ಬಸವವನದ ವರೆಗೆ 4 ತಿಂಗಳಲ್ಲಿ ಮುಗಿಯುತ್ತಾ ಫ್ಲೈಓ‍ವರ್‌ ಕಾಮಗಾರಿ?

KannadaprabhaNewsNetwork |  
Published : Apr 22, 2025, 01:53 AM IST
ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್‌ ಕಾಮಗಾರಿ ನಡೆದಿರುವುದು. | Kannada Prabha

ಸಾರಾಂಶ

2021ರಲ್ಲಿ ಆರಂಭವಾಗಿದ್ದ ಫೈಓವರ್ ಕಾಮಗಾರಿಯು 2025 ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಏಪ್ರಿಲ್‌ ತಿಂಗಳು ಮುಗಿಯುತ್ತ ಬಂದಿದ್ದು ಅರ್ಧದಷ್ಟು ಕಾಮಗಾರಿ ಮಾತ್ರ ಆಗಿದೆ. ಈಗ ಬಸವವನದ ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿ ಮಾರ್ಗ ಬದಲಾವಣೆಯನ್ನೂ ಮಾಡಲಾಗಿದೆ. ಆದರೆ, ಇಷ್ಟು ಸಮಯದಲ್ಲಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಬಸವವನದ ವರೆಗಿನ ಕಾಮಗಾರಿ ಮುಗಿಯಲಿದೆ ಎನ್ನುವುದು ಅನುಮಾನ ಮೂಡಿಸಿದೆ.

ಮಹಮ್ಮದ ರಫೀಕ್‌ ಬೀ‍ಳಗಿ ಹುಬ್ಬಳ್ಳಿ

ಇಷ್ಟೊತ್ತಿಗಾಗಲೇ ಕಾಮಗಾರಿ ಮುಗಿದು ಸೌಂದರ್ಯ ಹೆಚ್ಚಿಸಬೇಕಿದ್ದ ಮೇಲ್ಸೇತುವೆ ನಗರದ ಅಂದ ಕೆಡಿಸಿದೆ. ಅಷ್ಟೇ ಅಲ್ಲದೇ ಕಿತ್ತೂರು ಚೆನ್ನಮ್ಮ ವೃತ್ತದಿಂದ ಬಸವವನದ ವರೆಗಿನ ಕಾಮಗಾರಿ 4 ತಿಂಗಳಲ್ಲಿ ಮುಗಿಯುತ್ತಾ? ಎನ್ನುವ ದೊಡ್ಡ ಪ್ರಶ್ನೆಯೊಂದು ನಾಗರೀಕರನ್ನು ಕಾಡುತ್ತಿದೆ.

2022ರಲ್ಲಿ ಆರಂಭವಾಗಿ ಕುಂಟುತ್ತ ಸಾಗಿರುವ ಕಾಮಗಾರಿಯನ್ನು ನೋಡಿದ ಜನ ಉಸ್ಸಪ್ಪ ಯಾವಾಗ ಇದು ಮುಗಿದು ನೆಮ್ಮದಿಯಿಂದ ಸಂಚರಿಸುವಂತಾಗುತ್ತದೆ ಎನ್ನುವಂತಾಗಿದೆ. ಅಧಿಕಾರಿಗಳು, ಗುತ್ತಿಗೆ ಪಡೆದವರು ಕಾಮಗಾರಿಗೆ ವೇಗ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೂ ನಾಲ್ಕು ತಿಂಗಳಲ್ಲಿ ಮುಗಿಯುವುದು ಅನುಮಾನ ಎನ್ನುತ್ತಾರೆ ಕಾಮಗಾರಿಯನ್ನು ಹತ್ತಿರದಿಂದ ಕಂಡವರು.

2021ರಲ್ಲಿ ಆರಂಭವಾಗಿದ್ದ ಫೈಓವರ್ ಕಾಮಗಾರಿಯು 2025 ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. 2025ರ ಏಪ್ರಿಲ್‌ ತಿಂಗಳು ಮುಗಿಯುತ್ತ ಬಂದಿದ್ದು ಅರ್ಧದಷ್ಟು ಕಾಮಗಾರಿ ಮಾತ್ರ ಆಗಿದೆ. ಈಗ ಬಸವವನದ ವರೆಗೆ ನಾಲ್ಕು ತಿಂಗಳ ಅವಧಿಯಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿ ಮಾರ್ಗ ಬದಲಾವಣೆಯನ್ನೂ ಮಾಡಲಾಗಿದೆ. ಆದರೆ, ಇಷ್ಟು ಸಮಯದಲ್ಲಿ ಕಾಮಗಾರಿ ಮುಗಿಯಲಿದೆ ಎನ್ನುವುದು ಅನುಮಾನ ಮೂಡಿಸಿದೆ.

ಕಾಮಗಾರಿ ವಿಳಂಭವಾಗಲು ಕಾರಣವೂ ಇಲ್ಲದಿಲ್ಲ. ಗುತ್ತಿಗೆದಾರರು ನಿಧಾನಗತಿಯ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಕಾಮಗಾರಿಗೆ ಬೇಕಾದಷ್ಟು ಪ್ರಮಾಣದಲ್ಲಿ ಮಾನವ ಸಂಪನ್ಮೂಲ, ವೈಜ್ಞಾನಿಕ ಉಪಕರಣಗಳ ಬಳಕೆಯಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹಲವು ಅಡೆತಡೆ: ಯೋಜನೆ ಸರ್ಕಾರದಿಂದ ಅನುಮೋದನೆಗೊಂಡು ಕಾಮಗಾರಿ ಆರಂಭಿಸುವ ವೇಳೆ ಭೂಸ್ವಾಧೀನ ತೊಡಕಾಗಿ ವಿಳಂಭವಾಗಿತ್ತು. ಬಳಿಕ ಹಾಗೋ, ಹೀಗೋ ಕುಂಟುತ್ತ ಸಾಗಿದ್ದ ಕಾಮಗಾರಿ ನಡೆಯುತ್ತಿದ್ದ ವೇಳೆ ಸುರಕ್ಷತಾ ಕ್ರಮ ಕೈಗೊಳ್ಳದ ಪರಿಣಾಮ ಎಎಸ್‌ಐ ಮೇಲೆ ಕಬ್ಬಿಣದ ರಾಡ್‌ ಬಿದ್ದು ಮೃತಪಟ್ಟಿದ್ದರು. ಇದರಿಂದಾಗಿ 2 ತಿಂಗಳ ಕಾಲ ಕಾಮಗಾರಿ ಸ್ಥಗಿತವಾಗಿತ್ತು. ಮತ್ತೆ ಆರಂಭವಾದ ಕಾಮಗಾರಿಗೆ ಚೆನ್ನಮ್ಮ ವೃತ್ತದಲ್ಲಿ ಸಂಚಾರ ದಟ್ಟಣೆಯಿಂದ ಅಡ್ಡಿಯುಂಟಾಗುತ್ತಿತ್ತು. ಇದರಿಂದ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾಯಿಸುವಂತೆ ಕೋರಿದ್ದು, ಅದರಂತೆ ಏ. 20 ರಿಂದಲೇ ಜಾರಿ ಬರುವಂತೆ ಮಾರ್ಗ ಬದಲಾವಣೆ ಮಾಡಿದೆ.

ಕಾಮಗಾರಿ ಸ್ಥಿತಿ ಏನು?: 3.61 ಕಿ.ಮೀ. ಎಲಿವೇಟೆಡ್‌ ರಸ್ತೆ ನಿರ್ಮಾಣಕ್ಕೆ ಆರಂಭದಲ್ಲಿ ₹196.99 ಕೋಟಿ ನಿಗದಿಪಡಿಸಲಾಗಿತ್ತು. ಬಳಿಕ ಯೋಜನಾ ವೆಚ್ಚ ₹298 ಕೋಟಿಗೆ ಏರಿತ್ತು. ಈಗ ₹51.49 ಕೋಟಿ ಹೆಚ್ಚುವರಿ ಅನುದಾನ ನೀಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಈಗ ಒಟ್ಟು ಯೋಜನಾ ವೆಚ್ಚ ಈಗ ₹349.49 ಕೋಟಿಗೆ ತಲುಪಿದೆ.

ಈಗಾಗಲೇ ಕಿತ್ತೂರ ಚೆನ್ನಮ್ಮ ವೃತ್ತದಿಂದ ವಿಜಯಪುರ ರಸ್ತೆ ಹಾಗೂ ಧಾರವಾಡ ರಸ್ತೆಯ ಫ್ಲೈಓವರ್‌ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಕಿತ್ತೂರು ಚೆನ್ನಮ್ಮ ವೃತ್ತದ ಸುತ್ತಲಿನ ಕಾಮಗಾರಿ ಆರಂಭವಾಗಿದೆ. ಗದಗ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ಈ ವರೆಗೆ ಕಾಮಗಾರಿ ಆರಂಭವಾಗಿಲ್ಲ. ಇದೀಗ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನಷ್ಟೇ ಕಾಮಗಾರಿ ಆರಂಭವಾಗಬೇಕಿದೆ.

ಚೆನ್ನಮ್ಮ ವೃತ್ತದಿಂದ ಬಸವವನದ ವರೆಗೆ ಹಾಗೂ ವಿಜಯಪುರ ರಸ್ತೆಯಲ್ಲಿ 80 ಗರ್ಡರ್ ಹಾಗೂ 16 ಸ್ಲಾಬ್‌‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಚೆನ್ನಮ್ಮ ವೃತ್ತದಲ್ಲಿ ರೌಟರ್‌ ಕಾಮಗಾರಿಗಾಗಿ ಪೋರ್ಟ್‌ಲ್ ಕ್ಯಾಪ್ ಹಾಗೂ 8 ಪಿಲ್ಲರ್​ಗಳ ನಿರ್ಮಾಣಕ್ಕೆ ಗುತ್ತಿಗೆದಾರ ಸಂಸ್ಥೆ ಝಂಡು ಕಂಪನಿ ಮುಂದಾಗಿದೆ. ಹಳೆ ಕೋರ್ಟ್‌ ವೃತ್ತದಿಂದ ಚೆನ್ನಮ್ಮ ವೃತ್ತದ ವರೆಗಿನ ಕಾಮಗಾರಿಗೆ ಮೂರ್ನಾಲ್ಕು ತಿಂಗಳು ಗತಿಸಿದೆ. ಇನ್ನು ಚೆನ್ನಮ್ಮ ವೃತ್ತದಲ್ಲಿ ವೃತ್ತಾಕಾರದಲ್ಲಿ ಸೇತುವೆ ನಿರ್ಮಾಣವಾಗಬೇಕು. ಈ ಸಂಕೀರ್ಣ ಕಾಮಗಾರಿ ಕಂಪನಿ ಕೇಳಿಕೊಂಡಂತೆ 4 ತಿಂಗಳಲ್ಲಿ ಮುಗಿಯುವ ಸಾಧ್ಯತೆ ತೀರಾ ಕಮ್ಮಿ ಎನ್ನುತ್ತಾರೆ ಸಾರ್ವಜನಿಕರು.

ಇದು 7-8 ತಿಂಗಳ ಕಾಲ ತೆಗೆದುಕೊಂಡರೆ ಪ್ರಮುಖ ವಾಣಿಜ್ಯ ಕೇಂದ್ರವಾದ ಇಲ್ಲಿ ಅನೇಕ ವ್ಯಾಪಾರಿಗಳು ವ್ಯಾಪಾರ- ವಹಿವಾಟು ಇಲ್ಲದೆ ಹಾನಿ ಅನುಭವಿಸುಂತಾಗಲಿದೆ. ಹೀಗಾಗಿ, ನಿಗದಿತ ನಾಲ್ಕು ತಿಂಗಳ ಅವಧಿಯಲ್ಲಿ ಬಸವವನದ ವರೆಗೆ ಕಾಮಗಾರಿ ಪೂರ್ಣಗೊಳಿಸಿ ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸಾರ್ವಜನಿಕರು, ವ್ಯಾಪಾರಸ್ಥರು, ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

ಈ ಮೊದಲು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಸಂಚರಿಸುವುದೆಂದರೆ ಅದೇನೋ ಒಂದು ತರಹ ಖುಷಿಯಾಗುತ್ತಿತ್ತು. ಡಾ. ರಾಜಕುಮಾರ ನಟನೆಯ ಶಬ್ಧವೇದಿ ಚಿತ್ರದ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು " ಹಾಡು ನೆನೆಸಿಕೊಂಡು ಈ ರಸ್ತೆಯಲ್ಲಿ ಅಡ್ಡಾಡುವುದೆಂದರೆ ರೋಮಾಂಚನವಾಗುತ್ತಿತ್ತು. ಆದರೆ, ಈ ಮೇಲ್ಸೇತುವೆ ಕಾಮಗಾರಿಯಿಂದಾಗಿ ಚೆನ್ನಮ್ಮ ಸರ್ಕಲ್‌ ಎಂದರೆ ಬೇಡಪ್ಪ ಸಹವಾಸ ಎನ್ನುವಂತಾಗಿದೆ ಎಂದು ಹುಬ್ಬಳ್ಳಿ ನಿವಾಸಿ ರೋಹಿತ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''