-ಬಿಜಿಕೆರೆ ಗ್ರಾಮ ಪಂಚಾಯಿತಿ 5 ಡೆಂಘೀ ಪ್ರಕರಣ ದೃಢ । ಮೂಲಸೌಲಭ್ಯಗಳ ಕೊರತೆಗಳ ಆಗರವಾದ ಬಿಜಿಕೆರೆ ಗ್ರಾಮ
ಬಿಜಿಕೆರೆ ಬಸವರಾಜ
----ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು
ತಾಲೂಕಿನ ಬಿಜಿ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ಬಲವಾಗಿ ಕಾಡುತ್ತಿದೆ. ಮಾರಕ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿದ್ದು, ಹಳ್ಳಿಗಳಲ್ಲಿ ಜನರು ಜ್ವರ ಬಾಧೆಗೆ ಒಳಗಾಗಿದ್ದಾರೆ. ಸ್ವಚ್ಚತೆ ಕಾಪಾಡಬೇಕಾದ ಸ್ಥಳೀಯ ಆಡಳಿತ ವರ್ಷ ಕಳೆದರೂ ಚರಂಡಿ ಸ್ವಚ್ಚತೆಗೆ ಮುಂದಾಗದಿರುವುದು ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ.
ಕಳೆದೊಂದು ದಶಕದಿಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಚ್ಚತಾ ಸಿಬ್ಬಂದಿಯ ನೌಕರಿ ಕಾಯಂ ಗೊಳಿಸುತ್ತಿಲ್ಲ ಎನ್ನುವ ಕಾರಣದಿಂದಾಗಿ ಸಿಬ್ಬಂದಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ. ಕಾಯಂ ಗೊಂಡಿರುವ ಒಬ್ಬ ಸ್ವಚ್ಛತಾ ಸಿಬ್ಬಂದಿಯಿಂದ ಇಡೀ ಗ್ರಾಮ ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ಆಡಳಿತ ವ್ಯವಸ್ಥೆ ಮತ್ತು ಸ್ವಚ್ಚತಾ ಸಿಬ್ಬಂದಿ ನಡುವಿನ ಮುಸುಕಿನ ಗುದ್ದಾಟಕ್ಕೆ ಗ್ರಾಮದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ. ಸೊಳ್ಳೆಗಳ ಉಪಟಳಕ್ಕೆ ಜನತೆ ಹೈರಾಣಾಗಿದ್ದಾರೆ.
ಪಾಗಿಂಗ್ ಮಾಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿ ವಾರ ಕಳೆದರೂ ಈವರೆಗೂ ಫಾಗಿಂಗ್ ಮಾಡಿಲ್ಲ. ಫಾಗಿಂಗ್ ಯಂತ್ರ ಕೆಟ್ಟಿರುವ ನೆಪವೊಡ್ಡಿ ಸಂಬಂಧಿಸಿದ ಗ್ರಾ.ಪಂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಬಸ್ ನಿಲ್ದಾಣ, ಅಂಗಡಿಗಳು, ಅಂಡರ್ ಪಾಸ್ ಸೇರಿದಂತೆ ಪ್ರಮುಖ ಜನನಿ ಬಿಡ ಪ್ರದೇಶದಲ್ಲಿ ಹಗಲಲ್ಲಿಯೇ ಸೊಳ್ಳೆಗಳು ರಾಜಾ ರೋಷವಾಗಿ ಹಾರಾಡುತ್ತಿವೆ. ಇದು ಜನರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಇಡೀ ತಾಲೂಕಲ್ಲಿ ಡೆಂಘೀ ಹಾಟ್ ಸ್ಪಾಟ್ ಎಂದು ಗುರುತಿಸಿರುವ ಬಿಜಿಕೆರೆ ಗ್ರಾಮದಲ್ಲಿ ಸ್ವಚ್ಛತೆಗೆ ಮುಂದಾಗುವ ಜತೆಗೆ ಡೆಂಘೀ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂಬುದು ಜನತೆಯ ಆಗ್ರಹವಾಗಿದೆ.
ಬಿಜಿಕೆರೆ ಗ್ರಾಮದಲ್ಲಿ ಮೂರು ಡೆಂಘೀ ಪ್ರಕರಣಗಳು ದೃಢಪಟ್ಟಿದ್ದು, ಎರಡು ಶಂಕಿತ ಪ್ರಕರಣಗಳು ಗುಣಮುಖರಾಗಿ ಮನೆ ಸೇರಿದ್ದಾರೆ. ಈಗಾಗಲೇ ಮನೆ ಮನೆ ಲಾರ್ವ ಸಮೀಕ್ಷೆ ಮಾಡಿದ್ದು, ಜ್ವರ ಬಾಧಿತರ ತಪಾಸಣೆಗೊಳಪಡಿಸಲಾಗುತ್ತಿದೆ. ಡೆಂಘೀ ಪ್ರಕರಣಗಳಿಂದಾಗಿ ಗ್ರಾಮದಲ್ಲಿ ಬ್ಲೀಚಿಂಗ್ ಫಿನಾಯಿಲ್, ಫಾಗಿಂಗ್ ಮಾಡಿ ಮುನ್ನೆಚ್ಚರಿಕೆ ಕ್ರಮವಹಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
-----
ಶಂಕಿತ ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿರುವ ಪರಿಣಾಮ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದ್ದು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸಿ ಬ್ಲೀಚಿಂಗ್ ಫಿನಾಯಿಲ್ ಹಾಕಲು ಕ್ರಮವಹಿಸಲಾಗಿದೆ.
-ಎಸ್. ಜಯಣ್ಣ, ಅಧ್ಯಕ್ಷ, ಬಿಜಿಕೆರೆ ಗ್ರಾಮ ಪಂಚಾಯಿತಿ.