ಬಂಡೀಪುರದ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಹಾದು ಹೋಗುವ ರಸ್ತೆಯಲ್ಲಿ ಮಳೆ ಬೀಳುವ ದೃಶ್ಯ.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಿಸಿಲಿನ ಝಳ, ಸೆಖೆ ಅನುಭವದಿಂದ ತತ್ತರಿಸಿದ್ದ ಜನರಿಗೆ ಬುಧವಾರ ಸಂಜೆ 5 ಗಂಟೆಗೆ ವರ್ಷದ ಮೊದಲ ವರ್ಷಧಾರೆ ಸುರಿಯಿತು.ಚಾಮರಾಜನಗರ, ತಾಲೂಕಿನ ಕೊತ್ತಲವಾಡಿ, ವೆಂಕಟಯ್ಯನ ಛತ್ರ , ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಗುಂಡ್ಲುಪೇಟೆ ಸುತ್ತಮುತ್ತ ಮತ್ತು ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ವರ್ಷದ ಮೊದಲ ಮಳೆಯಾಯಿತು. ಮಲೆಮಹದೇಶ್ವರ ಬೆಟ್ಟಕ್ಕೆ ವರುಣನ ಕೃಪೆಯಿಂದ ಇಡೀ ಬೆಟ್ಟಕ್ಕೆ ವರುಣದೇವ ಜಲಾಭಿಷೇಕ ಮಾಡಿದಂತೆ ಭಾಸವಾಯಿತು. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಗಡಿಜಿಲ್ಲೆ ಜನರಿಗೆ ವರ್ಷದ ಮೊದಲ ಮಳೆ ಸಿಂಚನ ಸಂಭ್ರಮ ನೀಡಿದ್ದು ದಿಢೀರನೆ ಸುರಿದ ಮಳೆ ಪರಿಣಾಮ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರು ಪರದಾಡಿದರು.
ಗುಡುಗು- ಸಿಡಿಲಿನ ಆರ್ಭಟದೊಂದಿಗೆ ಮಳೆರಾಯ ಧರೆಗಿಳಿದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ದಿಢೀರ್ ಮಳೆ ಸುರಿದ ಪರಿಣಾಮ ಚಾಮರಾಜನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದರು. ಅರ್ಧ ತಾಸಿಗೂ ಅಧಿಕ ಸಮಯ ಪೂರ್ವ ಮುಂಗಾರು ಮಳೆ ಸುರಿದಿದೆ.
ಬಂಡೀಪುರದಲ್ಲಿ ಮಳೆ ಬಂತು ಮಳೆ!ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ಬುಧವಾರ ಮಧ್ಯಾಹ್ನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಳೆ ಬಿದ್ದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಹಾಗೂ ಬಂಡೀಪುರ ವಲಯದ ಗೋಪಾಲಸ್ವಾಮಿ ಬೆಟ್ಟದ ಅಲ್ಲಲ್ಲಿ ಮಳೆ ಬಿದ್ದಿದೆ. ಇದು ಇಲಾಖೆ ಸಿಬ್ಬಂದಿಗಳಲ್ಲಿ ಖುಷಿ ತಂದಿದೆ. ಯುಗಾದಿ ಹಬ್ಬದ ಸಮಯದಲ್ಲಿ ಮಳೆ ಬರುವುದು ಸರ್ವೆ ಸಾಮಾನ್ಯ. ಆದರೆ ತುಸು ಮುಂಚಿತವಾಗಿ ಬಿದ್ದಿರುವುದು ರೈತರಲ್ಲೂ ಸಂತಸ ತಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.