಸಿದರು.
ಗ್ಯಾರಂಟಿಗಳು ತಾಯಂದಿರ ನೆಮ್ಮದಿಗಾಗಿ:ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ತೊಂದರೆಯೇನೂ ಆಗಿಲ್ಲ. ನಮ್ಮ ಚನ್ನಗಿರಿ ಕ್ಷೇತ್ರದಲ್ಲಿ ನಾವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ತಂದಿದ್ದು ನಾಡಿನ ತಾಯಂದಿರ ನೆಮ್ಮದಿಗಾಗಿ. ಕುಟುಂಬದ ಮಹಿಳೆಗೆ ಬರಬೇಕಾದ ಹಣ ಒಂದು ತಿಂಗಳು ಹೆಚ್ಚು ಕಡಿಮೆ ಆಗಿರಬಹುದಷ್ಟೇ. ಆದರೆ, ಗೃಹಲಕ್ಷ್ಮಿ ಹಣ ಖಂಡಿತಾ ತಾಯಂದಿರಿಗೆ ಆಸರೆ ಆಗಿದೆಯೆಂಬುದನ್ನು ಅಭಿಮಾನದಿಂದ ಹೇಳುತ್ತೇನೆ ಎಂದ ಅವರು, ನಮ್ಮ ಸರ್ಕಾರದ ಜನಪರ ಯೋಜನೆ, ಕಾರ್ಯಕ್ರಮಗಳನ್ನು ಜನರು ಮೆಚ್ಚಿದ್ದಾರೆ. ವಿಪಕ್ಷ ಬಿಜೆಪಿ ವಿನಾಕಾರಣ ಮಿಥ್ಯಾರೋಪ ಮಾಡುತ್ತಿದೆಯಷ್ಟೇ ಎಂದು ಅವರು ಕುಟುಕಿದರು.
- - -ಬಾಕ್ಸ್
ಬಿಜೆಪಿ ಪ್ರತಿಭಟನೆಗೆ ನಾವು ಉತ್ತರಿಸಬೇಕಿಲ್ಲಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯೆಂದು ಬಿಜೆಪಿಯವರು ಹೋರಾಟ ನಡೆಸುತ್ತಿದ್ದಾರೆ. ಹಿಂದೆ ರಾಜ್ಯದಲ್ಲಿ, ಕೇಂದ್ರದಲ್ಲಿ ಬಿಜೆಪಿ ಆಳ್ವಿಕೆ ಇದ್ದಾಗಲೂ ಬೆಲೆ ಏರಿಕೆ ಆಗಿತ್ತಲ್ಲವೇ? ಆಗಲೂ ಬಿಜೆಪಿಯವರು ತೈಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹೋರಾಟ ನಡೆಸಿದ್ದರೆ ಹೌದು ಎನ್ನಬಹುದಿತ್ತು. ಆಗ ಹೋರಾಟ, ಪ್ರತಿಭಟನೆ ಮಾಡದ ಬಿಜೆಪಿ ಈಗ ಮಾತನಾಡಿದರೆ ಅದಕ್ಕೆ ನಾವು ಉತ್ತರಿಸಬೇಕಾಗಿಲ್ಲ ಎಂದು ಶಿವಗಂಗಾ ಬಸವರಾಜ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
- - - -25ಕೆಡಿವಿಜಿ1, 2: ಬಸವರಾಜ ವಿ.ಶಿವಗಂಗಾ, ಕಾಂಗ್ರೆಸ್ ಶಾಸಕ, ಚನ್ನಗಿರಿ ಕ್ಷೇತ್ರ