ಕನ್ನಡಪ್ರಭ ವಾರ್ತೆ ಬೆಂಗಳೂರು:
ಈ ಯೋಜನೆಗಳ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆ ಪರಿಶೀಲಿಸಲು ಕೆಪಿಸಿಎಲ್ ವತಿಯಿಂದ ಸಾಧ್ಯತಾ ಅಧ್ಯಯನ ಹಾಗೂ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಸಲಹಾ ಸಂಸ್ಥೆಗಳಿಂದ ಬಿಡ್‌ಗಳನ್ನು ಆಹ್ವಾನಿಸಲಾಗಿದೆ. ತೇಲುವ ಸೌರ ಯೋಜನೆಗಳಲ್ಲಿ ಜಲಾಶಯ ಅಥವಾ ಇತರ ಸೂಕ್ತ ಜಲಮೂಲಗಳ ಮೇಲ್ಮೈಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ತೇಲುವ ರಚನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲಾಗುತ್ತದೆ. ಇದರಿಂದ ದೊಡ್ಡ ಪ್ರಮಾಣದ ಹೆಚ್ಚುವರಿ ಭೂಮಿಯನ್ನು ಬಳಸದೇ ವಿದ್ಯುತ್ ಉತ್ಪಾದನೆಗೆ ಅವಕಾಶ ದೊರೆಯುತ್ತದೆ. ಜೊತೆಗೆ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ರಾಜ್ಯದ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಸಚಿವರ ಕಚೇರಿಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸ್ತಾವಿತ ಅಧ್ಯಯನದಲ್ಲಿ ಜಲಾಶಯಗಳ ಆಳ, ಋತುಮಾನಕ್ಕೆ ಅನುಗುಣವಾಗಿ ನೀರಿನ ಮಟ್ಟದ ಬದಲಾವಣೆ, ಆಂಕರ್ ವ್ಯವಸ್ಥೆ, ಗ್ರಿಡ್ ಸಂಪರ್ಕ, ವಿದ್ಯುತ್ ಸಾಗಣೆ ಮೂಲಸೌಕರ್ಯ, ಪರಿಸರ ಸಂಬಂಧಿತ ಅಂಶಗಳು ಹಾಗೂ ಯೋಜನೆಗಳ ತಾಂತ್ರಿಕ–ಆರ್ಥಿಕ ಕಾರ್ಯಸಾಧ್ಯತೆ ಪರಿಶೀಲಿಸಲಾಗುತ್ತದೆ ಎಂದು ತಿಳಿಸಲಾಗಿದೆ.ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಅವರು, ಈ ಅಧ್ಯಯನವು ಯೋಜನೆಗಳ ತಾಂತ್ರಿಕ ಮೌಲ್ಯಮಾಪನಕ್ಕೆ ಮೂಲಾಧಾರವಾಗಲಿದೆ. ಈ ಯೋಜನೆಯ ಕಾರ್ಯಸಾಧ್ಯತಾ ವರದಿ ಮತ್ತು ಡಿಪಿಆರ್ ಬಂದ ಮೇಲೆ ಮುಂದಿನ ಹಂತದ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.