ನರಗುಂದ: ಬರಗಾಲದಿಂದ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ ನೀಗಿಸಲು ತಾಲೂಕಾಡಳಿತದಿಂದ ಮೇವಿನ ಬ್ಯಾಂಕ್ ಆರಂಭ ಮಾಡಲಾಗಿದ್ದು, ಪ್ರತಿ ಕೆಜಿ ಮೇವಿಗೆ 2 ರಂತೆ ರೈತರ ಕೈಗೆಟುಕುವ ದರದಲ್ಲಿ ಮೇವು ಮಾರಾಟ ಮಾಡಲಾಗುತ್ತದೆ. ರೈತರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಹಸೀಲ್ದಾರ ಶ್ರೀಶೈಲ ತಳವಾರ ಹೇಳಿದರು.
ಮೇವಿನ ಬ್ಯಾಂಕ್‌ನಿಂದ ಒಂದು ಜಾನುವಾರಿಗೆ ಪ್ರತಿನಿತ್ಯ 6 ಕೆಜಿ ಮೇವನ್ನು ನೀಡಲಾಗುತ್ತದೆ. ಪ್ರತಿ ರೈತರಿಗೆ 50 ಕೆಜಿವರೆಗೂ ಮೇವನ್ನು ವಿತರಿಸಲಾಗುವುದು. ರೈತರು ಒಂದು ಕೆಜಿ ಮೇವನ್ನು ₹2 ಕೊಟ್ಟು ಖರೀದಿ ಮಾಡಬಹುದು. ಇದರಿಂದ ಬರಗಾಲದಲ್ಲಿ ರೈತರ ಜಾನುವಾರುಗಳಿಗೆ ಎದುರಾಗಿರುವ ಮೇವಿನ ಕೊರತೆ ನೀಗಿಸಲು ಸಹಕಾರಿಯಾಗುತ್ತದೆ ಎಂದರು.
ಪಶು ಸಂಗೋಪನಾ ಇಲಾಖೆ ತಾಲೂಕು ನಿರ್ದೇಶಕ ಡಾ.ವೆಂಕಟೇಶ ಸಣ್ಣಬಿದರಿ ಮಾತನಾಡಿ, ಮೇವಿನ ಬ್ಯಾಂಕ್‌ನಲ್ಲಿ ಸದ್ಯ 4 ಟನ್ ದಾಸ್ತಾನು ಮಾಡಲಾಗಿದೆ.ಇದರಿಂದ ಮುಂದಿನ ಎರಡ್ಮೂರು ತಿಂಗಳಿಗೆ ಸಾಕಾಗುವಷ್ಟು ಮೇವನ್ನು ಸಂಗ್ರಹ ಮಾಡಿಕೊಳ್ಳಲಾಗಿದೆ. ಈಗಾಗಲೇ ಮೇವು ಪೂರೈಕೆ ಮತ್ತು ಸರಬರಾಜಿಗೆ ಟೆಂಡರ ಕರೆದು ಟೆಂಡರದಾರರನ್ನು ಗುರ್ತಿಸಲಾಗಿದೆ. ಮೇವು ಬ್ಯಾಂಕನಲ್ಲಿ ಮೇವು ಖಾಲಿಯಾದ ಕೂಡಲೇ ಟೆಂಡರದಾರರ ಮೂಲಕ ಮೇವು ದಾಸ್ತಾನು ಕೆಲಸ ಮಾಡಲಾಗುವುದು. ಮೇವು ಬ್ಯಾಂಕ ಪ್ರತಿನಿತ್ಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5-30ರವರೆಗೆ ತೆರೆದಿರುತ್ತದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಹೇಳಿದರು.ಕೊಣ್ಣೂರು ಗ್ರಾಮದ ರೈತರಾದ ಸಿದ್ದಪ್ಪ ಡಂಬಳ ಮತ್ತು ಅಲ್ಲಿಸಾಬ್ ಸುರಕೋಡ ಅವರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ ಮೇವಿನ ಗಂಟನ್ನು ವಿತರಿಸುವ ಮೂಲಕ ಮೇವಿನ ಬ್ಯಾಂಕನ್ನು ಉದ್ಘಾಟನೆಗೊಳಿಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ, ಟಿ.ಆರ್.ಪಾಟೀಲ್ ಗ್ರಾಮ ಆಡಳಿತ ಅಧಿಕಾರಿ ಜಿ.ಎ.ನಿರಾಣಿ, ಕಂದಾಯ ನಿರೀಕ್ಷಕ ಐ.ವೈ. ಕಳಸಣ್ಣವರ, ಗ್ರಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.