ಭಟ್ಕಳ: ಪಟ್ಟಣದ ಹಳೇ ಬಸ್ ನಿಲ್ದಾಣದ ಸನಿಹದ ಮೀನು ಮಾರುಕಟ್ಟೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡದಂತೆ ಆಗ್ರಹಿಸಿ ಮಂಗಳವಾರ ಮೀನುಗಾರ ಮಹಿಳೆಯರು ಮತ್ತು ಮೀನು ಮಾರಾಟಗಾರರ ಸಂಘದಿಂದ ಭಟ್ಕಳ ತಹಶೀಲ್ದಾರ ನಾಗೇಂದ್ರ ಕೊಳಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಟ್ಟಣದ ಹಳೇ ಬಸ್ ನಿಲ್ದಾಣದ ಸನಿಹದಲ್ಲಿ ನೂರಾರು ವರ್ಷಗಳಿಂದ ಮೀನು ಮಾರಾಟ ಮಾಡಿಕೊಂಡು ಬರಲಾಗಿದೆ. ಇಲ್ಲಿ ದಿನಂಪ್ರತಿ150 ರಿಂದ 200 ಮಹಿಳಾ ಮೀನುಗಾರರು ಹಾಗೂ ಪುರುಷ ಮೀನು ಮಾರಾಟಗಾರರು ಮೀನು ಮಾರುತ್ತಿದ್ದಾರೆ. ಈ ಮೀನು ಮಾರುಕಟ್ಟೆಯನ್ನು ಅವಲಂಬಿಸಿ ಹಿಂದಿನಿಂದಲೂ ಹಲವು ತರಕಾರಿ ಅಂಗಡಿ, ಕಿರಾಣಿ ಅಂಗಡಿ, ದಿನಸಿ, ಹಣ್ಣು ಹಂಪಲ ಹಾಗೂ ಇನ್ನಿತರ ಆಹಾರ ಪದಾರ್ಥಗಳ ಅಂಗಡಿ ಮುಗ್ಗಟ್ಟುಗಳು ಹಾಗೂ ರಿಕ್ಷಾ ಚಾಲಕರು ತಮ್ಮ ವ್ಯಾಪಾರ ವಹಿವಾಟುಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿರುತ್ತಾರೆ. ಆದರೆ ಪರಸಭೆಯು ಇತ್ತೀಚೆಗೆ ಈ ಮೀನು ಮಾರುಕಟ್ಟೆಯನ್ನು ವಾರದ ಸಂತೆ ಮಾರುಕಟ್ಟೆಯಲ್ಲಿ ನಿರ್ಮಿಸಲಾದ ಹೊಸ ಮೀನು ಮಾರುಕಟ್ಟೆಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಹಳೇ ಬಸ್ ನಿಲ್ದಾಣದ ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಪುರಸಭೆಯ ಅಧಿಕಾರಿಗಳು ಮುಂಚಿತವಾಗಿ ಯಾವುದೇ ಸಭೆ ಕರೆದು ಚರ್ಚೆ ಮಾಡಿಲ್ಲ. 60 ಜನ ಮೀನು ಮಾರಾಟ ಮಾಡುವ ಸಾಮರ್ಥ್ಯ ಹೊಂದಿರುವ ಹೊಸ ಮೀನು ಮಾರುಕಟ್ಟೆಗೆ ರಸ್ತೆಯ ಬದಿಯಲ್ಲಿ, ಮುಖ್ಯವೃತ್ತದಲ್ಲಿ ಮೀನು ಮಾರಾಟ ಮಾಡುವವರನ್ನು ಅಲ್ಲಿಗೆ ಸ್ಥಳಾಂತರಿಸುವುದರ ಬದಲು 150 ರಿಂದ 200 ಜನ ಮೀನು ಮಾರಾಟ ಮಾಡುವ ಹಳೇ ಬಸ್ ನಿಲ್ದಾಣದ ಸನಿಹದಲ್ಲಿ ಹಲವು ವರ್ಷಗಳಿಂದ ಮೀನು ಮಾರಾಟ ಮಾಡುತ್ತಾ ಬಂದಿರುವವರನ್ನು ದುರುದ್ದೇಶಪೂರ್ವಕವಾಗಿ ಸ್ಥಳಾಂತರದ ನಿರ್ಧಾರಕ್ಕೆ ವಿರೋಧವಿದೆ ಎಂದು ತಿಳಿಸಲಾಗಿದೆ.ಈಗಿರುವ ಹಳೆಯ ಮೀನು ಮಾರುಕಟ್ಟೆಯನ್ನು ಹೈಟೆಕ್ ಮಾರುಕಟ್ಟೆಯ ಭಾಗವಾಗಿ ಸೇರಿಸಿಕೊಂಡು ನೀಲಿನಕ್ಷೆ ಮಾಡಿ ಠರಾವು ಮಾಡಿ ಭರವಸೆ ಕೊಟ್ಟಲ್ಲಿ, ನೀಲಿನಕ್ಷೆ ಹಾಗೂ ಲಿಖಿತ ಠರಾವಿನ ಆಶ್ವಾಸನೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ನೂತನ ಹೈಟೆಕ್ ಮಾರ್ಕೆಟ್‌ನ ನಿರ್ಮಾಣಕ್ಕಾಗಿ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಸಹಕಾರ ನೀಡುವುದಾಗಿ ಮೀನುಗಾರರು ತಿಳಿಸಿದರು. ಈ ಸಂದರ್ಭದಲ್ಲಿ ವಿವೇಕ ನಾಯ್ಕ, ಖಾಜಾ, ರಾಮಣ್ಣ ಬಳೆಗಾರ, ಶ್ರೀಕಾಂತ ನಾಯ್ಕ ಆಸರಕೇರಿ, ಪಾಂಡುರಂಗ ನಾಯ್ಕ ಸೇರಿದಂತೆ ಮೀನುಗಾರ ಮಹಿಳೆಯರು, ಕಿರಾಣಿ, ತರಕಾರಿ ವ್ಯಾಪಾರಿಗಳು ಹಾಗೂ ಆಟೋ ಚಾಲಕರಿದ್ದರು.
ಭಟ್ಕಳ ಹಳೇ ಬಸ್ ನಿಲ್ದಾಣದ ಸನಿಹದ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸದಂತೆ ಆಗ್ರಹಿಸಿ ಮೀನು ಮಾರಾಟ ಮಹಿಳೆಯರು ಮತ್ತು ಅಂಗಡಿಕಾರರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.