ಸರ್ಕಾರಿ ಶಾಲೆಗಳ ಸಮಸ್ಯೆ ನಿವಾರಣೆಯೇ ಆದ್ಯತೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : May 12, 2024, 01:17 AM IST
ಪೊಟೋ: 11ಎಸ್‌ಎಂಜಿಕೆಪಿ02: ಮಧು ಬಂಗಾರಪ್ಪ  | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ನಮ್ಮ ಸರ್ಕಾರ ಇದನ್ನು ಸವಾಲಾಗಿ ಸ್ವೀಕಾರ ಮಾಡಿದ್ದು, ಅನೇಕ ವರ್ಷಗಳಿಂದ ಬಳವಳಿಯಾಗಿ ಬಂದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇವೆ. ನಾವು ಬರುವುದಕ್ಕಿಂತ ಮುನ್ನ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇತ್ತು. ಈಗ ಬಹುತೇಕ ಶಾಲೆಗಳಿಗೆ ಶಿಕ್ಷಕರ ನೇಮಿಸಿಕೊಳ್ಳಲಾಗಿದೆ. ಇನ್ನೂ ಹೊಸ ನೇಮಕಾತಿಗಳು ಆಗಲು ಬಾಕಿ ಇದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಶಿಕ್ಷಣ ಇಲಾಖೆಯಲ್ಲಿ ಈ ಬಾರಿ ಅನೇಕ ಬದಲಾವಣೆಯಾಗಿದೆ. ಪೌಷ್ಟಿಕ ಆಹಾರ ನೀಡುತ್ತಿದ್ದೇವೆ. ಪಠ್ಯಗಳ ಬದಲಾವಣೆಯಾಗಿದೆ. ಸರ್ಕಾರಿ ಶಾಲೆಯ ನ್ಯೂನತೆಗಳನ್ನು ಒಂದೊಂದಾಗಿ ಪರಿಹರಿಸುತ್ತಿದ್ದೇವೆ. ಈ ಎಲ್ಲ ಪ್ರಯತ್ನದ ಫಲವಾಗಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರಿ ಶಾಲೆಯ ವಿದ್ಯಾರ್ಥಿ ಅಂಕಿತಾ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ತಂದು ಇಲಾಖೆಗೆ ಕೀರ್ತಿ ತಂದಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಸರ್ಕಾರಿ ಶಾಲೆಗಳಲ್ಲಿ ಅನೇಕ ನ್ಯೂನತೆಗಳಿವೆ. ಎಲ್ಲವನ್ನೂ ಒಂದೇ ಬಾರಿ ಸರಿ ಮಾಡುವುದು ಅಸಾಧ್ಯ. ಹಂತ-ಹಂತವಾಗಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೂಗೊಳ್ಳಲಾಗಿದೆ ಎಂದರು. ಆತ್ಮವಿಶ್ವಾಸ ಹೆಚ್ಚಿಸಲು 2 ಬಾರಿ ಪರೀಕ್ಷೆಗೆ ಅವಕಾಶ:

ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ನಮ್ಮ ಸರ್ಕಾರ ಇದನ್ನು ಸವಾಲಾಗಿ ಸ್ವೀಕಾರ ಮಾಡಿದ್ದು, ಅನೇಕ ವರ್ಷಗಳಿಂದ ಬಳವಳಿಯಾಗಿ ಬಂದ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದೇವೆ. ನಾವು ಬರುವುದಕ್ಕಿಂತ ಮುನ್ನ ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇತ್ತು. ಈಗ ಬಹುತೇಕ ಶಾಲೆಗಳಿಗೆ ಶಿಕ್ಷಕರ ನೇಮಿಸಿಕೊಳ್ಳಲಾಗಿದೆ. ಇನ್ನೂ ಹೊಸ ನೇಮಕಾತಿಗಳು ಆಗಲು ಬಾಕಿ ಇದೆ. ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ನೀರು ಕೊಟ್ಟಿದ್ದೇವೆ. ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಿದ್ದೇವೆ. ಕಡಿಮೆ ಅಂಕಗಳಿಸಿದ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಇನ್ನೆರಡು ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದೇವೆ ಎಂದರು.

ಪರೀಕ್ಷೆಯಲ್ಲಿ ಪಾರದರ್ಶಕದಿಂದ ಕಡಿಮೆ ಫಲಿತಾಂಶ:

ಶೇ.20 ಗ್ರಾಮೀಣ ಕೃಪಾಂಕ ನೀಡಿದ್ದೇವೆ. ಇವೆಲ್ಲವುದರ ಪರಿಣಾಮ ಉತ್ತಮ ಫಲಿತಾಂಶ ಬಂದಿದೆ. ಆದರೆ, ಪರೀಕ್ಷೆಯ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಪಾರದರ್ಶಕವಾಗಿ ಪರೀಕ್ಷೆಯನ್ನು ನಡೆಸಿದ್ದರಿಂದ ರಾಜ್ಯದಲ್ಲಿ 75 ಶಾಲೆಗಳಿಗೆ ಶೂನ್ಯ ಫಲಿತಾಂಶ ಬಂದಿವೆ. ಒಟ್ಟಾರೆ ಫಲಿತಾಂಶವೂ ಕಡಿಮೆ ಆಗಿರಬಹುದು. ಆದರೆ, ಈಗ ಬಿಗಿ ಮಾಡಿದ್ದರ ಪರಿಣಾಮ ಮುಂದಿನ ಉನ್ನತ ಶಿಕ್ಷಣಕ್ಕೆ ಅವರ ಭವಿಷ್ಯ ಉಜ್ವಲವಾಗಲಿದೆ. ಅನೇಕ ಪೋಷಕರು ಪರೀಕ್ಷೆಗಳ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಗಾಗಿ ಈ ಬಾರಿ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ಸರ್ಕಾರಿ ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆ:

ಈ ಬಾರಿ 7 ಸಾವಿರ ಕೋಟಿ ಶಿಕ್ಷಣ ಇಲಾಖೆಗೆ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ನೀಡಿದ್ದಾರೆ. ಶಾಲೆಗಳ ದುರಸ್ತಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. 3 ವರ್ಷದಲ್ಲಿ 3 ಸಾವಿರ ಕೆಪಿಎಸ್ ಶಾಲೆಗಳನ್ನು ಮಾಡಿ ಮೇಲ್ದರ್ಜೆಗೆ ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನೂ ಅನೇಕ ಸರ್ಕಾರಿ ಶಾಲೆಗಳ ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಅನುದಾನ ನೀಡದೇ ಕಾಮಗಾರಿಗೆ ಅನುಮೋದನೆ ನೀಡಿದ್ದರು. ಹೀಗಾಗಿ ಕಾಮಗಾರಿ ನಿಧಾನಗತಿಯಲ್ಲಿತ್ತು. ಆದರೆ, ಈ ಬಾರಿ ಅನುದಾನ ಬಿಡುಗಡೆ ಮಾಡಿದ್ದು, ಮಳೆಗಾಲ ಮುನ್ನವೇ ದುರಸ್ತಿ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಜಿತೇಂದ್ರ, ಶಮಂತ್, ಪದ್ಮನಾಭ್, ಶಿ.ಜು.ಪಾಶ, ಜಿ.ಡಿ.ಮಂಜುನಾಥ್, ಅನ್ನೀಸ್ ಇದ್ದರು.

ಜಿಲ್ಲೆ 3ನೇ ಸ್ಥಾನಕ್ಕೆ ಬಡ್ತಿ; ಸಂತೋಷವಾಗಿದೆ

ಶಿವಮೊಗ್ಗ ಜಿಲ್ಲೆ 28ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಬಡ್ತಿ ಪಡೆದಿರುವುದು ಸಂತೋಷ ತಂದಿದೆ. ಶಿಕ್ಷಣ ಮಂತ್ರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಅನೇಕರು ನನ್ನ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿ ಸಮಯ ವ್ಯರ್ಥ ಮಾಡುವುದಿಲ್ಲ, ಟ್ರೋಲ್ ಮಾಡುವವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ.

- ಮಧು ಬಂಗಾರಪ್ಪ, ಶಿಕ್ಷಣ ಸಚಿವಗ್ಯಾಂಗ್‌ವಾರ್ ಪ್ರಕರಣ: ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ

ಶಿವಮೊಗ್ಗದಲ್ಲಿ ಗ್ಯಾಂಗ್‍ವಾರ್‌ ಪ್ರಕರಣದಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇನೆ. ಈಗಾಗಲೇ ಸೂಕ್ತ ಕ್ರಮ ಕೈಗೊಂಡಿದ್ದಾರೆ. 19 ಜನರ ಬಂಧನವಾಗಿದೆ. ಹಾಗೇನಾದರೂ ವೈಫಲ್ಯಗಳಿದ್ದಲ್ಲಿ ಅಥವಾ ಇಲಾಖೆಗೆ ಮೊದಲೇ ಸುಳಿವು ಗೊತ್ತಿದ್ದು, ಕ್ರಮ ಕೈಗೊಳ್ಳದಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಬಿಜೆಪಿ ನಾಯಕ ಅಣ್ಣಾಮಲೈ ಅವರು ನನ್ನ ಬಗ್ಗೆ ಟ್ವಿಟ್ ಮಾಡಿದ್ದಾರೆ. ಆತನೊಬ್ಬ ಆಯೋಗ್ಯ, ರಾಜ್ಯದ ಪೆನ್ಶನ್ ಪಡೆದು ಅಲ್ಲಿ ಹೋಗಿ ರಾಜಕೀಯ ಮಾಡುತ್ತಾರೆ. ನೈರುತ್ಯ ಪದವೀಧರಕ್ಷೇತ್ರದ ಚುನಾವಣೆಗೆ ಎಸ್‌.ಪಿ.ದಿನೇಶ್‌ ಬಂಡಾಯವಾಗಿ ಸ್ಪರ್ಧೆ ಮಾಡುವುದು ಖಚಿತವಾದರೆ ಪಕ್ಷ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದು ಸಚಿವ ಮಧು ಪ್ರತಿಕ್ರಿಯಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ