ಎಫ್.ಕೆ.ಸಿ.ಸಿ.ಐ ಮತ್ತು ಮೈಸೂರು ವಾಣಿಜ್ಯ ಕೈಗಾರಿಕಾ ಸಂಸ್ಥೆ ನಿಯೋಗ ವಯನಾಡಿಗೆ

KannadaprabhaNewsNetwork | Published : Aug 1, 2024 1:50 AM

ಸಾರಾಂಶ

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅತಿ ಶೀಘ್ರದಲ್ಲಿ ಎಲ್ಲಾ ಬಗೆಯ ಕಾರ್ಯಚರಣೆ ಕೈಗೊಂಡಿದ್ದು, ಬೆಂಗಳೂರಿನ ಎನ್.ಡಿ.ಆರ್.ಎಫ್ ತಂಡ ಹಾಗೂ ಮದ್ರಾಸ್ ಎಂಜಿನಿಯರ್ ಗ್ರೂಪ್ ಸೇನಾ ಪಡೆಯ ತಂಡಗಳು ತ್ವರಿತ ಗತಿಯಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಧಾರಾಕಾರ ಮಳೆಗೆ ವಯನಾಡಲ್ಲಿ ಗುಡ್ಡ ಕುಸಿದು, ನಾಲ್ಕು ಗ್ರಾಮಗಳಲ್ಲಿ ಮನೆಗಳು ಭೂ ಸಮಾಧಿಯಾಗಿದ್ದು, ನದಿಯಲ್ಲಿ ಹಲವಾರು ಶವಗಳು ಕೊಚ್ಚಿ ಹೋದ ಘಟನೆಗೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಅಧ್ಯಕ್ಷ ಕೆ.ಬಿ.ಲಿಂಗರಾಜು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತುರ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.

ಎಫ್.ಕೆ.ಸಿ.ಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಅವರು ವಯನಾಡಿನ ಛೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಜಾನಿ ಪಟಾನಿ ಅವರೊಡನೆ ಮಾತನಾಡಿ, ಅಲ್ಲಿಯ ಆಗು ಹೋಗುಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.

ನೀರು, ಬಟ್ಟೆ, ಅಗತ್ಯ ದಿನ ಬಳಕೆಯ ವಸ್ತುಗಳು, ರೆಡಿ ಟು ಈಟ್ ವಸ್ತು, ಹಲವು ತಿಂಡಿ, ತಿನಿಸು, ಊಟದ ಪದಾರ್ಥಗಳನ್ನು ವಯನಾಡಿನ ಸಂತ್ರಸ್ತರಿಗೆ ಕಳುಹಿಸಿಕೊಡುವುದರಲ್ಲಿ ಅರ್ಥವಿಲ್ಲ. ಕಳುಹಿಸಿದರೂ ಅದು ಸಂತ್ರಸ್ತರಿಗೆ ತಲಪುವುದಕ್ಕಿಂತ ಇನ್ನೆಲ್ಲೋ ತಲಪಿ ಹಾಳಾಗುವ ಪರಿಸ್ಠಿತಿ ಎದುರಾಗುತ್ತದೆ ಎಂದರು.

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅತಿ ಶೀಘ್ರದಲ್ಲಿ ಎಲ್ಲಾ ಬಗೆಯ ಕಾರ್ಯಚರಣೆ ಕೈಗೊಂಡಿದ್ದು, ಬೆಂಗಳೂರಿನ ಎನ್.ಡಿ.ಆರ್.ಎಫ್ ತಂಡ ಹಾಗೂ ಮದ್ರಾಸ್ ಎಂಜಿನಿಯರ್ ಗ್ರೂಪ್ ಸೇನಾ ಪಡೆಯ ತಂಡಗಳು ತ್ವರಿತ ಗತಿಯಲ್ಲಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಆದ್ದರಿಂದ ದೀರ್ಘಕಾಲಿಕ ಯೋಜನೆಗಳನ್ನು ಸಂತ್ರಸ್ತರಿಗೆ ಮಾಡುವ ಉದ್ದೇಶವನ್ನು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮೂಲಕ ಹೊಂದಿದ್ದು ಇದಕ್ಕೆ ಬೇಕಾಗಿರುವ ಎಲ್ಲಾ ನೆರವು ಹಾಗೂ ಸಹಕಾರ ಕೋರಿದರು.

ಆದಷ್ಟು ಶೀಘ್ರದಲ್ಲಿ ವಯನಾಡಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜೊತೆ ಸಭೆ ನಡೆಸಿ, ದೀರ್ಘಕಾಲಿಕ ಪರಿಹಾರ ಕ್ರಮ ಕೈಗೊಳ್ಳಲು ಸಲಹೆ ಹಾಗೂ ಸಹಕಾರ ಕೇಳಿದರು.

ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ದಿನೇಶ್ ಈಗ ವಯನಾಡಿನ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯ ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದು, ಅವರು ಸಹ ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಗೌರವ ಕಾರ್ಯದರ್ಶಿ ಶಿವಾಜಿ ರಾವ್, ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ, ಗೌರವ ಕಾರ್ಯದರ್ಶಿ ಸಿ.ಎಂ. ಸುಬ್ರಮಣಿಯನ್, ಮೈಸೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಗೌರವ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್, ಮೈಸೂರು ಡಿಸ್ಟ್ರಿಕ್ಟ್ಡಿಸ್ಟ್ರಿಬ್ಯೂಟರ್ಸ್ ಅಧ್ಯಕ್ಷ ಲಖನ್ ನಾಯಕ್, ಹೊಟೇಲ್ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಹೆಗ್ಡೆ, ಯಾದವಗಿರಿ ಕೈಗಾಕೋದ್ಯಮಿಗಳ ಸಂಘದ ಉಪಾಧ್ಯಕ್ಷ ರಾಜಶೇಖರನ್ ಸೇರಿದಂತೆ ವಿವಿಧ ಕೈಗಾರಿಕೆಗಳ ಸಂಘದ ಪ್ರಮುಖರು ಇದ್ದರು.

Share this article