- ಆನಗೋಡು, ಹೆಬ್ಬಾಳ್, ಮಾಯಕೊಂಡ ಭಾಗದಲ್ಲಿ ತಂಪೆರೆದ ವರುಣ
ತಾಲೂಕಿನ ಆನಗೋಡು, ಹೆಬ್ಬಾಳ್, ಮಾಯಕೊಂಡ, ಹುಚ್ಚವ್ವನಹಳ್ಳಿ ಸುತ್ತಮುತ್ತ ಸಂಜೆ ದಿಢೀರನೇ ಜೋರು ಗಾಳಿ ಬೀಸಿ, ದಟ್ಟಮೋಡಗಳು ಆವರಿಸಿದವು. ಮಳೆಗಾಗಿ ಜನರು ಚಾತಕಪಕ್ಷಿಯಂತೆ ಕಾದಿದ್ದರು. ಮಳೆ ಮೋಡ ಕಂಡು ಪುಳಕಿತರಾಗಿದ್ದರು. ಸುಮಾರು 45-50 ನಿಮಿಷ ಕಾಲ ಜೋರು ಮಳೆಯಾಯಿತು.
ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಮಳೆಯಿಂದ ತಮ್ಮನ್ನು ರಕ್ಷಿಸಿಕೊಂಡರೆ, ತಿಂಗಳುಗಟ್ಟಲೇ ಮಳೆ ಇಲ್ಲದೇ ಬೇಸತ್ತಿದ್ದ ಜನರಂತೂ ಮಳೆಯಲ್ಲಿ ತಾವು ನೆನೆದು ಸಂಭ್ರಮಿಸಿದರು. ಮಕ್ಕಳು ಸಹ ನೆನೆದು ಮಳೆನೀರಿನಲ್ಲಿ ಕುಣಿದು ಕುಪ್ಪಳಿಸಿದರು.ಮಳೆಯಿಂದಾಗಿ ಸುತ್ತಮುತ್ತಲ ಪ್ರದೇಶದಲ್ಲಿ ತಂಗಾಳಿ ಬೀಸಿತು. ಮಳೆ ಹನಿಗಳು ಬಿದ್ದು ಹೊಮ್ಮಿದ ಮಣ್ಣಿನ ವಾಸನೆ ಎಲ್ಲೆಡೆ ಪಸರಿಸಿತು. ಕೆಲ ಗ್ರಾಮೀಣ ಭಾಗಗಳಲ್ಲಿ ಮಳೆಯಾಯಿತು. ಆದರೆ, ದಾವಣಗೆರೆ ನಗರದ ಕಡೆ ದಟ್ಟಮೋಡ ಆವರಿಸಿದರೂ, ಮಳೆಯಾಗಲಿಲ್ಲ.
ಭರಮಸಾಗರದ ಕಡೆಯೂ ಜೋರು ಮಳೆಯಾಗಿದೆ. ದಾವಣಗೆರೆ ನಗರ, ಇತರೆ ಭಾಗದಲ್ಲಿ ಬುಧವಾರ ರಾತ್ರಿಯಾದರೂ ಮಳೆಯಾಗಿ, ಜನರು ನೆಮ್ಮದಿಯ ನಿಟ್ಟಿಸಿರು ಬಿಡುವಂಥ ವಾತಾವರಣ ಮೂಡಲಿ ಎಂದು ಜನರು ಆಕಾಶದತ್ತ ಮುಖ ಮಾಡಿದ್ದು ಸುಳ್ಳಲ್ಲ.- - - -3ಕೆಡಿವಿಜಿ12, 13:
ದಾವಣಗೆರೆ ತಾಲೂಕು ಹೆಬ್ಬಾಳ್ ಗ್ರಾಮದಲ್ಲಿ ಬುಧವಾರ ಸಂಜೆ ಸುರಿದ ಮಳೆಯಿಂದಾಗಿ ವಾತಾವರಣ ತಂಪಾಗಿ, ರಸ್ತೆ, ನೆಲದಲ್ಲಿ ಮಳೆ ನೀರು ಹರಿಯುತ್ತಿರುವುದು.