ಕನ್ನಡಪ್ರಭ ವಾರ್ತೆ ಮಂಗಳೂರು
ಹಿರಿಯ ಹೃದ್ರೋಗ ತಜ್ಞ ಡಾ. ಪದ್ಮನಾಭ್ ಕಾಮತ್ ನೇತೃತ್ವದ ನುರಿತ ಹೃದ್ರೋಗ ತಜ್ಞರ ತಂಡವು ಈ ವೈದ್ಯಕೀಯ ಕಾರ್ಯ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಈ ಮೂಲಕ ಹೃದಯದ ಆರೈಕೆ ಮತ್ತು ಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.
ಏಯರ್ಟಿಕ್ ಸ್ಟೆನೋಸಿಸ್‌ನಿಂದ ಬಳಲುತ್ತಿದ್ದ 73 ವರ್ಷದ ರೋಗಿಯ ಮೇಲೆ ಕೆಎಂಸಿ ಆಸ್ಪತ್ರೆಯ ತಜ್ಞರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. ಕೇವಲ ಒಂದು ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿತ್ತು. ಶಸ್ತ್ರಚಿಕಿತ್ಸೆಯ ಮರುದಿನವೇ ರೋಗಿಯು ನಡೆಯಲು ಆರಂಭಿಸಿದ್ದು, ಮೂರನೇ ದಿನ ಡಿಸ್‌ಚಾರ್ಜ್ ಮಾಡಲಾಯಿತು.ಏಯರ್ಟಿಕ್ ಸ್ಟೆನೋಸಿಸ್ ಎಂಬುದು ಮಹಾಪಧಮನಿಯ ಕವಾಟದ ದುಃಸ್ಥಿತಿಯಾಗಿದ್ದು, ಸಾಮಾನ್ಯವಾಗಿ 70 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯು ಪದೇ ಪದೇ ಎದೆ ನೋವು ಮತ್ತು ತಲೆ ತಿರುಗುವಿಕೆಗೆ ಕಾರಣವಾಗುತ್ತದೆ. ಸಾಂಪ್ರದಾಯಿಕ ವಿಧಾನದ ಪ್ರಕಾರ ಈ ಸಮಸ್ಯೆಗೆ ಚಿಕಿತ್ಸೆ ಹೇಗಿರುತ್ತೆ ಅಂದರೆ, ಹೃದಯವನ್ನು ತೆರೆದು ಶಸ್ತ್ರಚಿಕಿತ್ಸೆಯ ಮೂಲಕ ಮಹಾಪಧಮನಿಯ ಕವಾಟವನ್ನು ಬದಲಿಸಬೇಕಾಗುತ್ತದೆ.
ಆದರೆ, ಟ್ರಾನ್ಸ್‌ಕ್ಯಾಥೆಟರ್ ಮಹಾಪಧಮನಿಯ ಕವಾಟ ಅಳವಡಿಕೆ ಪ್ರಕ್ರಿಯೆಯು ಇದಕ್ಕೆ ಪರ್ಯಾಯ ಮಾರ್ಗ. ಈ ವಿಧಾನದಲ್ಲಿ ಹೃದಯವನ್ನು ತೆರೆಯುವ ಬದಲು ತೊಡೆಸಂದಿ ಭಾಗದಲ್ಲಿ ಸಣ್ಣದಾಗಿ ಕೊಯ್ದು ಕವಾಟವನ್ನು ಬದಲಿಸಲಾಗುತ್ತದೆ.