ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ಐವರ ಸಾವು!

KannadaprabhaNewsNetwork |  
Published : Dec 18, 2023, 02:00 AM IST
ಒಂದೇ ಕುಟುಂಬದ ಐವರು ಮುಳುಗಿ ಸಾವಿಗೀಡಾದ ಶಿರಸಿ ತಾಲೂಕು ಸಹಸ್ರಲಿಂಗದಲ್ಲಿ ಮೃತರ ದೇಹ ಶೋಧ ನಡೆದಿರುವುದು | Kannada Prabha

ಸಾರಾಂಶ

ಸಹಸ್ರಲಿಂಗ ಪ್ರವಾಸಿ ತಾಣವಾಗಿದ್ದು, ರಜೆಯ ದಿನದಂದು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಇಲ್ಲಿಯೇ ಊಟ ತಯಾರಿಸಿ ಸಂಜೆ ವರೆಗೂ ಇದ್ದು ಹೋಗುತ್ತಾರೆ. ಘಟನೆ ನಡೆದ ಸಹಸ್ರಲಿಂಗದ ಭೂತನ ಗುಂಡಿ ಆಳವಾಗಿದ್ದು, ಇಲ್ಲಿಯ ಕಲ್ಲು-ಬಂಡೆ ಸಹ ಜಾರುವುದರಿಂದ ನೀರಿಗಿಳಿಯದಂತೆ ಸೂಚನಾ ಫಲಕವನ್ನೂ ಅಳವಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಸಿ

ರಜೆ ಕಳೆಯಲು ಕುಟುಂಬ ಸಮೇತವಾಗಿ ಹೊಳೆಯೂಟಕ್ಕೆ ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಐವರು ಮೃತಪಟ್ಟ ದಾರುಣ ಘಟನೆ ತಾಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಹಸ್ರಲಿಂಗದಲ್ಲಿ ಭಾನುವಾರ ಸಂಭವಿಸಿದೆ.

ಮೃತರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ವಿದ್ಯಾರ್ಥಿಗಳೂ ಇದ್ದು, ನಗರದ ರಾಮನಬೈಲು ಮತ್ತು ಕಸ್ತೂರಬಾ ನಗರದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಕಸ್ತೂರಬಾ ನಗರದ ಮೌಲಾನಾ ಅಹಮ್ಮದ್ ಸಲೀಂ ಕಲೀಲ್ (44), ನಾದಿಯಾ ನೂರ್ ಅಹಮದ್ ಶೇಖ್ (20), ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22), ಉಮರ್ ಸಿದ್ದಿಕ್ (23) ಎಂದು ಮೃತರನ್ನು ಗುರುತಿಸಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ಸಂಜೆಯ ವೇಳೆ ಮೂವರ ಮೃತದೇಹ ಸಿಕ್ಕಿದ್ದು, ಇನ್ನೂ ಮೃತ ದೇಹಗಳ ಶೋಧ ನಡೆದಿದೆ.

ಆಗಿದ್ದೇನು?

ಸಹಸ್ರಲಿಂಗ ಪ್ರವಾಸಿ ತಾಣವಾಗಿದ್ದು, ರಜೆಯ ದಿನದಂದು ಇಲ್ಲಿಗೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಇಲ್ಲಿಯೇ ಊಟ ತಯಾರಿಸಿ ಸಂಜೆ ವರೆಗೂ ಇದ್ದು ಹೋಗುತ್ತಾರೆ. ಘಟನೆ ನಡೆದ ಸಹಸ್ರಲಿಂಗದ ಭೂತನ ಗುಂಡಿ ಆಳವಾಗಿದ್ದು, ಇಲ್ಲಿಯ ಕಲ್ಲು-ಬಂಡೆ ಸಹ ಜಾರುವುದರಿಂದ ನೀರಿಗಿಳಿಯದಂತೆ ಸೂಚನಾ ಫಲಕವನ್ನೂ ಅಳವಡಿಸಲಾಗಿದೆ.

ರಾಮನಬೈಲು ಮತ್ತು ಕಸ್ತೂರಬಾ ನಗರದ ಒಂದೇ ಕುಟುಂಬದ ಸುಮಾರು 25ರಷ್ಟು ಜನ ಭಾನುವಾರ ಸಹಸ್ರಲಿಂಗಕ್ಕೆ ಆಗಮಿಸಿ ಭೂತನಗುಂಡಿಯ ಬಳಿ ಅಡುಗೆ ತಯಾರಿ ನಡೆಸಿತ್ತು. ಈ ವೇಳೆ ಅವರೊಂದಿಗೆ ಬಂದಿದ್ದ ಮಗುವೊಂದು ಆಟ ಆಡುತ್ತ ಭೂತನಗುಂಡಿಯ ನೀರಿಗೆ ಬಿದ್ದಿದೆ. ತಕ್ಷಣವೇ ನೀರಿಗೆ ಜಿಗಿದ ಮೌಲಾನಾ ಅಹಮ್ಮದ್, ಮಗುವನ್ನು ನೀರಿನಿಂದ ಎತ್ತಿ ತಾಯಿ ನಾದಿಯಾ ಅವರಿಗೆ ನೀಡಿದ್ದಾರೆ. ಮಗುವನ್ನು ದಡಕ್ಕೆ ಬಿಟ್ಟು ನೀರಿನಿಂದ ಮೇಲೆ ಬರುವಾಗ ಕಾಲು ಜಾರಿ ಇಬ್ಬರೂ ಮುಳುಗಿದ್ದಾರೆ. ಅವರನ್ನು ರಕ್ಷಿಸುವ ಸಲುವಾಗಿ ನೀರಿಗೆ ಜಿಗಿದ ಮತ್ತೆ ಮೂವರೂ ನೀರಿನಿಂದ ಮೇಲೇಳಲಾಗದೇ ಮುಳುಗಿ ಸಾವಿಗೀಡಾಗಿದ್ದಾರೆ. ಮಗು ಸುರಕ್ಷಿತವಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರೂ ಆಗಮಿಸಿ ಶೋಧ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ