ಬಿಸಿಎಂ ಹಾಸ್ಟೆಲ್ ಗಳ ಅವ್ಯವಸ್ಥೆ ಸರಿಪಡಿಸಿ: ಕನ್ನಡಪರ ಸಂಘಟನೆಗಳು

KannadaprabhaNewsNetwork | Published : Feb 16, 2024 1:49 AM

ಸಾರಾಂಶ

ಹಲವು ಹಾಸ್ಟೆಲ್ ಗಳಲ್ಲಿ ರಾತ್ರಿ ಊಟ ನೀಡುವ ಸಂದರ್ಭದಲ್ಲಿ ವಾರ್ಡನ್ ಗಳು ಗೈರು ಹಾಜರಾಗಿರುವುದು ಸಾಮಾನ್ಯ ಎನ್ನುವಂತಾಗಿದೆ. ಬೆಳಿಗ್ಗೆ 7.30 ರಿಂದ ರಾತ್ರಿ 10 ಗಂಟೆಯವರೆಗೂ ಕರ್ತವ್ಯದ ಅವಧಿಯಿದ್ದರೂ ಯಾವೊಬ್ಬ ವಾರ್ಡನ್ ಕೂಡ ಈ ಸಮಯ ಪಾಲಿಸುತ್ತಿಲ್ಲ. ಹೆಚ್ಚಿನ ಹಾಸ್ಟೆಲ್ ಗಳಲ್ಲಿ ಬಯೋಮೆಟ್ರಿಕ್ ಅನ್ನು ಕಾಟಾಚಾರಕ್ಕೆ ಬಳಸುತ್ತಿದ್ದು, ಪುಸ್ತಕದಲ್ಲಿ ಹಾಜರಾತಿ ಪಡೆಯಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಿ । ಕನ್ನಡಪರ ಸಂಘಟನೆಗಳಿಂದ ಡೀಸಿಗೆ ಮನವಿ

ಕನ್ನಡಪ್ರಭ ವಾರ್ತೆ ರಾಮನಗರ

ಬಿಸಿಎಂ ಹಾಸ್ಟೆಲ್ ಗಳಲ್ಲಿನ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿಯವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿಯವರನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಬಿಸಿಎಂ ಹಾಸ್ಟೆಲ್ ಗಳಲ್ಲಿನ ಅಧಿಕಾರಿ ಮತ್ತು ನೌಕರರ ನಡುವಿನ ವೈಮನಸ್ಥಿತಿಯ ಸಂಘರ್ಷಕ್ಕೆ ವಿದ್ಯಾರ್ಥಿಗಳನ್ನು ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ವಸತಿ ನಿಲಯಗಳಲ್ಲಿನ ಇಂತಹ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಹಲವು ಹಾಸ್ಟೆಲ್ ಗಳಲ್ಲಿ ರಾತ್ರಿ ಊಟ ನೀಡುವ ಸಂದರ್ಭದಲ್ಲಿ ವಾರ್ಡನ್ ಗಳು ಗೈರು ಹಾಜರಾಗಿರುವುದು ಸಾಮಾನ್ಯ ಎನ್ನುವಂತಾಗಿದೆ. ಬೆಳಿಗ್ಗೆ 7.30 ರಿಂದ ರಾತ್ರಿ 10 ಗಂಟೆಯವರೆಗೂ ಕರ್ತವ್ಯದ ಅವಧಿಯಿದ್ದರೂ ಯಾವೊಬ್ಬ ವಾರ್ಡನ್ ಕೂಡ ಈ ಸಮಯ ಪಾಲಿಸುತ್ತಿಲ್ಲ. ಹೆಚ್ಚಿನ ಹಾಸ್ಟೆಲ್ ಗಳಲ್ಲಿ ಬಯೋಮೆಟ್ರಿಕ್ ಅನ್ನು ಕಾಟಾಚಾರಕ್ಕೆ ಬಳಸುತ್ತಿದ್ದು, ಪುಸ್ತಕದಲ್ಲಿ ಹಾಜರಾತಿ ಪಡೆಯಲಾಗುತ್ತಿದೆ. ಇದರಿಂದ ಭ್ರಷ್ಟಾಚಾರಕ್ಕೆ ಎಡೆಮಾಡಿ ಕೊಟ್ಟಂತಾಗುತ್ತದೆ. ಹಾಸ್ಟೆಲ್ ನಲ್ಲಿ ಇಲ್ಲದೆ ಇರುವ ವಿದ್ಯಾರ್ಥಿಗಳನ್ನು ಕೂಡ ಹಾಜರಾಗಿದ್ದಾರೆ ಎಂದು ನಮೂದಿಸಿ ಅವರ ಊಟದ ಖರ್ಚಿನ ಹಣವನ್ನು ವಾಮ ಮಾರ್ಗದಲ್ಲಿ ಲಪಟಾಯಿಸಲಾಗುತ್ತಿದೆ ಎಂದು ದೂರಿದರು.

ರಾಮನಗರ ತಾಲೂಕಿನ ಹೆಚ್ಚಿನ ಹಾಸ್ಟೆಲ್ ಗಳಲ್ಲಿ ಗುಣಮಟ್ಟದ ಆಹಾರವನ್ನು ನೀಡುತ್ತಿಲ್ಲವೆಂದು ವಿದ್ಯಾರ್ಥಿಗಳು ನೇರವಾಗಿ ಆರೋಪಿಸಿರುತ್ತಾರೆ. ಒಂದು ಹಾಸ್ಟೆಲ್ ನಲ್ಲಿ ಮಾತ್ರ ಪ್ರತಿದಿನ ಮೊಟ್ಟೆ ನೀಡುವ ವ್ಯವಸ್ಥೆ ಇದ್ದು, ಉಳಿದ ಹಾಸ್ಟೆಲ್ ಗಳಲ್ಲಿ ಇದು ಇರುವುದಿಲ್ಲ. ಈ ರೀತಿಯ ತಾರತಮ್ಯವನ್ನು ಹೋಗಲಾಡಿಸಿ ಎಲ್ಲಾ ಹಾಸ್ಟೆಲ್ ಗಳಲ್ಲೂ ಕೂಡ ಪ್ರತಿದಿನ ಮೊಟ್ಟೆ ನೀಡುವ ವ್ಯವಸ್ಥೆಯನ್ನು ಮಾಡಬೇಕೆಂದು ಕೋರಿದರು.

ಹೆಚ್ಚಿನ ಹಾಸ್ಟೆಲ್ ಗಳಲ್ಲಿ ಕಾಯಂ ಅಡುಗೆಯವರ ಕೊರತೆ ಎದ್ದು ಕಾಣುತ್ತಿದೆ. ಈ ತಾಲೂಕಿನ ಹಾಸ್ಟೆಲ್ ಗಳಿಗೆ ನೇಮಕಾತಿ ಹೊಂದಿದ್ದರೂ ಹೆಚ್ಚಿನ ಅಡುಗೆಯವರು ನಿಯೋಜನೆ ಮೇರೆಗೆ ಬೇರೆ ಹಾಸ್ಟೆಲ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇದರಿಂದ ಇಲ್ಲಿನ ಹಾಸ್ಟೆಲ್ ಗಳಲ್ಲಿ ಅರೆಕಾಲಿಕ ಹಾಗೂ ವೃತ್ತಿಪರರಲ್ಲದ ಅಡುಗೆಯವರನ್ನು ಹಾಸ್ಟೆಲ್ ವಾರ್ಡನ್ ಗಳು ತಮಗಿಷ್ಟ ಬಂದಂತೆ ನೇಮಕ ಮಾಡಿಕೊಂಡು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿರುತ್ತಾರೆ. ಆದ್ದರಿಂದ ಕಾಯಂ ಆಗಿ ನೇಮಕಗೊಂಡ ಅಡುಗೆಯವರನ್ನು ಅವರು ನೇಮಕಗೊಂಡ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸುವಂತೆ ಮಾಡಬೇಕೆಂದು ಒತ್ತಾಯಿಸಿದರು.

ಹಾಸ್ಟೆಲ್ ಗಳ ಅವ್ಯವಸ್ಥೆಗಳನ್ನು ಸರಿಪಡಿಸಿ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ತಪ್ಪಿಸಬೇಕೆಂದು ನಷ್ಟ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಒಂದು ತಿಂಗಳೊಳಗೆ ಸರಿಪಡಿಸಬೇಕು. ಇಲ್ಲದಿದ್ದರೆ ಕನ್ನಡಪರ ಸಂಘಟನೆಗಳ ಒಕ್ಕೂಟ ಈ ವಿಚಾರವಾಗಿ ಉಗ್ರ ಹೋರಾಟ ನಡೆಸಲಿದೆ ಎಂದು ಪದಾಧಿಕಾರಿಗಳ ಎಚ್ಚರಿಸಿದರು.

ಕರವೇ ಸ್ವಾಭಿಮಾನಿ ಬಣ ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಕರವೇ (ಪ್ರವೀಣ್ ಶೆಟ್ಟಿ ಬಣ) ಜಿಲ್ಲಾಧ್ಯಕ್ಷ ರಾಜು, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಯೋಗೇಶ್, ಜನಮನ ವೇದಿಕೆ ರಾಜ್ಯಾಧ್ಯಕ್ಷ ಕನ್ನಡರಾಜು, ಕರವೇ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಕಿರಣ್ ಹಾಜರಿದ್ದರು.

---------------

15ಕೆಆರ್ ಎಂಎನ್ 2.ಜೆಪಿಜಿ

ಕನ್ನಡಪರ ಸಂಘಟನೆಗಳ ಒಕ್ಕೂಟ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

-----------------

Share this article