ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಗೌರಮ್ಮಗೆ ಕಸಾಪದಿಂದ ಸನ್ಮಾನ

KannadaprabhaNewsNetwork |  
Published : Nov 06, 2024, 12:43 AM IST
೦೫ವೈಎಲ್‌ಡಿ ಚಿತ್ರ೦೧ ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದಲ್ಲಿ ಜಾನಪದ ಕಲಾವಿದೆ ಗೌರಮ್ಮರವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು. ಕಸಾಪ ಅಧ್ಯಕ್ಷ ಯರಿಯೂರುನಾಗೇಂದ್ರ, ಗ್ರಾಪಂ ಅಧ್ಯಕ್ಷ ಆರ್. ಪುಟ್ಟಬಸವಯ್ಯ, ನಿರಂಜನ್, ರಘು ಸೇರಿದಂತೆ ಅನೇಕರು ಇದ್ದರು. | Kannada Prabha

ಸಾರಾಂಶ

ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದಲ್ಲಿ ಜಾನಪದ ಕಲಾವಿದೆ ಗೌರಮ್ಮರವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಯಳಂದೂರು

ಕಣ್ಣು ಕಾಣದಿದ್ದರೂ ಸೋಬಾನೆ, ತತ್ವಪದ ಹಾಗೂ ಜಾನಪದ ಗೀತೆಗಳನ್ನು ಹಾಡುವ ಜಾನಪದ ಹಾಡುಗಾರ್ತಿ ಹೊನ್ನೂರು ಬೀಚಹಳ್ಳಿ ಗ್ರಾಮದ ಗೌರಮ್ಮ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರ ಮನೆಗೆ ತೆರಳಿ ಸನ್ಮಾನ ಮಾಡಲಾಯಿತು. ಗೌರವ ಸ್ವೀಕರಿಸಿದ ಗೌರಮ್ಮ ಮಾತನಾಡಿ, ನಾನು ಚಿಕ್ಕಂದಿನಿಂದಲೂ ಜಾನಪದ ಗೀತೆಗಳ ಕಡೆ ಹೆಚ್ಚು ಆಕರ್ಷಿತಳಾಗಿ ಇದನ್ನು ಕಲಿತೆ, ನಮ್ಮ ಗ್ರಾಮದವರು ನನಗೆ ಹೆಚ್ಚು ಪ್ರೀತಿಸುತ್ತಾರೆ. ಪ್ರತಿ ಮನೆಯ ಶುಭ ಕಾರ್ಯಗಳಿಗೂ ನನಗೆ ಸೋಬಾನೆ ಪದ ಹಾಡಲು ಕರೆಯುತ್ತಾರೆ. ಇದಕ್ಕೆ ನಾನು ಚಿರಋಣಿಯಾಗಿದ್ದೇನೆ. ನನಗೆ ಈಗ ಪ್ರಶಸ್ತಿ ಸಂದಿರುವುದು ಅತೀವ ಸಂತಸ ತಂದಿದೆ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯರಿಯೂರು ನಾಗೇಂದ್ರ ಮಾತನಾಡಿ, ಕುರುಡು ಇದ್ದರೂ ಗೌರಮ್ಮ ಜಾನಪದ ಗೀತೆಗಳನ್ನೇ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡು ಇದರಲ್ಲೇ ದೊಡ್ಡ ಹೆಸರು ಮಾಡಿರುವುದು ಇವರ ಸಾಧನೆಯಾಗಿದೆ. ಹಲವು ದಶಕಗಳಿಂದ ಸೋಬಾನೆ ಹಾಗೂ ಜಾನಪದ ಗೀತೆಗಳಿಗೆ ಇವರು ಜೀವ ತುಂಬಿ ಹಾಡಿದ್ದಾರೆ. ಇವರ ಈ ಸಾಧನೆಗೆ ರಾಜ್ಯಮಟ್ಟದ ಜಾನಪದ ಅಕಾಡೆಮಿ ಪ್ರಶಸ್ತಿ ದೊರೆತಿರುವುದು ನಮ್ಮ ಜಿಲ್ಲೆ, ತಾಲೂಕು ಹಾಗೂ ಈ ಗ್ರಾಮಕ್ಕೆ ಸಂದ ದೊಡ್ಡ ಗೌರವವಾಗಿದೆ. ಇವರು ಈ ರಂಗದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಆಶಿಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇವರನ್ನು ಸನ್ಮಾನಿಸಲಾಗುತ್ತಿದೆ ಎಂದರು.ತಾಪಂ ಮಾಜಿ ಅಧ್ಯಕ್ಷ ಹೊನ್ನೂರು ನಿರಂಜನ್ ಮಾತನಾಡಿ, ಗೌರಮ್ಮ ನಮ್ಮ ಗ್ರಾಮದ ಹೆಮ್ಮೆಯಾಗಿದ್ದಾರೆ. ಇವರು ಹಾಡುವ ಸೋಬಾನೆ ಪದ ನಮ್ಮ ಜಿಲ್ಲೆ ಹಾಗೂ ತಾಲೂಕಿನಲ್ಲಿ ಪ್ರಸಿದ್ಧಿ ಪಡೆದಿದೆ. ಮದುವೆಯಾಗದೆ ಒಂಟಿ ಜೀವನ ನಡೆಸುತ್ತಿರುವ ಇವರಿಗೆ ಸ್ವಂತ ಸೂರಿಲ್ಲ, ಈ ನಿಟ್ಟಿನಲ್ಲಿ ಪಂಚಾಯಿತಿ ವತಿಯಿಂದ ಇವರಿಗೆ ನಿವೇಶನ ಹಾಗೂ ಸೂರು ಕೊಡಿಸಲು ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.ಗ್ರಾಪಂ ಅಧ್ಯಕ್ಷ ಆರ್. ಪುಟ್ಟಬಸವಯ್ಯ, ಪಪಂ ನಾಮ ನಿರ್ದೇಶಿತ ಸದಸ್ಯ ಲಿಂಗರಾಜಮೂರ್ತಿ, ಕುಮಾರ್, ಕಸಾಪ ಕಾರ್ಯದರ್ಶಿ ಡಿ.ಪಿ. ಮಹೇಶ್, ಕೋಶಾಧ್ಯಕ್ಷ ಫೈರೋಜ್‌ಖಾನ್, ವೈ.ಎಂ. ಭಾನುಪ್ರಕಾಶ್, ಮಹದೇವಸ್ವಾಮಿ ಸೇರಿದಂತೆ ಅನೇಕರು ಹಾಜರಿದ್ದರು.

ಇವರ ಸ್ಮೃತಿ ಪಟಲದಲ್ಲಿವೆ ಅನೇಕ ಜಾನಪದ ಗೀತೆಗಳು

ಗ್ರಾಪಂ ಮಾಜಿ ಸದಸ್ಯ ರಘು ಮಾತನಾಡಿ, ಗೌರಮ್ಮ ಸೋಬಾನೆ, ಮಲೆ ಮಹದೇಶ್ವರ, ಬಿಳಿಗಿರಿರಂಗಸ್ವಾಮಿ, ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಸೇರಿದಂತೆ ಅನೇಕ ಜಾನಪದ ಗೀತೆಗಳನ್ನು ತಮ್ಮ ಸ್ಮೃತಿ ಪಟದಲ್ಲಿ ಇಟ್ಟುಕೊಂಡಿರುತ್ತಾರೆ. ಇಲ್ಲಿನ ಪ್ರತಿ ಮನೆಗಳಲ್ಲೂ ಇವರಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಎಲ್ಲರೂ ಇಷ್ಟಪಡುವ ಇವರನ್ನು ಗ್ರಾಮದವರು ಹೆಚ್ಚು ಪ್ರೀತಿಸುತ್ತಾರೆ. ಇಂತಹ ಪ್ರತಿಭೆಗೆ ಸಂದಿರುವ ಪ್ರಶಸ್ತಿ ನಮ್ಮ ಗ್ರಾಮ ಹೆಮ್ಮೆಪಡುವ ವಿಷಯವಾಗಿದೆ ಎಂದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ