ಮಲೆನಾಡಿನಲ್ಲಿ ಮೊದಲ ಮಳೆ; ಸಕಲೇಶಪುರದ ಹಲವೆಡೆ ಹಾನಿ

KannadaprabhaNewsNetwork |  
Published : Apr 21, 2024, 02:19 AM IST
20ಎಚ್ಎಸ್ಎನ್3 : ತಾಲೂಕಿನಲ್ಲಿ ಬಿರಡಹಳ್ಳಿ ಗ್ರಾಮದ ಚಂದ್ರುಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. | Kannada Prabha

ಸಾರಾಂಶ

ಸಕಲೇಶಪುರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬಿದ್ದಿರುವ ಮುಂಗಾರು ಮಳೆ, ಕಾಫಿ ಬೆಳೆಗಾರರ ಹರ್ಷಕ್ಕೆ ಎಣೆ ಇಲ್ಲದಂತೆ ಮಾಡಿದೆ.

ಮುಂಗಾರು ಮಳೆ । ಕಳೆದ ಮೂರು ದಿನಗಳಿಂದ ಸುರಿದ ವರ್ಷಧಾರೆ । ಕಾಫಿ ಬೆಳೆಗಾರರ ಹರ್ಷ । ತಂಪು ವಾತಾವರಣ

ಕನ್ನಡಪ್ರಭ ವಾರ್ತೆ ಸಕಲೇಶಪುರ

ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬಿದ್ದಿರುವ ಮುಂಗಾರು ಮಳೆ, ಕಾಫಿ ಬೆಳೆಗಾರರ ಹರ್ಷಕ್ಕೆ ಎಣೆ ಇಲ್ಲದಂತೆ ಮಾಡಿದೆ.

ಕಳೆದ ಬಾರಿಯ ವಾಡಿಕೆ ಮಳೆ ಕೊರತೆ, ಈ ಬಾರಿಯ ಅಧಿಕವಾದ ಉಷ್ಣಾಂಶದಿಂದಾಗಿ ಮಲೆನಾಡಿನಲ್ಲೂ ಬಿಸಿಲುನಾಡಿನ ಅನುಭವವಾಗುತ್ತಿತ್ತು. ಆದರೆ ಈಗ ಮಳೆಯಿಂದ ಜನರು ಉತ್ಸಾಹಿತರಾಗಿದ್ದಾರೆ. ಆದರೆ ಈ ನಡುವೆ ಹಲವೆಡೆ ಹಾನಿ ಸಂಭವಿಸಿದೆ.

ಅಧಿಕ ಉಷ್ಣಾಂಶಕ್ಕೆ ಸಿಲುಕಿ ಬಹುತೇಕ ಜಲಮೂಲಗಳು ಬರಿದಾಗಿದ್ದು ಕುಡಿಯುವ ನೀರಿಗೂ ಹಲವೆಡೆ ತತ್ವಾರ ಎದುರಾಗಿದ್ದು ಪಟ್ಟಣದಲ್ಲಿ ಮೂರು ದಿನಗಳಿಗೊಮ್ಮೆ ನೀರು ಬಿಡುವುದಾಗಿ ಕಳೆದ ಎರಡು ದಿನಗಳಿಂದ ಪುರಸಭೆ ಪ್ರಚಾರ ನಡೆಸುತ್ತಿದೆ. ತಾಲೂಕಿನ ಜೀವ ನದಿ ಹೇಮಾವತಿ ತನ್ನ ಹರಿವನ್ನು ನಿಲುಗಡೆ ಮಾಡಿದ ಮೇಲೆ ಕಾಫಿ ಬೆಳೆಗಾರರ ಹನಿ ನೀರಾವರಿಗೂ ನೀರಿಲ್ಲದೆ ಪರದಾಡುತಿದ್ದರು. ಹೂವು ಆರಳಲು ಹನಿ ನೀರಾವರಿ ಮಾಡಿದ್ದ ಬೆಳೆಗಾರರು ಆರಳಿದ ಹೂವು ಉಳಿಸಿಕೊಳ್ಳಲು ನೀರಿನ ಕೊರತೆ ಎದುರಾಗಿದ್ದರಿಂದ ಕೈಕೈ ಹಿಸುಕಿಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಇನ್ನೂ ಎತ್ತರದ ಹಾಗೂ ಕಲ್ಲು ಪ್ರದೇಶದಲ್ಲಿರುವ ಕಾಫಿ ಗಿಡಗಳು ಸುಡುವ ಬಿಸಿಲಿಗೆ ಸಿಲುಕಿ ಕರಕಲಾಗಿದ್ದು ಹತ್ತಾರು ವರ್ಷ ಸಾಕಿದ್ದ ಗಿಡಗಳ ಸರ್ವನಾಶ ಬೆಳೆಗಾರರ ಬೇಸರಕ್ಕೂ ಕಾರಣವಾಗಿತ್ತು. ಗುರುವಾರ ತಾಲೂಕಿನ ಹೆತ್ತೂರು, ಯಸಳೂರು ಭಾಗದಲ್ಲಿ ಸುರಿದರೆ, ಶುಕ್ರವಾರ ಬೆಳಗೋಡು ಹಾಗೂ ಕಸಬಾ, ಹಾನುಬಾಳ್ ಹೋಬಳಿಯಾದ್ಯಂತ ಸುರಿದಿದ್ದು ಈ ಎರಡು ದಿನಗಳಲ್ಲಿ ಸಂಜೆ ೭ ರಿಂದ ರಾತ್ರಿ ೧೨ ರ ವರೆಗೂ ತಾಲೂಕಿನ ಎಲ್ಲೆಡೆ ೧೦ ಮೀ.ಮೀ. ನಿಂದ ೫೦ ಮೀಟರ್‌ ವರೆಗೆ ಗುಡುಗು, ಮಿಂಚು, ಗಾಳಿ ಸಹಿತ ಮಳೆಯಾಗಿದ್ದರೆ ಮುಂದಿನ ಎರಡು ದಿನಗಳ ಕಾಲ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ಇರುವುದರಿಂದ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕೂಲ್ ಕೂಲ್:

ಕಳೆದ ಎರಡು ತಿಂಗಳಿನಿಂದ ಮಲೆನಾಡಿನಲ್ಲೂ ೩೦ ರಿಂದ ೩೮ ಡಿಗ್ರಿ ಉಷ್ಣಾಂಶ ಕಂಡು ಬಂದಿದ್ದರಿಂದ ಜನರು ಶೆಖೆ ತಾಳಲಾರದೆ ಮಧ್ಯಾಹ್ನದ ವೇಳೆ ಮನೆಯಿಂದ ಹೊರಬಾರದಂತಾಗಿದ್ದರು. ಎರಡು ದಿನಗಳ ಕಾಲ ಮಳೆಯಾಗಿದ್ದರಿಂದ ಶನಿವಾರ ತಾಲೂಕಿನಲ್ಲಿ ತಂಪು ವಾತಾವಾರಣ ಸೃಷ್ಟಿಯಾಗಿದ್ದು, ಪಟ್ಟಣದಲ್ಲಿ ಮಳೆಯ ಕುರಿತ ಮಾತುಗಳೇ ಕೇಳಿ ಬರುತ್ತಿರುವುದು ವಿಶೇಷವಾಗಿತ್ತು.

ಹಾನಿ:

ಮೊದಲ ಮಳೆ ತಾಲೂಕಿನ ಹಲವೆಡೆ ಹಾನಿ ಉಂಟು ಮಾಡಿದ್ದು ತಾಲೂಕಿನ ಬಿರುಡಹಳ್ಳಿ ಗ್ರಾಮದಲ್ಲಿ ಜಾಕೋಬ್ ಪೀಂಟೂ ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆ ಭಾಗಶಃ ಹಾನಿಗೊಂಡಿದೆ. ಇದೇ ಗ್ರಾಮದ ಚಂದ್ರು ಎಂಬುವವರ ಮನೆ ಮೇಲ್ಛಾವಣಿ ಸಂಪೂರ್ಣ ಹಾರಿಹೋಗಿದ್ದು ಇದರಿಂದಾಗಿ ರಾತ್ರಿ ಇಡೀ ಕುಟುಂಬ ಮತ್ತೊಬ್ಬರ ಮನೆಯಲ್ಲಿ ಕಳೆದಿದೆ.

ಸಲೀಂ ಎಂಬುವವರ ಮನೆಯ ಮೇಲೆ ಹಲಸಿನ ಮರದ ರಂಬೆ ಬಿದ್ದು ಹಾನಿಯಾಗಿದೆ. ಜನ್ನಾಪುರ ಗ್ರಾಮದಲ್ಲಿ ಮರ ವಿದ್ಯುತ್ ತಂತಿ ಸೇರಿದಂತೆ ಬೇಲೂರು-ಸಕಲೇಶಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಮೇಲೆ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿದರೆ, ಈ ಭಾಗದಲ್ಲಿ ರಾತ್ರಿ ಇಡೀ ವಿದ್ಯುತ್ ಕಡಿತವಾಗಿತ್ತು.

ಸಕಲೇಶಪುರ ತಾಲೂಕಿನಲ್ಲಿ ಬಿರಡಹಳ್ಳಿ ಗ್ರಾಮದ ಚಂದ್ರು ಎಂಬುವವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು