ಕ್ರೇನ್‌ ಟವರ್‌ ತುಂಡಾಗಿ ಶೆಡ್‌ಮೇಲೆ ಬಿದ್ದು ಐದು ಕಾರ್ಮಿಕರಿಗೆ ಗಾಯ

KannadaprabhaNewsNetwork |  
Published : Oct 13, 2025, 02:01 AM IST

ಸಾರಾಂಶ

ಮೆಟ್ರೋ ಕಾಮಗಾರಿಗೆ ಬಳಸುತ್ತಿರುವ ಬೃಹತ್‌ ಕ್ರೇನ್‌ ಟವರ್‌ ತುಂಡಾಗಿ ಕಾರ್ಮಿಕರ ಶೆಡ್‌ಗಳ ಮೇಲೆ ಬಿದ್ದ ಪರಿಣಾಮ ಐವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಆವಲಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಟ್ರೋ ಕಾಮಗಾರಿಗೆ ಬಳಸುತ್ತಿರುವ ಬೃಹತ್‌ ಕ್ರೇನ್‌ ಟವರ್‌ ತುಂಡಾಗಿ ಕಾರ್ಮಿಕರ ಶೆಡ್‌ಗಳ ಮೇಲೆ ಬಿದ್ದ ಪರಿಣಾಮ ಐವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಆವಲಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಭಾನುವಾರ ಬೆಳಗ್ಗೆ ಸುಮಾರು 11.30ಕ್ಕೆ ಕೆ.ಆರ್‌.ಪುರ ಸಮೀಪದ ಮೇಡಹಳ್ಳಿ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ.

ಬಿಹಾರ ಮೂಲದ ಲಾಲೂ (30), ಕುರ್ಬನ್‌ (19), ಇಲಿಯಾಜ್‌ (38), ಸಮೀಮ್‌ (28) ಮತ್ತು ಶಾಮದೇವ್‌ (56) ಎಂಬ ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಪೈಕಿ ಲಾಲೂ ಮತ್ತು ಕುರ್ಬನ್‌ ತಲೆಗೆ ಪೆಟ್ಟು ಬಿದ್ದಿದ್ದು ಸ್ಥಿತಿ ಗಂಭೀರವಾಗಿದೆ. ಸದ್ಯ ಐವರು ಗಾಯಾಳುಗಳಿಗೆ ಭಟ್ಟರಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆಯಲ್ಲಿ ಕಾರ್ಮಿಕರ ಐದು ಶೆಡ್‌ಗಳು ಧ್ವಂಸವಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಯೋಗಿಕ ಪರೀಕ್ಷೆ ವೇಳೆ ಅವಘಡ:

ಮೇಡಹಳ್ಳಿ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ಎ.ಎಸ್. ಕ್ರೇನ್‌ ಸರ್ವೀಸ್‌ನಿಂದ ಭಾರೀ ಗಾತ್ರದ ವಸ್ತುಗಳನ್ನು ಮೇಲಕ್ಕೆ ಎತ್ತುವುದು, ಇಳಿಸುವುದು ಮಾಡಲಾಗುತ್ತಿದೆ. ಅದರಂತೆ ಭಾನುವಾರ ಬೆಳಗ್ಗೆ ಈ ಕ್ರೇನ್‌ಗಳನ್ನು ರಿಪೇರಿ ಮಾಡಿ ಪ್ರಾಯೋಗಿಕವಾಗಿ ಕೆಲ ಭಾರದ ವಸ್ತುಗಳನ್ನು ಎತ್ತಲಾಗುತ್ತಿತ್ತು. ಈ ವೇಳೆ ಕ್ರೇನ್‌ ಟವರ್‌ ತುಂಡಾಗಿ ಕಾರ್ಮಿಕರು ನೆಲೆಸಿದ್ದ ಐದು ಶೆಡ್‌ಗಳ ಮೇಲೆ ಬಿದ್ದು ಅವಘಡ ಸಂಭವಿಸಿದೆ.

ಜನವಸತಿ ಪ್ರದೇಶ ಸಮೀಪದ ಖಾಲಿ ಜಾಗದಲ್ಲಿ ಈ ಕ್ರೇನ್‌ಗಳನ್ನು ನಿಲುಗಡೆ ಮಾಡಲಾಗಿತ್ತು. ಯಾವುದೇ ಅನುಮತಿ ಇಲ್ಲದೇ ಜನವಸತಿ ಪ್ರದೇಶಗಳಲ್ಲಿ ಈ ಕ್ರೇನ್‌ಗಳನ್ನು ಬಳಸುತ್ತಿರುವ ಬಗ್ಗೆ ಸ್ಥಳೀಯರು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಆದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ.

ಈ ಕ್ರೇನ್‌ಗಳು ಚಂದ್ರಶೇಖರ್‌ ಎಂಬಾತನಿಗೆ ಸೇರಿದ್ದು ಎಂಬುದು ಗೊತ್ತಾಗಿದೆ. ಈ ಸಂಬಂಧ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಬಂಡಿಗಣಿಯಲ್ಲಿಂದು ಸರ್ವಧರ್ಮ ಮಹಾಸಂಗಮ: ಸಿಎಂ ಭಾಗಿ
ಆರೆಸ್ಸೆಸ್‌ ಬೆಳವಣಿಗೆ ಕೆಲ ಶಕ್ತಿ, ಸಂಘಟನೆಗಳಿಗೆ ಸಹಿಸಲಾಗ್ತಿಲ್ಲ: ಅರುಣಕುಮಾರ