- ಮಿಂಚಿನ ಕಾರ್ಯಾಚರಣೆ: ₹1.31 ಲಕ್ಷ ಸ್ವತ್ತು ಜಪ್ತಿ
- ರಾಷ್ಟ್ರೀಯ ಹೆದ್ದಾರಿಯಲ್ಲಿ ಊಟಕ್ಕೆಂದು ಲಾರಿ ನಿಲ್ಲಿಸಿದ್ದಾಗ ನಡೆದಿದ್ದ ದರೋಡೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆರಾಷ್ಟ್ರೀಯ ಹೆದ್ದಾರಿಯಲ್ಲಿ ಊಟಕ್ಕೆಂದು ಲಾರಿ ನಿಲ್ಲಿಸಿದ್ದ ಚಾಲಕನ ದರೋಡೆ ಮಾಡಿದ್ದ ಐವರನ್ನು ಮಿಂಚಿನ ವೇಗದಲ್ಲಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಂಧಿಸಿ, ₹1200 ನಗದು, ₹10 ಸಾವಿರ ಮೌಲ್ಯದ 1 ಮೊಬೈಲ್ ಹಾಗೂ ₹1.20 ಲಕ್ಷ ಮೌಲ್ಯದ ಆಟೋ ಜಪ್ತಿ ಮಾಡಿದ ಘಟನೆ ತಾಲೂಕಿನ ಎಚ್.ಕಲ್ಪನಹಳ್ಳಿ ಬಳಿ ನಡೆದಿದೆ.
ಎಸ್‌ಜೆಎಂ ನಗರದ ಆಟೋ ಚಾಲಕ ಕುಶಾಲ್ (20), ಆಂಜನೇಯ ಮಿಲ್ ಬಳಿಯ ನಿವಾಸಿ, ಕೂಲಿ ಕೆಲಸಗಾರ ವೆಂಕಟೇಶ (19), ಕಿರಣಕುಮಾರ (19) ಹಾಗೂ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೆ, ದೂರುದಾರ ಸಂದೀಪ್ ಶಿವನಗೌಡ ಹಿರೇಗೌಡ ಅವರಿಂದ ದರೋಡೆ ಮಾಡಿದ್ದ ₹1200 ನಗದು, ₹10 ಸಾವಿರ ಮೌಲ್ಯದ ಫೋನ್, ಕೃತ್ಯಕ್ಕೆ ಬಳಸಿದ್ದ ₹1.20 ಲಕ್ಷ ಮೌಲ್ಯದ ಆಟೋ ರಿಕ್ಷಾವನ್ನು ಜಪ್ತಿ ಮಾಡಿದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದರೋಡೆ ಪ್ರಕರಣ ಭೇದಿಸಿರುವ ಹಿನ್ನೆಲೆಯೇ ಕುತೂಹಲಕರವಾಗಿದೆ. ಆಟೋದಲ್ಲಿ ಬಂದ ಐವರು ದರೋಡೆಕೋರರು ನಿಂತಿದ್ದ ಲಾರಿಯನ್ನು ಹತ್ತಿ, ಚಾಲಕನಿಂದ ಹಣ, ಮೊಬೈಲ್ ದರೋಡೆ ಮಾಡುತ್ತಿದ್ದರು. ಈ ವೇಳೆ ಪ್ರತ್ಯಕ್ಷದರ್ಶಿಯೊಬ್ಬರು ತಕ್ಷಣ 112 ತುರ್ತು ಸ್ಪಂದನಾ ವಾಹನಕ್ಕೆ ಕರೆ ನೀಡಿ, ಮಾಹಿತಿ ನೀಡಿದ್ದರು. ಹೆದ್ದಾರಿ ಗಸ್ತು ಕರ್ತವ್ಯದಲ್ಲಿದ್ದ 112 ತುರ್ತು ಸ್ಪಂದನ ವಾಹನ ಸಿಬ್ಬಂದಿ ಸಕಾಲಕ್ಕೆ ಸ್ಥಳಕ್ಕೆ ದಾವಿಸಿದರು. ಆಗ ಐವರು ಆರೋಪಿಗಳು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ, ಎಎಸ್‌ಪಿಗಳಾದ ವಿಜಯಕುಮಾರ ಸಂತೋಷ, ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ ಸಿದ್ದನಗೌಡ ಮಾರ್ಗದರ್ಸನದಲ್ಲಿ ಕಾರ್ಯಾಚರಣೆ ನಡೆಯಿತು. ಗ್ರಾಮಾಂತರ ಇನ್‌ಸ್ಪೆಕ್ಟರ್ ಇ.ವೈ.ಕಿರಣಕುಮಾರ, ಪಿಎಸ್ಐ ಜ್ಯೋವಿತ್ ರಾಜ್ ಮತ್ತು 112 ಸಿಬ್ಬಂದಿ ಸಿದ್ದೇಶ, ಚಾಲಕ ವಿನೋದ, ಠಾಣೆ ಸಿಬ್ಬಂದಿ ದೇವೇಂದ್ರ ನಾಯ್ಕ, ನಾಗಭೂಷಣ, ಅಣ್ಣಯ್ಯ, ಮಹಮ್ಮದ್ ಯೂಸೂಫ್ ಅತ್ತಾರ್, ಪಿ.ಎಂ.ವೀರೇಶ ಕಾರ್ಯಾಚರಣೆ ತಂಡದಲ್ಲಿದ್ದರು.