ಹೂವಿನಹಡಗಲಿ: ತಾಲೂಕಿನ ಉತ್ತಂಗಿ ಗ್ರಾಮದ 4 ಜನ ರೈತರ ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಮೇವಿನ ಬಣವಿಗಳಿಗೆ ಮಂಗಳವಾರ ಬೆಳಗಿನ ಜಾವದಲ್ಲಿ ಆಕಸ್ಮಿಕ ಬೆಂಕಿ ಬಿದ್ದು, ₹5 ಲಕ್ಷಕ್ಕೂ ಅಧಿಕ ಮೌಲ್ಯದ ಮೇವು ಭಸ್ಮವಾಗಿದೆ.
ಹಿರೇಮಲ್ಲಪ್ಪನವರ್ ಗಣೇಶ ಇವರಿಗೆ ಸೇರಿದ ₹60 ಸಾವಿರ ಮೌಲ್ಯದ 1 ಟ್ರಾಕ್ಟರ್ ಮೆಕ್ಕೆಜೋಳದ ರವದಿ, 40 ಸಾವಿರ ಮೌಲ್ಯದ 2 ಟ್ರಾಕ್ಟರ್ ರಾಗಿ ಹುಲ್ಲು, ₹80 ಸಾವಿರ ಮೌಲ್ಯದ 2 ಟ್ರಾಕ್ಟರ್ ಶೇಂಗಾ ಹೊಟ್ಟಿನ ಬಣವಿ ಸೇರಿ ಒಟ್ಟು ₹1.80 ಲಕ್ಷ ನಷ್ಟವಾಗಿದೆ.
ಹಿರೇಮಲ್ಲಪ್ಪನವರ ತಾತಪ್ಪ ಇವರ ₹20 ಸಾವಿರ ಮೌಲ್ಯದ 1 ಟ್ರಾಕ್ಟರ್ ರಾಗಿ ಹುಲ್ಲು, ₹45 ಸಾವಿರ ಮೌಲ್ಯದ 3 ಟ್ರಾಕ್ಟರ್ ಮೆಕ್ಕೆಜೋಳದ ರವದಿ, ₹ 40 ಸಾವಿರ ಮೌಲ್ಯದ 1 ಟ್ರಾಕ್ಟರ್ ಶೇಂಗಾ ಹೊಟ್ಟು ಸೇರಿ ಒಟ್ಟು ₹1.05 ಲಕ್ಷ ನಷ್ಟ ಉಂಟಾಗಿದೆ. 4 ಜನ ರೈತರ ವಿವಿಧ ಬಣವಿಗಳ ಒಟ್ಟು ಮೌಲ್ಯ ₹5.65 ಲಕ್ಷ ನಷ್ಟ ಉಂಟಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಪಂಚನಾಮೆಯಲ್ಲಿ ಅಂದಾಜಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.ಅಕ್ಕಪಕ್ಕದ ಮನೆಗಳ ನಡುವೆ ಇದ್ದ ಜಾಗದಲ್ಲಿ ಸಂಗ್ರಹಿಸಿದ್ದ 4 ಜನರ ಬಣವಿಗಳಿಗೆ, ಮಂಗಳವಾರ ಬೆಳಗಿನ ಜಾವ 1 ಗಂಟೆಗೆ ಬೆಂಕಿ ಬಿದ್ದ ಸುದ್ದಿ ತಿಳಿಯುತ್ತಿದಂತೆಯೇ ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯ 2 ಅಗ್ನಿ ಶಾಮಕ ವಾಹನಗಳು ಮತ್ತು ಸಿಬ್ಬಂದಿ ಆಗಮಿಸಿ ನಿರಂತರ 7 ತಾಸು ಬೆಂಕಿ ನಂದಿಸಲು ಕಾರ್ಯಾಚರಣೆ ಮಾಡಿದ್ದಾರೆ.
ಭೀಕರ ಬರದಲ್ಲಿ ದನ ಕರುಗಳಿಗೆ ಎಂದು ಸಾಕಲು ಲಕ್ಷಾಂತರ ರುಗಳ ಮೌಲ್ಯದ ಮೇವು ಸಂಗ್ರಹಿಸಿದ್ದೇವು, ಆದರೆ ಆಕಸ್ಮಿಕ ಬೆಂಕಿಗೆ ಬಣವಿಗಳು ಸುಟ್ಟು ಬೂದಿಯಾಗಿದೆ. ಇನ್ನು ದನ ಕರುಗಳಿಗೆ ಎಲ್ಲಿಂದ ಮೇವು ತರಬೇಕೆಂಬ ಚಿಂತೆ ಕಾಡುತ್ತಿತ್ತು. ಆದರಿಂದ ಅವುಗಳನ್ನು ಸಾಕಾಣಿಗೆ ಮಾಡಲು ಸಾಧ್ಯವಿಲ್ಲ ಎಂದು ಜಾನುವಾರುಗಳನ್ನೇ ಮಾರಿದ್ದೇವೆ. ಸರ್ಕಾರ ರೈತ ಪರ ಕಾಳಜಿ ವಹಿಸಿ ನಮಗೆ ಆಗಿರುವ ನಷ್ಟವನ್ನು ಪರಿಹಾರದ ರೂಪದಲ್ಲಿ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.