ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯಾದ್ಯಂತ 5000 ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಹೇಳಿದರು.ಜಿಲ್ಲೆಯ ಗುರುಮಠಕಲ್ ತಾಲೂಕಿನ ತಾತಳಗೇರಾ ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ನಡೆದ ಸಸಿ ನೆಡುವ ಅಭಿಯಾನದ ಅಂಗವಾಗಿ ಸಿಂಗರಿಸಿದ ಎತ್ತಿನ ಗಾಡಿಯಲ್ಲಿ ಸಸಿಗಳನ್ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಜಾ-ಭಜಂತ್ರಿಗಳ ಸಮೇತ ನಡೆಸಿದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾರಿ ಮುಂಗಾರಿನಲ್ಲಿ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಅಭಿಯಾನದಲ್ಲಿ ಪ್ರತಿ ಗ್ರಾಮ, ಹೋಬಳಿ, ತಾಲೂಕು ಸೇರಿದಂತೆ ವಿವಿಧೆಡೆ ಸಂಚರಿಸಿ ಸಸಿ ನೆಡಲಾಗುವುದು. ಬರುವ ಆಗಸ್ಟ್ ತಿಂಗಳ ಕೊನೆಯವರೆಗೆ ಈ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಅದಕ್ಕೆ ತಮ್ಮ ಮಕ್ಕಳ ಹೆಸರು ಇಟ್ಟು ಬೆಳೆಸಬೇಕು. ಮಕ್ಕಳಂತೆ ಸಸಿಗಳನ್ನು ಬೆಳೆಸಿ, ದೊಡ್ಡ ಮರಗಳನ್ನಾಗಿ ಮಾಡಿದಲ್ಲಿ ಪರಿಸರ ರಕ್ಷಣೆಯಾಗುತ್ತದೆ. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಬಿಟ್ಟುಕೊಟ್ಟು ಹೋಗಲು ಸಾಧ್ಯವಾಗುತ್ತದೆ ಎಂದರು.
ಸಸಿ ನೆಡುವುದಷ್ಟೇ ಸಾಲದು, ಅದನ್ನು ಪಾಲನೆ ಪೋಷಣೆ ಮಾಡುವುದು ಅತ್ಯಂತ ಮಹತ್ವದ ಕೆಲಸ. ಇದು ಪ್ರತಿಯೊಬ್ಬರ ಕರ್ತವ್ಯ ಆಗಬೇಕು ಎಂದರು.ನಂತರ ಶಾಲಾವರಣದಲ್ಲಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಪಿಯುಸಿಯಲ್ಲಿ ಶೇ.92 ರಷ್ಟು ಅಂಕ ಪಡೆದ ಗ್ರಾಮೀಣ ವಿದ್ಯಾರ್ಥಿ ಕನಕಪ್ಪ ಮೇದಾರ ಅವರನ್ನು ಸನ್ಮಾನಿಸಲಾಯಿತು.
ಜಯವಂತ ದಳಪತಿ, ಜಲ್ಲಪ್ಪ, ರಫೀಕ್ ಪಟೇಲ್, ಬಾಬಾ ಖಾನ್, ಮಲ್ಲಿಕಾರ್ಜುನ ಎಸ್ಡಿಎಂಸಿ, ಶರಣಪ್ಪ, ಸಾಬಣ್ಣ, ಹುಸೇನಪ್ಪ, ಇಬ್ರಾಹಿಂ, ಸಣ್ಣ ಹಣಮಂತ, ಬಾಲಪ್ಪ, ಶರಣಪ್ಪ, ಸಣ್ಣ ಮರಗಪ್ಪ, ತಾಯಪ್ಪ, ಸಾಬಣ್ಣ, ಯಂಕಪ್ಪ, ಭೀಮಪ್ಪ, ಸಣ್ಣ ಶಿವಪ್ಪ, ಮಾಳಪ್ಪ, ಸಾಬಣ್ಣ, ಶೇಕಪ್ಪ, ಶಂಕ್ರಪ್ಪ, ಸಾಬಣ್ಣ, ಆಶಪ್ಪ, ಸಿದ್ದಪ್ಪ ಸೇರಿದಂತೆ ಇತರರಿದ್ದರು.