ಮಳೆ ತಗ್ಗಿದರೂ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀಕರ

KannadaprabhaNewsNetwork |  
Published : Aug 22, 2025, 01:00 AM ISTUpdated : Aug 22, 2025, 10:09 AM IST
krishna river

ಸಾರಾಂಶ

ಕಳೆದೆರಡು ದಿನಗಳಿಗೆ ಹೋಲಿಸಿದರೆ ಗುರುವಾರ ರಾಜ್ಯದಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿತ್ತು. ಆದರೆ, ಪ್ರವಾಹ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಅದರಲ್ಲೂ, ವಿಶೇಷವಾಗಿ ಕೃಷ್ಣಾ ನದಿತೀರದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರವಾಹದ ಪರಿಸ್ಥಿತಿ ಭೀಕರವಾಗಿದೆ.

 ಬೆಂಗಳೂರು :  ಕಳೆದೆರಡು ದಿನಗಳಿಗೆ ಹೋಲಿಸಿದರೆ ಗುರುವಾರ ರಾಜ್ಯದಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿತ್ತು. ಆದರೆ, ಪ್ರವಾಹ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಅದರಲ್ಲೂ, ವಿಶೇಷವಾಗಿ ಕೃಷ್ಣಾ ನದಿತೀರದ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರವಾಹದ ಪರಿಸ್ಥಿತಿ ಭೀಕರವಾಗಿದೆ.

ನೆರೆಯ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಕ್ಷೀಣಿಸಿದರೂ, ಜಿಲ್ಲೆಯ ನದಿಗಳ ಪ್ರವಾಹ ಸ್ಥಿತಿ ಮಾತ್ರ ತಗ್ಗಿಲ್ಲ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಜಿಲ್ಲೆಯ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಹಾರಾಷ್ಟ್ರದ ಕೊಯ್ನಾ ಸೇರಿದಂತೆ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಕೃಷ್ಣಾನದಿಯ ಪ್ರವಾಹದಿಂದಾಗಿ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶ ಜಲಾವೃತಗೊಂಡಿದೆ. ತುಂಬು ಗರ್ಭಿಣಿ ಜೊತೆಗೆ ಕೃಷ್ಣಾನದಿ ನಡುಗಡ್ಡೆಯಲ್ಲಿ 40 ಕುಟುಂಬಗಳು, ನೂರಕ್ಕೂ ಹೆಚ್ಚು ಗ್ರಾಮಸ್ಥರು, ಮಕ್ಕಳು, ಜಾನುವಾರುಗಳು ನಡುಗಡ್ಡೆಯಲ್ಲಿ ಸಿಲುಕಿದ್ದಾರೆ. ಎದೆಯ ಮಟ್ಟದ ನೀರಿನಲ್ಲಿ ದಾಟಿಕೊಂಡು ಗ್ರಾಮಸ್ಥರು ಹರಸಾಹಸ ಮಾಡಿ ಸಂಚಾರ ಮಾಡುತ್ತಿದ್ದಾರೆ. ಶಾಲಾ ಮಕ್ಕಳು, ಜನರ ಸಂಚಾರಕ್ಕೆ ಇರುವ ಏಕೈಕ ರಸ್ತೆ ಮಾರ್ಗ ಬಂದ್ ಆಗಿದೆ. ಬೋಟ್‌ ವ್ಯವಸ್ಥೆ ಮಾಡಬೇಕಾದ ಜಿಲ್ಲಾಡಳಿತ ಯಾವುದೇ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 12 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ನದಿ ಪಾತ್ರದಲ್ಲಿ ನೂರಾರು ಮನೆಗಳು ಜಲಾವೃತಗೊಂಡಿವೆ. ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಎರಡು ಕಾಳಜಿ ಕೇಂದ್ರ ತೆರೆಯಲಾಗಿದ್ದು, ಇಲ್ಲಿ ಒಟ್ಟು 34 ಕುಟುಂಬಗಳಿವೆ. ಅದರಲ್ಲಿ ಪುರುಷರು, ಮಹಿಳೆಯರು, ಮಕ್ಕಳು, ವೃದ್ಧರು, ಬಾಣಂತಿಯರು, ಗರ್ಭಿಣಿಯರು ಸೇರಿ ಒಟ್ಟು 178 ಜನರಿದ್ದಾರೆ. ಈ ಪೈಕಿ 2 ತಿಂಗಳ ಗಂಡು ಮಗುವಿನ ಬಾಣಂತಿ, ಗೋದವ್ವ ಕೂಡ ಸೇರಿದ್ದಾಳೆ. 20 ಜಾನುವಾರುಗಳನ್ನೂ ಇಲ್ಲಿಗೆ ಸ್ಥಳಾಂತರಿಸಲಾಗಿದೆ.

ಘಟಪ್ರಭಾ ನದಿಗೆ 60 ಸಾವಿರ ಕ್ಯು. ಒಳಹರಿವಿದ್ದು, ಪ್ರವಾಹದ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ದಂಡಿನ ಮಾರ್ಗದ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಲ್ಲಿ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ನಡುಗಡ್ಡೆಯ ಕರಕಲಗಡ್ಡಿ, ಮಾದರಗಡ್ಡಿ, ವಂಕಮ್ಮಗಡ್ಡಿಯ 23ಕ್ಕೂ ಅಧಿಕ ನಿವಾಸಿಗಳು ಬಾಹ್ಯ ಪ್ರಪಂಚದ ಸಂಪರ್ಕ ಕಡಿತಗೊಂಡು ದ್ವೀಪಗಳಲ್ಲಿಯೇ ವಾಸ ಮಾಡುತ್ತಿದ್ದಾರೆ.

ಉಜನಿ ಜಲಾಶಯದಿಂದ ಭೀಮಾ ನದಿಗೆ 1.40 ಲಕ್ಷ ಕ್ಯುಸೆಕ್‌ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಕಲಬುರಗಿ ಜಿಲ್ಲೆ ಅಫಜಲ್ಪೂರ ತಾಲೂಕಿನ ಭೀಮಾ ನದಿಯಲ್ಲಿರುವ ಹೊಳಿ ಯಲ್ಲಮ್ಮದವಿ ಮಂದಿರ ಜಲಾವೃತಗೊಂಡಿದೆ. ತಾಲೂಕಿನ ನೀಲೂರ ಗ್ರಾಮದ ರೈತರು ತಾವು ಬೆಳೆದಿರುವ ತರಕಾರಿಗಳನ್ನು ಹಳ್ಳದ ಮೂಲಕವೇ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವ ಸಾಗರದಿಂದ 2.65 ಲಕ್ಷ ಕ್ಯುಸೆಕ್ ನೀರು ಬಿಟ್ಟಿರುವ ಪರಿಣಾಮ ರಾಯಚೂರು ಜಿಲ್ಲೆ ಹೂವಿನಹೆಡಿಗಿ ಸೇತುವೆ, ಐತಿಹಾಸಿಕ ಕೊಪ್ಪರದ ಲಕ್ಷ್ಮೀ ನರಸಿಂಹ ದೇವಸ್ಥಾನ, ಗೂಗಲ್ನ ಪ್ರಭುಲಿಂಗ ದೇವಸ್ಥಾನ, ಬೆಣಕಲ್ ಬಳಿ ಇರುವ ಅಣ್ಣೆಮಲ್ಲೇಶ್ವರ ದೇವಸ್ಥಾನ, ಹೂವಿನಹೆಡಗಿಯ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನಗಳು ಜಲಾವೃಗೊಂತಗೊಂಡಿವೆ.

PREV
Read more Articles on

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ