ಕನ್ನಡಪ್ರಭ ವಾರ್ತೆ ಮಡಿಕೇರಿ
ಜೀವನದಲ್ಲಿ ಸಾಧನೆ ಮಾಡಲು ಹೊರಟಿರುವ ನೀವು ದುಶ್ಚಟಕ್ಕೆ ಬಲಿಯಾಗದೆ ಓದಿನ ಕಡೆಗೆ ಗಮನ ಹರಿಸಿ ಎಂದು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೊಡಗು ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ವಿರಾಜಪೇಟೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಿದ್ದಾಪುರ ಪಟ್ಟಣದಲ್ಲಿ ಆಯೋಜಿಸಲಾಗಿದ್ದ, ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನವನ್ನುದ್ದೇಶಿಸಿ ಅವರು ಮಾತನಾಡಿದರು.ಗಾಂಜಾ, ಡ್ರಗ್ಸ್ ಸೇವನೆ ಮಾಡಿದರೆ ಮಾತ್ರವಲ್ಲ, ಅದನ್ನು ಮಾರಾಟ ಮಾಡಿದರೂ ಅಪರಾಧವೇ ಈಗಾಗಲೇ ಡ್ರಗ್ಸ್ ಸೇವನೆ, ಮಾರಾಟ ಮಾಡುವವರ ಮೇಲೆ ಪೊಲೀಸ್ ಇಲಾಖೆ ನಿಗಾಯಿಟ್ಟಿದೆ. ಮಾದಕ ವ್ಯಸನದಿಂದ ಅಪರಾಧ ಕೃತ್ಯಗಳು ಹೆಚ್ಚಾಗುವುದು ಮಾತ್ರವಲ್ಲದೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣವಾದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗುತ್ತದೆ.ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಮಾದಕ ವಸ್ತುಗಳ ಸೇವನೆ ತಡೆಗಟ್ಟುವುದು ಕೇವಲ ಸರ್ಕಾರ ಅಥವಾ ಅಧಿಕಾರಿಗಳ ಜವಾಬ್ದಾರಿ ಎಂಬ ಭಾವನೆಯನ್ನು ಬದಿಗಿಟ್ಟು ಪ್ರತಿಯೊಬ್ಬರೂ ಮಾದಕ ವಸ್ತುಗಳ ಸೇವನೆ ತಡೆಗಟ್ಟಲು ಮುಂದಾಗಬೇಕು. ಮಾದಕ ಮದ್ಯ ವಸ್ತುಗಳ ಸೇವನೆಯನ್ನು ನಿಯಂತ್ರಿಸದೆ ಹೋದರೆ ಆರೋಗ್ಯಕರ ಸಮಾಜ ನಿರ್ಮಾಣ ಕಷ್ಟ ಸಾಧ್ಯ ಎಂದ ಅವರು, ಮಾದಕ ವಸ್ತುಗಳ ಬಳಕೆ ಅಥವಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿದರು.ವೈದ್ಯಾಧಿಕಾರಿ ರೇವಣ್ಣ ಮಾತನಾಡಿ, ಮೋಜಿಗಾಗಿ ಒಂದು ಬಾರಿ ಈ ಚಟಕ್ಕೆ ದಾಸರಾದರೇ, ಇಡೀ ಜೀವನವೇ ಹಾಳಾದಂತೆ. ಈ ವ್ಯಸನಕ್ಕೆ ಬಲಿಯಾದ ಅನೇಕ ಕುಟುಂಬಗಳು ಬೀದಿಗೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಮುಖ್ಯವಾಗಿ ಯುವಜನತೆ ಹೆಚ್ಚಾಗಿ ಮಾದಕ ವಸ್ತುಗಳನ್ನು ಬಳಕೆ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಇದು ಮಾರಕವಾಗಿ ಪರಿಣಮಿಸಲಿದೆ. ಈಗಾಗಲೇ ಹಲವರು ಮಾದಕ ವಸ್ತುಗಳಾದ ಗಾಂಜಾ, ಅಫೀಮು, ಹೆರಾಯಿನ್, ಎಲ್‌ಎಸ್‌ಡಿ, ಕೊಕೇನ್ ಮೊದಲಾದವುಗಳ ಚಟಕ್ಕೆ ದಾಸರಾಗಿ, ಆರೋಗ್ಯವನ್ನು ಹಾಳುಮಾಡಿಕೊಳ್ಳುವುದರ ಜೊತೆಗೆ ಅಪರಾಧಿ ಕೃತ್ಯಗಳಲ್ಲಿ ತೊಡಗಿಕೊಂಡು, ದೇಶದ ಭವಿಷ್ಯಕ್ಕೆ ಕಂಟಕವಾಗಿದ್ದಾರೆ. ಆದ್ದರಿಂದ ಇದನ್ನು ತಡೆಗಟ್ಟುವುದು ಪ್ರತಿಯೊಬ್ಬರ ಹೊಣೆ ಎಂದರುಇದಕ್ಕೂ ಮುನ್ನ ಪಟ್ಟಣದ ಮುಖ್ಯ ರಸ್ತೆ ಮೂಲಕ ಬಸ್ ನಿಲ್ದಾಣದವರೆಗೆ ಜಾಗೃತಿ ಜಾಥಾ ನಡೆಸಲಾಯಿತು.
ಬಳಿಕ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಮಾದಕ ವಸ್ತುಗಳ ಸೇವನೆ ಹಾಗೂ ಅದರಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ.ಉಪಾಧ್ಯಕ್ಷ ಪಳನಿಸ್ವಾಮಿ, ಸದಸ್ಯರು ಹಾಗೂ ಸಿಬ್ಬಂದಿ ವರ್ಗ, ಪೊಲೀಸ್ ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಹಾಗೂ ಸದಸ್ಯರು, ಆಶಾ ಕಾರ್ಯಕರ್ತೆಯರು, ದಾದಿಗಳು, ಶಿಕ್ಷಕರು, ಪೊಲೀಸ್ ಸಿಬ್ಬಂದಿ, ವಾಹನ ಚಾಲಕರು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು, ,ಎಂ ಬಿ ಕೆ, ಎಲ್ ಸಿ ಆರ್ ಪಿ ಗಳು, ಪಶುಸಖಿ, ಕೃಷಿಸಖಿ, ಗ್ರಾಮಸ್ಥರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.ಪ್ರಾರಂಭದಲ್ಲಿ ಪ್ರಮುಖರಾದ ಶುಕೂರ್ ಸ್ವಾಗತ ಕೋರಿದರೆ. ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ತುಳಸಿ ಗಣಪತಿ ಪ್ರತಿಜ್ಞಾವಿಧಿ ಬೋಧಿಸುವುದರೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.