ಅತಿವೃಷ್ಟಿ: ಮನೆಗಳ ಪುನರ್‌ ನಿರ್ಮಾಣಕ್ಕೆ ಹೆಚ್ಚಿನ ಹಣ ನೀಡಿ

KannadaprabhaNewsNetwork | Published : Jul 21, 2024 1:18 AM

ಸಾರಾಂಶ

2021ರಿಂದ 23ರ ವರೆಗೂ ರಾಜ್ಯ ಸರ್ಕಾರದಿಂದ ನೆರೆಪೀಡಿತರಿಗೆ ಪರಿಹಾರ ಪಾವತಿಸಿದೆ. ಆದರೆ, 2024ರ ಅವಧಿಗೆ ಈ ಆದೇಶ ಮುಂದುವರೆಸಲು ರಾಜ್ಯ ಸರ್ಕಾರದಿಂದ ಆದೇಶವಾಗಿಲ್ಲ.

ಹುಬ್ಬಳ್ಳಿ:

ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಲು ಕ್ರಮಕೈಗೊಳ್ಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ಮತ್ತು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ಅನೇಕ ಮನೆಗಳಿಗೆ ತೀವ್ರ ಹಾನಿಯಾಗಿದ್ದು, ಇದರಲ್ಲಿ ಈಚೆಗೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆ ಬಿದ್ದು ಚಿಕ್ಕ ಮಕ್ಕಳ ಸಹಿತ ಮೂವರು ಸಾವಿಗೀಡಾಗಿದ್ದಾರೆ. ಈ ದುರಂತವನ್ನು ಗಂಭೀರವಾಗಿ ಪರಿಗಣಿಸಿ ಅತಿವೃಷ್ಟಿಯಿಂದಾಗಿ ನೊಂದ ಸಂತ್ರಸ್ತರಿಗೆ ಸಾಂತ್ವಾನವಲ್ಲದೇ ಅವರ ಮನೆಗಳ ಪುನರ್ ನಿರ್ಮಾಣ ಅಥವಾ ದುರಸ್ತಿ ಕಾರ್ಯಕ್ಕೆ ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ಪರಿಹಾರ ನೀಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

2021ರಿಂದ 23ರ ವರೆಗೂ ರಾಜ್ಯ ಸರ್ಕಾರದಿಂದ ನೆರೆಪೀಡಿತರಿಗೆ ಪರಿಹಾರ ಪಾವತಿಸಿದೆ. ಆದರೆ, 2024ರ ಅವಧಿಗೆ ಈ ಆದೇಶ ಮುಂದುವರೆಸಲು ರಾಜ್ಯ ಸರ್ಕಾರದಿಂದ ಆದೇಶವಾಗಿಲ್ಲ. ಇದರಿಂದ ಹಾನಿಗೊಳಗಾದ ಫಲಾನುಭವಿಗಳ ಮನೆಗಳ ಪುನರ್ ನಿರ್ಮಾಣ ಅಥವಾ ದುರಸ್ತಿ ಕಾರ್ಯಕೈಗೊಳ್ಳಲು ವಿಳಂಬವುಂಟಾಗಿ ತೀವ್ರ ತೊಂದರೆಗೊಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದೆಲ್ಲೆಡೆ ಮತ್ತೆ ಪ್ರವಾಹ ರೀತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹಲವೆಡೆ ಅವಾಂತರಗಳೂ ಆಗಿವೆ. ಕೆರೆ-ಕಟ್ಟೆಗಳಿರುವ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲು ಸಂಬಂಧಪಟ್ಟ ಅಧಿಕಾರಿಗಳು ಕೇಂದ್ರ ಸ್ಥಳಗಳಲ್ಲಿದ್ದು ಪರಿಸ್ಥಿತಿ ಸರಿಪಡಿಸಲು ಸೂಚಿಸಬೇಕು. ಮಳೆಹಾನಿ ಪರಿಹಾರ ನೀಡಲು ಹಿಂದೆ ಮುಂದೆ ನೋಡಬಾರದು. ಅನೇಕ ಕಡೆ ವಿದ್ಯುತ್ ಕಂಬಗಳು ಬಿದ್ದು, ಪರಿಕರಗಳು ಹಾಳಾಗಿರುವ ಘಟನೆ ವರದಿಯಾಗಿದೆ, ವಿದ್ಯುತ್ ಕಂಬಗಳನ್ನು ಕೂಡಲೇ ಸರಿಪಡಿಸಿ ಪರಿಕರಗಳ ದುರಸ್ತಿಗೊಳಿಸುವಂತೆ ಇಲಾಖೆಗೆ ಸೂಚನೆ ನೀಡುವ ಜತೆಗೆ ಜಲಾವೃತ ಪ್ರದೇಶಗಳಲ್ಲಿನ ಜನರಿಗೆ ಆಶ್ರಯ ನೀಡಲು ಮುಖ್ಯಮಂತ್ರಿಗಳಿಗೆ ಜೋಶಿ ಒತ್ತಾಯಿಸಿದ್ದಾರೆ.

Share this article