ಕ್ವಿಂಟಲ್‌ ಭತ್ತಕ್ಕೆ ₹3500 ನಿಗದಿಪಡಿಸಿ: ರೈತ ಸಂಘ ಆಗ್ರಹ

KannadaprabhaNewsNetwork |  
Published : May 16, 2025, 01:53 AM IST
15ಕೆಡಿವಿಜಿ8-ಬತ್ತಕ್ಕೆ ಕನಿಷ್ಟ ಬೆಂಬಲ ಬೆಲೆಗೆ ಸುಗ್ರೀವಾಜ್ಞೆ ಹೊರಡಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ರೈತರುಬೈಕ್ ರ್ಯಾಲಿ ನಡೆಸಿ, ಎಪಿಎಂಸಿ, ಡಿಸಿ ಕಚೇರಿ ಮುಂದೆ ಪ್ರತಿಭಟಿಸಿದರು. | Kannada Prabha

ಸಾರಾಂಶ

ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಸುಗ್ರೀವಾಜ್ಞೆ ಹೊರಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಮತ್ತು ಜಿಲ್ಲಾ ಘಟಕದಿಂದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.

- ಕೇಂದ್ರ, ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿ ಬೈಕ್‌ ರ್ಯಾಲಿ ।

- ರೈತ ಸಂಘ, ಹಸಿರು ಸೇನೆ ನೇತೃತ್ವದಲ್ಲಿ ಡಿಸಿ ಕಚೇರಿ ಮುತ್ತಿಗೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಸುಗ್ರೀವಾಜ್ಞೆ ಹೊರಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಮತ್ತು ಜಿಲ್ಲಾ ಘಟಕದಿಂದ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರ ನೇತೃತ್ವದಲ್ಲಿ ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಬೈಕ್ ರ್ಯಾಲಿಯಲ್ಲಿ ಸಂಘದ ಪದಾಧಿಕಾರಿಗಳು, ರೈತರು, ಭತ್ತ ಬೆಳೆಗಾರರು ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಎಪಿಎಂಸಿ ಕಚೇರಿಗೆ ತೆರಳಿ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.

ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿ, ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಭತ್ತಕ್ಕೆ ₹2320 ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಇದಕ್ಕೆ ಯಾವುದೇ ಕಾನೂನಿನ ಮಾನ್ಯತೆ ಇಲ್ಲ. ಖರೀದಿದಾರರು, ದಲ್ಲಾಲರು, ಕಂಪನಿ ಖರಿದೀದಾರರು ಮನಸೋಇಚ್ಛೆ ಭತ್ತ ಖರೀದಿಸುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಆರ್‌ಎನ್‌ಆರ್ ಸೋನಾ ಮಸೂರಿ ಭತ್ತಕ್ಕೆ ₹1600 ದರ ಇದೆ. ರೈತರು 1 ಎಕರೆಯಲ್ಲಿ ಭತ್ತ ಬೆಳೆಯಲು ₹40ರಿಂದ ₹45 ಸಾವಿರ ವೆಚ್ಚ ಮಾಡಬೇಕಾಗುತ್ತದೆ ಎಂದರು.

ಬೇಸಿಗೆ ಮತ್ತು ಮಳೆಗಾಲದ ಭತ್ತ ಸರಾಸರಿ ಪರಿಗಣಿಸಿದರೆ ಎಕರೆಗೆ 25 ಕ್ವಿಂಟಲ್ ಮಾತ್ರ ಇಳುವರಿ ಬರುತ್ತದೆ. ₹1600 ದರದಲ್ಲಿ ಭತ್ತ ಮಾರಿದರೆ ₹40 ಸಾವಿರ ಆದಾಯ ಬರುತ್ತದೆ. ಆದರೆ, ರೈತ ವೆಚ್ಚ ಮಾಡಿದ್ದು ₹46 ಸಾವಿರ. ಒಟ್ಟಾರೆ ಪ್ರತಿ ಎಕರೆಗೆ ರೈತ ₹6 ಸಾವಿರಗಳಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಿ ಪ್ರತಿ ಕ್ವಿಂ. ಭತ್ತಕ್ಕೆ ಕೇರಳ ಮಾದರಿಯಲ್ಲಿ ₹1200 ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರದ ಕನಿಷ್ಠ ಬೆಂಬಲ ಬೆಲೆ ಮತ್ತು ರಾಜ್ಯದ ಪ್ರೋತ್ಸಾಹಧನ ಎರಡೂ ಸೇರಿ ಪ್ರತಿ ಕ್ವಿಂ. ಭತ್ತಕ್ಕೆ ₹3500 ನೀಡಬೇಕು. ಇದು ಬೆಳೆ ನಷ್ಟ ಸರಿದೂಗಿಸಲು ರೈತನಿಗೆ ಸ್ವಲ್ಪವಾದರೂ ಅನುಕೂಲ ಆಗುತ್ತದೆ. 3 ವರ್ಷ ನಿರಂತರ ಹೋರಾಡಿದರೂ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ಜಾರಿಗೊಳಿಸಲಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರ ಜಾತಿ ಗಣತಿಯನ್ನು ಹಠಕ್ಕೆ ಬಿದ್ದು ಮಾಡಿಸಿದೆ. ಅದೇ ರೀತಿ ಸುಗ್ರೀವಾಜ್ಞೆ ಮೂಲಕ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಮುಖಂಡರಾದ ಚಿನ್ನಸಮುದ್ರ ಭೀಮಾನಾಯ್ಕ, ಯಲೋದಹಳ್ಳಿ ರವಿಕುಮಾರ, ಚಿಕ್ಕಮಲ್ಲನಹೊಳೆ ಚಿರಂಜೀವಿ, ರಾಜನಹಟ್ಟಿ ರಾಜು, ಹೂವಿನಮಡು ನಾಗರಾಜ, ಚಿಕ್ಕತೊಗಲೇರಿ ನಟರಾಜ, ಕೆಂಚಪ್ಪ, ನಿಂಗಪ್ಪ, ಯರನಾಗತಿಹಳ್ಳಿ ಪರಮೇಶ್ವರಪ್ಪ, ಕೈದಾಳ ವಸಂತಕುಮಾರ, ಆಲೂರು ಪರಶುರಾಮ, ಕಡರನಾಯಕನಹಳ್ಳಿ ಪ್ರಭು, ಅಸ್ತಾಫನಹಳ್ಳಿ ಗಂಡುಗಲಿ, ಕೋಲ್ಕುಂಟೆ ಬಸವರಾಜ, ಕುಂದುವಾಡ ದೊಡ್ಡಣ್ಣ, ಮಹೇಶ, ಆಲೂರು ಪುಟ್ಟನಾಯ್ಕ, ಕೊಡಗನೂರು ಭೀಮಣ್ಣ, ತಿಮ್ಮಣ್ಣ, ಹುಚ್ಚವ್ವನಹಳ್ಳಿ ಪ್ರಕಾಶ ಇತರರು ಇದ್ದರು.

- - -

(ಕೋಟ್‌) ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಭತ್ತ ಖರೀದಿಸಿದರೆ 3ರಿಂದ 5 ವರ್ಷ ಜೈಲು ಶಿಕ್ಷೆ, ಲೈಸೆನ್ಸ್ ರದ್ಧು, ವ್ಯತ್ಯಾಸದ ಹಣದ 5 ಪಟ್ಟು ದಂಡವನ್ನು ಖರೀದಿದಾರನೇ ರೈತನಿಗೆ ನೀಡಬೇಕು ಎಂಬ ಕಠಿಣ ಕಾನೂನು ಬರಬೇಕು. ಆಗಲೇ ರೈತನಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿಯಾಗಲಿದೆ. ಇಲ್ಲದಿದ್ದರೆ ಸರ್ಕಾರ ಘೋಷಿಸುವ ಕನಿಷ್ಠ ಬೆಂಬಲ ಬೆಲೆಗೆ ಬೀದಿನಾಯಿಯಷ್ಟೂ ಕಿಮ್ಮತ್ತು ಇರುವುದಿಲ್ಲ. ಸರ್ಕಾರ ಗಂಭೀರವಾಗಿ ಸುಗ್ರೀವಾಜ್ಞೆ ಹೊರಡಿಸಿ, ಕಾಯಿದೆ ಜಾರಿಗೆ ತರಲಿ. - ಹುಚ್ಚವ್ವನಹಳ್ಳಿ ಮಂಜುನಾಥ, ರೈತ ಮುಖಂಡ

- - - -15ಕೆಡಿವಿಜಿ8:

ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಸುಗ್ರೀವಾಜ್ಞೆ ಹೊರಡಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ರೈತರು ಬೈಕ್ ರ್ಯಾಲಿ ನಡೆಸಿ, ಎಪಿಎಂಸಿ, ಡಿಸಿ ಕಚೇರಿ ಮುಂದೆ ಪ್ರತಿಭಟಿಸಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ