ನಾಳೆ ಕಾವೇರಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವಾರ್ಷಿಕೋತ್ಸವ

KannadaprabhaNewsNetwork | Published : Apr 18, 2025 12:44 AM

ಸಾರಾಂಶ

ವರ್ಷದ ಹಿಂದೆ ಆಸ್ಪತ್ರೆಯನ್ನು ತಾಲೂಕಿನ ಜನರ ಆಶೀರ್ವಾದದೊಂದಿಗೆ ಆರಂಭಿಸಿದ್ದೆವು. ಈಗ ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ಖ್ಯಾತಿ ಗಳಿಸುವ ಮೂಲಕ ಹೆಮ್ಮರವಾಗಿ ಬೆಳೆಯುತ್ತಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ಇಲ್ಲಿನ ಬೈಪಾಸ್ ರಸ್ತೆಯ ಕಾವೇರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭವು ಏ. 19ರಂದು ಆಸ್ಪತ್ರೆ ಆವರಣದಲ್ಲಿ ನಡೆಯಲಿದ್ದು, ವಾರ್ಷಿಕೋತ್ಸವ ಅಂಗವಾಗಿ ದೇಶದ ಗಡಿ ಕಾಯುತ್ತಿರುವ ತಾಲೂಕಿನ 200ಕ್ಕೂ ಹೆಚ್ಚು ವೀರಯೋಧರ ತಾಯಂದಿರನ್ನು ಗುರುತಿಸಿ ಕೃತಜ್ಞತಾಪೂರ್ವಕ ಸನ್ಮಾನ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಲೋಹಿತ್ ತಿಳಿಸಿದರು.

ವರ್ಷದ ಹಿಂದೆ ಆಸ್ಪತ್ರೆಯನ್ನು ತಾಲೂಕಿನ ಜನರ ಆಶೀರ್ವಾದದೊಂದಿಗೆ ಆರಂಭಿಸಿದ್ದೆವು. ಈಗ ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ಖ್ಯಾತಿ ಗಳಿಸುವ ಮೂಲಕ ಹೆಮ್ಮರವಾಗಿ ಬೆಳೆಯುತ್ತಿದೆ. ಸಣ್ಣಪುಟ್ಟ ಕಾಯಿಲೆಗಳಿಗೂ ಮೈಸೂರಿಗೆ ಎಡತಾಕುವಂತಹ ಪರಿಸ್ಥಿತಿಯನ್ನು ಕಾವೇರಿ ಆಸ್ಪತ್ರೆ ನೀಗಿಸಿದೆ. ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಆರೋಗ್ಯ ಚಿಕಿತ್ಸೆ ನೀಡುತ್ತಿರುವುದು ನನಗೆ ಹೆಮ್ಮೆ ತಂದಿದೆ ಎಂದರು.

ಹುಣಸೂರು ತಾಲೂಕು ಯೋಧರ ನಾಡಾಗಿದ್ದು, ಇಂದಿಗೂ ದೇಶದ ಸೇನೆಯಲ್ಲಿ ತಾಲೂಕಿನ ಯುವಯೋಧರು ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ದೇಶಸೇವೆಗಾಗಿ ವೀರಯೋಧರನ್ನು ನೀಡಿದ ಮಾತೆಯರನ್ನು ಗುರುತಿಸಿ ಸನ್ಮಾನಿಸುವ ಪುಣ್ಯ ಕಾರ್ಯ ಲಭಿಸಿದ್ದು, ಎಲ್ಲ ತಾಯಂದಿರನ್ನು ಆತ್ಮೀಯವಾಗಿ ಸನ್ಮಾನಿಸಲಾಗುವುದು. ಅಲ್ಲದೇ ಸಂಜೆ ಜೀ ಕನ್ನಡವಾಹಿನಿಯ ಸರಿಗಮಪ ರಿಯಾಲಿಟಿ ಶೋ ಪ್ರತಿಭೆಗಳಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು, ತಾಲೂಕಿನ ಎಲ್ಲಾ ನಾಗರಿಕರು ಭಾಗವಹಿಸಿ ಬೆಂಬಲಿಸಬೇಕು ಎಂದು ಕೋರಿದರು.

ನಗರಸಭಾ ಸದಸ್ಯ ದೇವರಾಜ ಮಾತನಾಡಿ, ಕಾವೇರಿ ಆಸ್ಪತ್ರೆ ಬಡರೋಗಿಗಳ ಪಾಲಿಗೆ ವರದಾನವಾಗಿದೆ. ರೋಗಿಯ ಪರಿಸ್ಥಿತಿ ಅರಿತು ಮಾನವೀಯತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಡಾ. ಲೋಹಿತ್ ಮತ್ತವರ ತಂಡ ನೀಡುತ್ತಿರುವುದು ನಮಗೆಲ್ಲರಿಗೂ ಅಭಿಮಾನ ಮೂಡಿಸಿದೆ ಎಂದರು.

ಮತ್ತೊಬ್ಬ ನಗರಸಭಾ ಸದಸ್ಯ ಎಚ್.ಪಿ. ಸತೀಶ್‌ ಕುಮಾರ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯ ಕೊರತೆಯನ್ನು ನೀಗಿಸುವತ್ತ ಕಾವೇರಿ ಆಸ್ಪತ್ರೆ ಜನರಿಗೆ ಸಹಕಾರವಾಗಿ ನಿಂತಿದೆ. ಆಸ್ಪತ್ರೆ ವತಿಯಿಂದ ಹುಣಸೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವಂತಾಗಲಿ ಎಂದು ಆಶಿಸಿದರು.

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಸವಲಿಂಗಯ್ಯ ಮತ್ತು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಾಸೇಗೌಡ, ಉದ್ಯಮಿ ಉದಯ್ ಮಾತನಾಡಿದರು.

---

ಬಾಕ್ಸ್‌ ಸುದ್ದಿ

ನರ್ಸಿಂಗ್ ಕೋರ್ಸ್ ಆರಂಭಿಸಿದ್ದೇವೆ

ಸ್ಥಳೀಯ ವಿದ್ಯಾರ್ಥಿಗಳಿಗೆ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವಂತಾಗಬೇಕು ಎಂದು ಆಸ್ಪತ್ರೆ ವತಿಯಿಂದ ಈಗಾಗಲೇ ಒಂದು ವರ್ಷದ ನರ್ಸಿಂಗ್ ಕೋರ್ಸ್ ಆರಂಭಿಸಲಾಗಿದ್ದು, 40 ವಿದ್ಯಾರ್ಥಿಗಳು ನರ್ಸಿಂಗ್ ಕಲಿಯುತ್ತಿದ್ದಾರೆ. ಮುಂದಿನ ವರ್ಷದಿಂದ ಪ್ಯಾರಾಮೆಡಿಲ್ ಕೋರ್ಸ್ ಆರಂಭಕ್ಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೆಡಿಕಲ್ ಕಾಲೇಜು ಸ್ಥಾಪನೆ ನನ್ನ ಕನಸಾಗಿದೆ ಎಂದು ಡಾ. ಲೋಹಿತ್ ಮಾಹಿತಿ ನೀಡಿದರು

Share this article