ಬ್ಯಾಂಕಿನ ವ್ಯವಹಾರಗಳನ್ನು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ತಂತ್ರಜ್ಞಾನದಡಿ ಗಣಕೀಕರಣ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಪ್ರಸ್ತುತ ವರ್ಷದಲ್ಲಿ ಬ್ಯಾಂಕಿನ ೩೧ ಶಾಖೆಗಳಲ್ಲಿ ೧೦೮೩.೮೭ ಕೋಟಿ ರು. ಠೇವಣಿ ಹಾಗೂ ೧೦೧.೦೫ ಕೋಟಿ ರು. ಷೇರು ಬಂಡವಾಳ ಹೊಂದಿ, ೨೦೭೧,೩೬ ಕೋಟಿ ರು. ಕೃಷಿ ಮತ್ತು ಕೃಷಿಯೇತರ ಸಾಲ ಹೊರ ಬಾಕಿ ಇದ್ದು, ಬ್ಯಾಂಕು ೨೦೨೫-೨೬ನೇ ಸಾಲಿಗೆ 5.70 ಕೋಟಿ ರು. ನಿವ್ವಳ ಲಾಭ ಗಳಿಸಿದೆ ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧ್ಯಕ್ಷ ದೊಡ್ಡಸ್ವಾಮೇಗೌಡ ತಿಳಿಸಿದರು.
ನಗರದ ನಂದಿ ಭವನದಲ್ಲಿ ಪ್ರಥಮವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ೭೨ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕಿನ ವ್ಯವಹಾರಗಳನ್ನು ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ತಂತ್ರಜ್ಞಾನದಡಿ ಗಣಕೀಕರಣಗೊಳಿಸಿದ್ದು, ಗ್ರಾಹಕರು ತಮ್ಮ ವ್ಯವಹಾರವನ್ನು ಯಾವುದೇ ಶಾಖೆಗಳಲ್ಲಿ ವ್ಯವಹಾರ ನಡೆಸಬಹುದಾಗಿದೆ. ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವ ದೇಶಾದ್ಯಂತ ಹಣ ವರ್ಗಾವಣೆ ಮಾಡುವ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗಿದೆ. ಕರ್ನಾಟಕ ರಾಜ್ಯದಲ್ಲೇ ಮೊಟ್ಟಮೊದಲು ಗಣಕೀಕರಣ ಲೆಕ್ಕ ಪರಿಶೋಧನೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚನ್ನಂಗೆರೆ ಪ್ರಾಥಮಿಕ ಕೃಷಿ ಸಹಕಾರ ಸಂಘ ಹಾಗೂ ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಭಾರತ ಸರ್ಕಾರದ ಸಹಕಾರ ಸಚಿವಾಲಯ ಗುರುತಿಸಿ ಪುರಸ್ಕರಿಸಿದೆ ಎಂದು ತಿಳಿಸಿದರು.
ಪ್ರತ್ಯೇಕ ಬ್ಯಾಂಕ್ ಮಾಡಲು ಒಪ್ಪಿಗೆ:
ಇದಕ್ಕೂ ಮುನ್ನಾ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅಧ್ಯಕ್ಷರು, ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಬ್ಯಾಂಕ್ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ನಬಾರ್ಡ್ ಸೂಚನೆಯಂತೆ ಬ್ಯಾಂಕ್ ಅನ್ನು ಪ್ರತ್ಯೇಕಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಮತ್ತೋರ್ವ ನಿರ್ದೇಶಕ ಆರ್.ನರೇಂದ್ರ ಧ್ವನಿಗೂಡಿಸಿ, ಈ ಬಾರಿ ಚಾಮರಾಜನಗರದಲ್ಲಿ ಡಿಸಿಸಿ ಬ್ಯಾಂಕ್ ಆಗುತ್ತದೆ ಎಂದು ಹೇಳಿದರು.
ಚಾಮರಾಜನಗರ ಹಾಗೂ ಮೈಸೂರು ಎಂಬ ತಾರತಮ್ಯ ಮಾಡಲಾಗಿದೆ. ಚಾ.ನಗರ ಜಿಲ್ಲೆಯ ಸಂಘಗಳಿಗೆ ಸಾಲ ನೀಡುವಲ್ಲಿ ವಿಳಂಬ ಮತ್ತು ಸರಿಯಾಗಿ ವಿತರಣೆ ಮಾಡುತ್ತಿಲ್ಲ ಎಂಬ ಸದಸ್ಯರ ಪ್ರಶ್ನೆಗೆ ಲಿಖಿತವಾಗಿ ಅರ್ಜಿ ನೀಡಿದರೆ ಕ್ರಮ ವಹಿಸುವುದಾಗಿ ತಿಳಿಸಿದರು.
ಸಂಘದ ಸದಸ್ಯರಾದ ಕೆರೆಹಳ್ಳಿ ನವೀನ್, ಡಿ. ನಾಗೇಂದ್ರ, ಪು. ಶ್ರೀನಿವಾಸನಾಯಕ,ಪಿ. ವೃಷಬೇಂದ್ರಪ್ಪ, ಕಿಲಗೆರೆ ಬಸವರಾಜು ಸೇರಿದಂತೆ ಅನೇಕರು ಮಾತನಾಡಿ ಎಂಡಿಸಿಸಿ ಬ್ಯಾಂಕಿನ ಅಧಿಕಾರಿಗಳು ಲೋಪ ಮತ್ತು ಸಂಘಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಪ್ರಸ್ತಾಪಿಸಿದರು.
ಕೇಂದ್ರ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶಂಕರ್ ಬಲ್ಲೇನಹಳ್ಳಿ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆಯನ್ನು ಪಡೆದುಕೊಂಡರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವೈ.ಎಂ.ಜಯರಾಮು, ಆರ್.ನರೇಂದ್ರ, ಎಸ್.ಚಂದ್ರಶೇಕರ್, ಬಿ.ಎಸ್.ಸದಾನಂದ, ಎಂ.ಕೆಂಚಪ್ಪ, ಜಿ.ಎನ್.ಮಂಜುನಾಥ್, ಇ.ಸಿ.ಲೋಕೇಶ್, ಟಿ.ಪಿ.ಬೋರೇಗೌಡ, ಬೀರೇಂದ್ರ, ರಾಜಣ್ಣ ಕೇಂದ್ರ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ವಿನೋದಕುಮಾರ್, ಸದಸ್ಯರು ಹಾಜರಿದ್ದರು. 22ಸಿಎಚ್ಎನ್18
ಚಾಮರಾಜನಗರದಲ್ಲಿ ಮೈಸೂರು, ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ೭೨ನೇ ವಾರ್ಷಿಕ ಮಹಾಸಭೆಯನ್ನು ದೊಡ್ಡಸ್ವಾಮೇಗೌಡ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.