ಕನ್ನಡಪ್ರಭ ವಾರ್ತೆ ದಾವಣಗೆರೆ
ವಿವಿಧ ಕಂಪನಿಗಳ ಅಮಲು ಬರುವ ಸಿರಪ್‌ಗಳನ್ನು (ಕೆಮ್ಮಿನ ಔಷಧಿ) ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸ್ಥಳಗಳ ಮೇಲೆ ದಾಳಿ ಮಾಡಿ, ಪೊಲೀಸರು ಐವರನ್ನು ಬಂಧಿಸಿದ್ದಾರೆ.ಅಲ್ಲದೆ ಅಮಲು ಬರುವ ಸಿರಪ್ ಬಾಟಲುಗಳ ಬಾಕ್ಸ್‌ಗಳು, ಒಂದು ಹೊಂಡಾ ಆಕ್ಟೀವಾ ಸ್ಕೂಟರ್, 1200 ರು. ನಗದು, 1,25,504 ರು. ಮೌಲ್ಯದ ಸ್ವತ್ತನ್ನು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಜಪ್ತಿ ಮಾಡಿದ್ದಾರೆ.
ಇಲ್ಲಿನ ಎಸ್‌ಪಿಎಸ್ ನಗರದ ವಾಸಿ, ಅಂಗಡಿ ಕೆಲಸಗಾರ ಶಿವಕುಮಾರ (38), ಮೆಹಬೂಬ್ ನಗರದ ವಾಸಿ, ಅಂಗಡಿ ಮಾಲೀಕ ಅಜೀಮುದ್ದೀನ್ (37), ದೇವರಾಜ ಅರಸು ಬಡಾವಣೆ ಎ ಬ್ಲಾಕ್ ವಾಸಿ, ರಿಯಲ್ ಎಸ್ಟೇಟ್ ಕೆಲಸಗಾರ ಮಹಮ್ಮದ್ ಶಾರೀಕ್ (35), ಚನ್ನಗಿರಿ ತಾ.ಹೊನ್ನೆಬಾಗಿ ಗ್ರಾಮದ ಅಡಕೆ ವ್ಯಾಪಾರ ಮಂಡಲದ ಸೈಯದ್ ಬಾಬು ಅಲಿಯಾಸ್ ಯೂನೂಸ್ ಹಾಗೂ ಚನ್ನಗಿರಿ ಸೈದಾ ಮೊಹಲ್ಲಾ ವಾಸಿ ಅಬ್ದುಲ್ ಗಫರ್ ಅಲಿಯಾಸ್ ಆಟೋ ಬಾಬು ಬಂಧಿತರು.ದಾವಣಗೆರೆ ನಗರದಲ್ಲಿ ಅ.11ರ ರಾತ್ರಿ 9.30ರ ವೇಳೆ ಮಾದಕದ್ರವ್ಯ ನಿಗ್ರಹ ಪಡೆಯ ವಿಶೇಷ ಕರ್ತವ್ಯಕ್ಕೆ ನೇಮಿಸಿರುವ ಪಿಎಸ್ಐ ಸಾಗರ್ ಅತ್ತರವಾಲ ಹಾಗೂ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಬಸವ ನಗರ ಠಾಣೆ ವ್ಯಾಪ್ತಿಯ ದೇವರಾಜ ಅರಸು ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಕಾನೂನುಬಾಹಿರವಾಗಿ, ಯಾವುದೇ ಪರವಾನಿಗೆ ಇಲ್ಲದೇ ಅಮಲು ಬರುವ ಸಿರಫ್ ಬಾಟಲಿಗಳನ್ನು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿ ಆಧರಿಸಿ ಎಸ್ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ್ದರು.
ವೈದ್ಯರ ಸಲಹೆ ಇಲ್ಲದೇ, ಯುವ ಸಮೂಹಕ್ಕೆ ಹಾಗೂ ವ್ಯಸನಿಗಳಿಗೆ ಸುಲಭವಾಗಿ ಅಮಲು ಪದಾರ್ಥಗಳ ರೂಪದಲ್ಲಿ ದುರ್ಬಳಕೆಗೆ ಅಮಲು ಬರುವ ಸಿರಪ್ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಶಿವಕುಮಾರ ಎಂಬಾತನ್ನು ಬಂಧಿಸಿದರು. ಅದೇ ರೀತಿ ಅಜೀಮುದ್ದೀನ್, ಮಹಮ್ಮದ್ ಶಾರೀಕ್, ಸೈಯದ್ ಬಾಬು ಅಲಿಯಾಸ್ ಯೂನೂಸ್, ಅಬ್ದುಲ್ ಗಫರ್ ಅಲಿಯಾಸ್ ಆಟೋ ಬಾಬುರನ್ನು ಬಂಧಿಸಲಾಯಿತು. ಬಂಧಿತ ಆರೋಪಿಗಳಿಂದ ಅಮಲು ಬರುವ ವಿವಿಧ ಕಂಪನಿಗಳ ಸಿರಫ್ ಬಾಟಲುಗಳು, 1200 ರು. ನಗದು ಹಾಗೂ ವಾಹನ ಜಪ್ತಿ ಮಾಡಲಾಯಿತು.ಬಂಧಿತ ಆರೋಪಿಗಳಿಂದ 100 ಎಂಎಲ್‌ನ ಒಟ್ಟು 340 ಬ್ರೋನ್‌ಕೋಫ್ ಸಿ ಕಾಫ್ ಸಿರಪ್ ಬಾಟಲುಗಳು, 100 ಎಂಎಲ್‌ನ 15 ಎಡೆಕ್ಸ್-ಸಿಟಿ ಕಾಫ್ ಸಿರಪ್ ಬಾಟಲು, 20 ಸಣ್ಣ ಬಾಕ್ಸ್‌ಗಳಲ್ಲಿರುವ ಅಸೆಕ್ಲೋಫೆನಾಕ್ ಪ್ಯಾರೆಸಿಟಮಾಲ್ ಮತ್ತು ಸೆರಾಟಿಯೋಪೆಪ್ಟಿಡೇಸ್ ಮಾತ್ರೆಗಳು, ಒಂದು ಹೊಂಡಾ ಆಕ್ಟಿವಾ ಸ್ಕೂಟರ್ ಹಾಗೂ 1200 ರು. ನಗದು ಜಪ್ತಿ ಮಾಡಿದ್ದು, ಒಟ್ಟು ವಶಪಡಿಸಿಕೊಂಡ ಸ್ವತ್ತಿನ ಮೌಲ್ಯ 1,25,504 ರು.ಗಳಾಗಿದೆ. ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್, ಬಸವ ನಗರ ಪೊಲೀಸ್ ಠಾಣೆ ನಿರೀಕ್ಷಕ ನಂಜುಂಡಸ್ವಾಮಿ, ಪಿಎಸ್‌ಐ ಸಾಗರ ಅತ್ತರವಾಲ, ಸಿಬ್ಬಂದಿ ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು.