ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮುಳುಗಿದ್ದು, ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ಸಕಾಲಿಕವಾಗಿ ರಕ್ಷಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರ
ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮುಳುಗಿದ್ದು, ಅದರಲ್ಲಿದ್ದ 6 ಮಂದಿ ಮೀನುಗಾರರನ್ನು ಸಕಾಲಿಕವಾಗಿ ರಕ್ಷಿಸಲಾಗಿದೆ.ಬುಧವಾರ ಬೆಳಗ್ಗೆ ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್, ಅಳಿವೆ ದಾಟುವಾಗ ಗಾಳಿ ಮತ್ತು ಅಲೆಗಳ ಹೊಡೆತಕ್ಕೆ ಸಿಲುಕಿತು. ಇದರಿಂದ ಬೋಟಿನೊಳಗೆ ನೀರು ನುಗ್ಗಿ ಮುಳುಗಲು ಆರಂಭಿಸಿತು.ಅಪಾಯದ ಮುನ್ಸೂಚನೆ ಅರಿತ ತಕ್ಷಣ ಸಮೀಪದಲ್ಲಿದ್ದ ಇತರ ಬೋಟ್‌ಗಳ ಮೀನುಗಾರರು ಮತ್ತು ಕರಾವಳಿ ಭದ್ರತಾ ಪಡೆಯ ಸಿಬ್ಬಂದಿಗೆ ಮಾಹಿತಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಗ್ಗ ಮತ್ತು ರಕ್ಷಣಾ ಸಾಧನಗಳನ್ನು ಬಳಸಿ ಮುಳುಗುತ್ತಿದ್ದ ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ದಡಕ್ಕೆ ಕರೆತರಲಾಯಿತು. ಬೋಟ್ ಸಂಪೂರ್ಣವಾಗಿ ಮುಳುಗಿದ್ದು, ಬಲೆ ಮತ್ತು ಇತರೆ ಮೀನುಗಾರಿಕಾ ಸಲಕರಣೆಗಳು ಸಮುದ್ರಪಾಲಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಗಂಗೊಳ್ಳಿ ಸಮುದ್ರದಲ್ಲಿ ಅಲೆಗಳ ರಭಸ ಹೆಚ್ಚಾಗಿರುವುದರಿಂದ ಕಳೆದ ವಾರ ಶ್ರೀ ಬಾಲಾಂಜನೇಯ ಬೋಟ್ ಮುಳುಗಿ 27 ಮೀನುಗಾರರು ರಕ್ಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆ ಮತ್ತು ಕರಾವಳಿ ಕಾವಲು ಪೊಲೀಸರು ಸಮುದ್ರದಲ್ಲಿ ಮೀನುಗಾರರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.