ಕನಕಪುರ: ಸ್ವಾತಂತ್ರ್ಯದ ಕನಸು ಕಂಡು ಹೋರಾಟವನ್ನೇ ಜೀವನವನ್ನಾಗಿಸಿಕೊಂಡಿದ್ದ ಕೆಚ್ಚೆದೆಯ ಸ್ವಾತಂತ್ರ್ಯ ವೀರರಾದ ಭಗತ್ ಸಿಂಗ್, ಸುಖ್‌ದೇವ್ ಮತ್ತು ಶಿವರಾಮ್ ರಾಜ್‌ಗುರು ಅವರ ಚಿಂತನೆ, ಆದರ್ಶ ಎಂದಿಗೂ ನಮಗೆ ದಾರಿ ದೀಪ ಎಂದು ಬಿಜೆಪಿ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಸುನೀಲ್ ತಿಳಿಸಿದರು.
ಬಿಜೆಪಿ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಮಾತನಾಡಿ, ಈ ದಿನ ನಮಗೆಲ್ಲಾ ಅತ್ಯಂತ ನೋವಿನ ದಿನ ಸ್ವಾತಂತ್ಯ ಸಂಗ್ರಾಮದಲ್ಲಿ ಪಾಲ್ಗೊಂಡು, ಬ್ರಿಟಿಷರ ವಿರುದ್ಧ ಹೋರಾಟದ ಕಹಳೆ ಮೊಳಗಿಸಿದ್ದ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್‌ದೇವ್ ಮತ್ತು ಶಿವರಾಮ್ ರಾಜ್‌ಗುರು ಹುತಾತ್ಮರಾದ ದಿನವಾಗಿದ್ದು ಪ್ರತಿ ಯೊಬ್ಬ ಭಾರತೀಯರು ಅವರ ತ್ಯಾಗ, ಬಲಿದಾನವನ್ನು ಎಂದು ಮರೆಯಬಾರದು ಎಂದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಾಗನಂದ ಮಾತನಾಡಿ, 1931ರ ಮಾರ್ಚ್ 23ರಂದು ಲಾಹೋರ್‌ನ ಸೆಂಟ್ರಲ್ ಜೈಲಿನಲ್ಲಿ ಭಗತ್ ಸಿಂಗ್, ಸುಖ್‌ದೇವ್ ಮತ್ತು ಶಿವರಾಮ್ ರಾಜ್‌ಗುರು ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ ದಿನವನ್ನು ದೇಶದಲ್ಲಿ ಬಲಿದಾನ ದಿನವಾಗಿ ಆಚರಿಸುವ ಮೂಲಕ ಅ ಮಹಾನ್ ಚೇತನಗಳಿಗೆ ಗೌರವ ಅರ್ಪಿಸಿಕೊಂಡು ಬರಲಾಗುತ್ತಿದೆ. ಭಗತ್ ಸಿಂಗ್ ನೇಣಿಗೆ ಏರಿಸಿದಾಗ ಅವರ ವಯಸ್ಸು ಕೇವಲ 23 ವರ್ಷ ಭಾರತ ಮಾತೆಯನ್ನು ಸ್ವಾತಂತ್ರ್ಯಗೊಳಿಸಬೇಕೆಂಬ ಹೋರಾಟ ತೀವ್ರಗೊಂಡಿದ್ದ ಸಂದರ್ಭದಲ್ಲಿ ಈ ಮೂವರು ಮುಂಚೂಣಿಯಲ್ಲಿ ನಿಂತು ದೇಶ ಪ್ರೇಮದ ಕಿಚ್ಚು ಹೊತ್ತಿಸಿದ್ದರು. ಇವರ ಹೋರಾಟದ ಮನೋಭಾವ ಬ್ರಿಟಿಷ್ ಆಡಳಿತಕ್ಕೂ ಬಿಸಿ ಮುಟ್ಟಿಸಿತ್ತು. ದೇಶವನ್ನು ದಾಸ್ಯದ ಸಂಕೋಲೆಯಿಂದ ಬಂಧ ಮುಕ್ತವಾಗಿಸಬೇಕೆಂದು ಕನಸು ಕಂಡಿದ್ದರು. ಇವರ ಪ್ರಖರ ವಿಚಾರಧಾರೆಗಳು ಅಂದು ಹಲವರಿಗೆ ಸ್ಫೂರ್ತಿ ತುಂಬಿ ಸ್ವಾತಂತ್ರ್ಯದ ಚಿಂತನೆ ಬಡಿದೆಬ್ಬಿಸಿದ್ದು ಇತಿಹಾಸ. ತಮ್ಮ ಪ್ರಖರ ಚಿಂತನೆಯ ಮೂಲಕ ದೇಶದ ಎಲ್ಲಾ ಜನರ ಹೃದಯ ಗೆದ್ದು ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆಯನ್ನು ಭಗತ್ ಸಿಂಗ್ ಜನಪ್ರಿಯಗೊಳಿಸಿದ್ದನ್ನು ಮರೆಯಲಾಗದು ಎಂದರು.ಈ ವೇಳೆ ಯುವ ಮೋರ್ಚಾದ ತಿಮ್ಮಪ್ಪ, ಮಧುಸೂಧನ್, ಮರಿಗೌಡ, ವೆಂಕಟರಾಮ, ಶಿವಕುಮಾರ್, ಅನಿಲ್, ಆನಂದ್, ತಾಸಿಲಾಖಾನ್, ಮಮತಾ, ಪವಿತ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್, ಶಿವಮಾದು, ಪರಮೇಶ್, ಶಿರೆಗೌಡ, ಮಹದೇವಸ್ವಾಮಿ, ಪಾಲಾಕ್ಷ, ಸಾತನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವೀಶ್, ಲಕ್ಷ್ಮಿನಾರಾಯಣ್, ವಿಜಿ ಹಾಗೂ ಕಾರ್ಯಕರ್ತರು ಹಾಜರಿದ್ದರು.
ಕೆ ಕೆ ಪಿ ಸುದ್ದಿ 01:ಕನಕಪುರ ತಾಲೂಕು ಬಿಜೆಪಿ ಘಟಕದ ವತಿಯಿಂದ ಬಲಿದಾನ ದಿನದ ಪ್ರಯುಕ್ತ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.