ಹುಬ್ಬಳ್ಳಿ:
ಕನ್ನಡಪ್ರಭ ವರ್ಷದ ವ್ಯಕ್ತಿ, ಜಾನಪದ ತಜ್ಞ, ನಿವೃತ್ತ ಶಿಕ್ಷಕ ಡಾ. ರಾಮು ಮೂಲಗಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಎಲ್ಲೋ ಒಂದು ಕಡೆ ಮೂಲೆಯಲ್ಲಿದ್ದ ನನ್ನನ್ನು ಕನ್ನಡಪ್ರಭ ಗುರುತಿಸಿದ್ದ ಕಾರಣಕ್ಕೆ ಇದೀಗ ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿದೆ. ಕನ್ನಡಪ್ರಭಕ್ಕೆ ನಾ ಚಿರಋಣಿ ಎಂದು ಸಂತಸ ವ್ಯಕ್ತಪಡಿಸಿದರು.ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಡಾ.ರಾಮು ಮೂಲಗಿ, ಬಿಎ, ಎಂಎ ಪದವಿ ಪಡೆದವರು. ಹಾನಗಲ್ ಕುಮಾರೇಶ್ವರ ಕಾಲೇಜ್‌ನಲ್ಲಿ ಬಿಇಡಿ ಪದವಿ ಪೂರೈಸಿದ್ದಾರೆ. ಧಾರವಾಡ ಜಿಲ್ಲೆಯ ಜನಪದ ಸಂಪ್ರದಾಯಗಳು ಕುರಿತು ಸಂಶೋಧನಾ ಪ್ರಬಂಧ ಮಂಡಿಸಿ ಕವಿವಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಕರ್ನಾಟಕ ಜಾನಪದ ವಿವಿ, ನೆಹರು ಕಾಲೇಜ್‌ನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.ಕನ್ನಡಪ್ರಭ ವರ್ಷದ ವ್ಯಕ್ತಿ:
ಹುಬ್ಬಳ್ಳಿ ಎಪಿಎಂಸಿ ಹಮಾಲರು ಹಾಗೂ ಅವರ ಮಕ್ಕಳಿಗೆ ಶೈಕ್ಷಣಿಕ ದೀಕ್ಷೆ ನೀಡಿದ್ದಕ್ಕಾಗಿ ಕನ್ನಡಪ್ರಭ ಪತ್ರಿಕೆಯೂ 2008ರಲ್ಲಿ "ಕನ್ನಡಪ್ರಭ ವರ್ಷದ ವ್ಯಕ್ತಿ " ಎಂದು ಆಯ್ಕೆ ಮಾಡಿ ಪ್ರಶಸ್ತಿ ನೀಡಿತ್ತು. ಈ ಪ್ರಶಸ್ತಿಯಿಂದ ಬಂದಿದ್ದ ₹2.5 ಲಕ್ಷ ನಗದು ಬಹುಮಾನವನ್ನೂ ಅನಾಥ ಮಕ್ಕಳಿಗಾಗಿ ಆರಂಭಿಸಿದ್ದ ಹಾಸ್ಟೆಲ್‌ಗೆ ವಿನಿಯೋಗಿಸಿದ್ದು ವಿಶೇಷ.ಜಾನಪದ ಕಲಾವಿದರಾಗಿರುವ ಇವರು, ಆಕಾಶವಾಣಿ ಬಿ ಗ್ರೇಡ್ ಕಲಾವಿದರು ಹೌದು. ಮೈಸೂರು ದಸರಾ, ಕನ್ನಡ ಸಾಹಿತ್ಯ ಸಮ್ಮೇಳನ, ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಜಾನಪದ ಉತ್ಸವಗಳಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಜಾನಪದಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು.
ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಸರ್ಕಾರ ಸೇರಿದಂತೆ ವಿವಿಧ ಸಂಘಗಳು ಸಾಕಷ್ಟು ಪ್ರಶಸ್ತಿ ನೀಡಿ ಗೌರವಿಸಿದೆ. ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯಿಂದ ಬಂದಿದ್ದ ₹1.11 ಲಕ್ಷ ನಗದು ಬಹುಮಾನವನ್ನು ಕರ್ನಾಟಕ ಏಕೀಕರಣದ ರೂವಾರಿ ಅದರಗುಂಚಿ ಶಂಕರಗೌಡರ ಹೆಸರಲ್ಲಿ ದತ್ತಿನಿಧಿ ಇರಿಸಿದ್ದಾರೆ. ಇದರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪ್ರಗತಿ ವರ್ಷ ಕನ್ನಡ ಕಾರ್ಯಕ್ರಮ ನಡೆಸುತ್ತಿದೆ.ರಾಜ್ಯ ಹಾಗೂ ಕೇಂದ್ರ ಸರ್ಕಾರ ನಡೆಸುವ ಸಾಕ್ಷರತಾ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಸಾಕ್ಷರತಾ ಆಂದೋಲನದಲ್ಲಿ ತರಬೇತಿ ನೀಡುತ್ತಾರೆ. 2012ರಲ್ಲಿ ಮನೆ ಮನೆಯಲ್ಲಿ ಶ್ರಾವಣ ಜಾನಪದ ಎಂಬ ಕಾರ್ಯಕ್ರಮವನ್ನು ನಡೆಸುವ ಮೂಲಕ ಜಾನಪದದ ಪ್ರಚಾರಕ್ಕೆ ಶ್ರಮಿಸುತ್ತಿದ್ದಾರೆ.
ಮೂಗುತಿ ಮುಂಬಾರ, ಹಾನಗಲ್ ಕುಮಾರಸ್ವಾಮಿಗಳು, ಭಕ್ತಿಗೀತೆಗಳು, ಮುಕ್ತಿಮಂದಿರ ಮಹರ್ಷಿ ಜೀವನ - ಕವನ, ಜನಪದ ಹೆಬ್ಬುಲಿ ವೆಂಕಪ್ಪ ಪುಲಿ ಸೇರಿದಂತೆ ಹತ್ತು ಹೆಚ್ಚು ಕೃತಿಗಳನ್ನು ರಚಿಸಿರುವ ಹೆಮ್ಮೆ ಮೂಲಗಿ ಅವರದ್ದು.ಇದೀಗ ಜಾನಪದ ರಂಗಕ್ಕೆ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಜಾನಪದ ಅಕಾಡೆಮಿಯೂ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ. ಕೆಲಸ ಮಾಡಿದರೆ ನಮಗೆ ಏನು ಬರಬೇಕು ಅದು ತಾನಾಗಿಯೇ ಬರುತ್ತದೆ ಎಂಬುದಕ್ಕೆ ಈ ಪ್ರಶಸ್ತಿಯೇ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ ಮೂಲಗಿ.
ಎಲ್ಲೋ ಮೂಲೆಯಲ್ಲಿ ನನ್ನ ಪಾಡಿಗೆ ಹಾಡು ಹಾಡುತ್ತಾ, ಶಿಕ್ಷಕ ವೃತ್ತಿ ಮಾಡುತ್ತಾ ಇದ್ದೆ. ಮೊಟ್ಟ ಮೊದಲಿಗೆ ನನ್ನನ್ನು ಗುರುತಿಸಿದ್ದು ಕನ್ನಡಪ್ರಭ. ಈಗ ಏನೇ ಆಗಿದ್ದರೂ ಎಷ್ಟೇ ಸಾಧನೆ ಮಾಡಿದ್ದರೂ ಅದಕ್ಕೆಲ್ಲ ಕನ್ನಡಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿಯೇ ಕಾರಣ. ಇದಕ್ಕಾಗಿ ಕನ್ನಡಪ್ರಭಕ್ಕೆ ನಾನು ಚಿರಋಣಿ ಎಂದು ಡಾ. ರಾಮು ಮೂಲಗಿ ಹೇಳಿದರು.