ಕುಮಟಾ: ಅತಿವೃಷ್ಟಿ, ಪ್ರವಾಹಕ್ಕೆ ಸಂಬಂಧಿಸಿದಂತೆ ಹಾನಿಯನ್ನು ಸಮಗ್ರವಾಗಿ ಪರಿಶೀಲಿಸಿ ಜನರ ಸಂಕಷ್ಟಕ್ಕೆ ಸಮರ್ಪಕ ಪರಿಹಾರ ತಕ್ಷಣ ಕೊಡುವಂತಾಗಬೇಕು ಹಾಗೂ ಇತರ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್ ಕುಮಟಾ ಹಾಗೂ ಹೊನ್ನಾವರ ಘಟಕದಿಂದ ಮುಖ್ಯಮಂತ್ರಿಯವರಿಗೆ ಬುಧವಾರ ತಹಸೀಲ್ದಾರ್ ರವಿರಾಜ ದೀಕ್ಷಿತ ಮೂಲಕ ಮನವಿ ಸಲ್ಲಿಸಲಾಯಿತು.
ನೆರೆ ನೀರು ಮನೆಯ ಶೌಚಗೃಹ, ಕೊಟ್ಟಿಗೆ, ಬಾವಿ ಇನ್ನಿತರ ಭಾಗಕ್ಕೆ ನುಗ್ಗಿದ್ದರೂ ಮನೆ ಬಾಗಿಲೊಳಗೆ ನೀರು ಬಂದಿಲ್ಲವೆಂಬ ಕಾರಣದಿಂದ ಪರಿಹಾರ ಕೊಡದಿದ್ದಲ್ಲಿ ಅನ್ಯಾಯವಾಗುತ್ತದೆ. ಮನೆ ಪೂರ್ಣ ಹಾನಿಗೆ ಹಿಂದಿನ ಸರ್ಕಾರ ಪರಿಹಾರ ಕೊಡುತ್ತಿದ್ದ ಮಾದರಿಯಲ್ಲೇ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಪರಿಹಾರ ಮೊತ್ತ ಏರಿಸಿ ₹೭- ೮ ಲಕ್ಷ ಹಾಗೂ ಭಾಗಶಃ ಹಾನಿಗೆ ₹೨- ೩ ಲಕ್ಷ ಪರಿಹಾರ ಕೊಡಬೇಕು.ಇಲ್ಲಿನ ಅಗ್ನಿಶಾಮಕ ವಾಹನ ವ್ಯವಸ್ಥೆ ಇಲ್ಲದಂತಾಗಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಂಡು ಹೊಸ ವಾಹನದ ವ್ಯವಸ್ಥೆ ಕಲ್ಪಿಸಬೇಕು. ಕುಮಟಾ ಮತ್ತು ಹೊನ್ನಾವರ ಎರಡೂ ಪಟ್ಟಣಗಳಲ್ಲಿ ರಸ್ತೆಗಳು ಹೊಂಡಗಳಾಗಿವೆ. ಇದನ್ನು ಸರಿಪಡಿಸಬೇಕು. ಅದೇ ರೀತಿ ಗ್ರಾಮೀಣ ರಸ್ತೆಗಳ ಸ್ಥಿತಿಯೂ ಹದಗೆಟ್ಟಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು.
ಮುಖ್ಯವಾಗಿ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಬಂಡಿವಾಳದಲ್ಲಿ ಕುಮಟಾ- ಶಿರಸಿ ರಾಜ್ಯ ಹೆದ್ದಾರಿಯಂಚಿನ ಗುಡ್ಡ ಬಿರುಕು ಬಿಟ್ಟಿದ್ದು, ಈಗಾಗಲೇ ನಾಲ್ಕು ಅಡಿಯಷ್ಟು ಕುಸಿದಿದೆ. ಕೂಡಲೇ ತಜ್ಞರನ್ನು ಕರೆಯಿಸಿ ಪರಿಶೀಲಿಸಿ, ಕನಿಷ್ಠ ಪಕ್ಷ ಯಾವುದೇ ಜೀವಾಪಾಯವಾಗದಂತೆ ಮುಂಜಾಗ್ರತೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.ಇದೇ ವೇಳೆ ಚತುಷ್ಪಥ ಅವ್ಯವಸ್ಥೆ ಮತ್ತು ಟೋಲ್ ಬಂದ್ ಕುರಿತು ಜಿಲ್ಲಾಡಳಿತಕ್ಕೂ ಪ್ರತ್ಯೇಕ ಮನವಿ ಸಲ್ಲಿಸಲಾಯಿತು. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಸಾಕಷ್ಟು ಅವಘಡಗಳಿಗೆ ಹೆಸರಾಗಿರುವ ರಾ.ಹೆ. ೬೬ರ ಕಾಮಗಾರಿ ಈಗ ಚತುಷ್ಪಥ ಕಾಮಗಾರಿಯಾಗಿ ಉಳಿದಿಲ್ಲ. ಹಲವೆಡೆ ಗುಡ್ಡ ಕುಸಿತ, ಸೇತುವೆ ಕುಸಿತ ಇನ್ನಿತರ ಕಾರಣಗಳಿಂದ ಏಕಮುಖ ರಸ್ತೆಯಾಗಿದೆ, ಕಾಮಗಾರಿ ಎಲ್ಲಿಯೂ ಪೂರ್ಣಗೊಂಡಿಲ್ಲ. ಹೀಗಾಗಿ ಹೊಳೆಗದ್ದೆ ಟೋಲ್‌ಅನ್ನು ಕೂಡಲೇ ಬಂದ್ ಮಾಡಬೇಕು ಎಂದು ಜೆಡಿಎಸ್ ಕಾರ್ಯಕಾರಿ ಸಮಿತಿ ಸದಸ್ಯ ಸೂರಜ ನಾಯ್ಕ ಜಿಲ್ಲಾಡಳಿತವನ್ನು ಆಗ್ರಹಿಸಿದರು. ಹೊಳೆಗದ್ದೆ ಟೋಲ್ ನಾಕಾವು ಕುಮಟಾ ಹಾಗೂ ಹೊನ್ನಾವರ ಪಟ್ಟಣದ ನಡುವೆ ಸ್ಥಾಪಿಸಲಾಗಿದೆ. ಕುಮಟಾ ಹಾಗೂ ಹೊನ್ನಾವರ ಪಟ್ಟಣಗಳು ವ್ಯವಹಾರಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ಆಡಳಿತಾತ್ಮಕವಾಗಿಯೂ ಪರಸ್ಪರ ಹೊಂದಿಕೊಂಡಿದೆ. ಜತೆಗೆ ಹಟ್ಟಿಕೇರಿ ಟೋಲ್‌ನಿಂದ ನಿಯಮಬಾಹಿರವಾಗಿ ೬೦ ಕಿಮೀ ವ್ಯಾಪ್ತಿಯೊಳಗೇ ಇದೆ. ಕೇವಲ ಹೆಚ್ಚಿನ ಟೋಲ್ ಸಂಗ್ರಹದ ವ್ಯಾಪಾರಿ ದೃಷ್ಟಿಯಿಂದ ಹೊಳೆಗದ್ದೆಯಲ್ಲಿ ಟೋಲ್ ವಸೂಲಿ ಮಾಡಲಾಗುತ್ತಿದೆ. ಇದರಿಂದ ಜನಸಾಮಾನ್ಯರು ಪ್ರತಿನಿತ್ಯ ಹೊರಲಾರದ ಹೊರೆ ಹೊರಬೇಕಾಗಿದೆ. ಕೂಡಲೇ ಟೋಲ್ ಬಂದ್ ಮಾಡಬೇಕು ಹಾಗೂ ಟೋಲ್ ಸಂಗ್ರಹಕ್ಕೆ ನೀಡುತ್ತಿರುವ ಮಹತ್ವವನ್ನು ಜನರ ಜೀವದ ಸುರಕ್ಷತೆಗೆ ನೀಡುವತ್ತ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದರು.
ಗ್ರೇಡ್ ೨ ತಹಸೀಲ್ದಾರ್ ಸತೀಶ ಗೌಡ, ಜೆಡಿಎಸ್ ಕುಮಟಾ ತಾಲೂಕಾಧ್ಯಕ್ಷ ಸಿ.ಜಿ. ಹೆಗಡೆ, ಹೊನ್ನಾವರ ತಾಲೂಕಾಧ್ಯಕ್ಷ ಟಿ.ಟಿ. ನಾಯ್ಕ, ಶ್ರೀಪಾದ ಭಟ್, ವಿಘ್ನೇಶ ಗುನಗಾ, ಯಶವಂತ ಗೌಡ, ದಿವಾಕರ ನಾಯ್ಕ, ಅನಂತ ಗೌಡ, ಭವಾನಿ ಹಳ್ಳೇರ, ಶಿವರಾಮ ಮಡಿವಾಳ, ಚಂದ್ರಶೇಖರ ಪಾಲೇಕರ, ಅಬ್ದುಲ್ ಅಲೀಂ, ಅಣ್ಣಪ್ಪ ನಾಯ್ಕ, ಶುಕ್ರು ಹರಿಕಂತ್ರ, ದತ್ತ ಪಟಗಾರ, ಗಿರೀಶ ಭಂಡಾರಿ, ತುಳಸು ಗೌಡ ಇತರರು ಇದ್ದರು.