ಉಡುಪಿ: ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗೆ ಮೊದಲ ವಿಕೆಟ್ ಪತನವಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರದಾನ್ ರಾಜೀನಾಮೆಗೆ ಕಾಂಗ್ರೆಸ್ ಲೋಕಸಭೆಯ ಒಳಗೂ ಹೊರಗೂ ಹೋರಾಟ ಮಾಡಿತ್ತು. ಅವರ ರಾಜೀನಾಮೆಯಿಂದ ಸಂತೋಷವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರ ನೀಟ್ ಹಗರಣದ ಮೂಲಕ ದೇಶದ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡಿತ್ತು. ಪ್ರತಿಭಟನೆಗಿಳಿದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿತು, ಅಶ್ರುವಾಯು, ಲಾಠಿ ಚಾರ್ಜ್ ಮಾಡಿತು, ಈ ಮೂಲಕ ತಾನು ದೇಶದ ಭವಿಷ್ಯವಾದ ವಿದ್ಯಾರ್ಥಿಗಳ ವಿರೋಧಿ ಸರಕಾರ ಎಂದು ತೋರಿಸಿತ್ತು, ಮೋದಿ ಸರಕಾರ ಇದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂದು ಸಾಬೀತು ಮಾಡಿತ್ತು ಎಂದು ಐವನ್ ಆರೋಪಿಸಿದರು.ದೇಶದಲ್ಲಿ ಮಾತ್ರವಲ್ಲ, ಇಂಗ್ಲೆಂಡ್ ಮುಂತಾದ ವಿದೇಶಗಳಲ್ಲಿಯೂ ನೀಟ್ ಹಗರಣದ ವಿರುದ್ಧ ಪ್ರತಿಭಟನೆಗಳು ಆರಂಭವಾದಾಗ ಬಿಜೆಪಿ ಸರಕಾರ ಒತ್ತಡಕ್ಕೊಳಗಾಯಿತು. ಇದರಿಂದ ಪ್ರಧಾನಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ರಾತ್ರಿ ಎದ್ದು ವಿಡಿಯೋ ಮಾಡುತ್ತಾರೆ, ಕನಸಿನಲ್ಲೂ ಸೆಲ್ಫಿ ವಿಡಿಯೋ ಮಾಡುತ್ತಾರೆ ಎಂದು ಟೀಕಿಸಿದ ಐವನ್, ಕೇವಲ ಪ್ರಚಾರದಿಂದಲೇ ಎಲ್ಲವನ್ನು ಗೆಲ್ಲುತ್ತೇನೆ ಎಂದು ಭ್ರಮೆಯಲ್ಲಿದ್ದ ಮೋದಿ ಸರ್ಕಾರ ನೀಟ್ ಹಗರಣದಿಂದ ಪ್ರಪಂಚದಾದ್ಯಂತ ಛೀ ಥೂ ಎನಿಸಿಕೊಂಡಿತು ಎಂದು ಹೇಳಿದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಯನ್ನು ಸಂಭ್ರಮಿಸಿದರು.ಎಐಸಿಸಿ ವೀಕ್ಷಕ ಹಿಮ್ಮತ್ ಸಿಂಗ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಜಯಪ್ರಕಾಶ್ ಹೆಗ್ಡೆ, ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.