ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಆಧುನಿಕ ಭರಾಟೆಯಲ್ಲಿ ಜಾನಪದ ಕಲೆಗಳು ಮರೆಯಾಗುತ್ತಿವೆ. ಅನೇಕ ಕಲಾವಿದರು ಎಲೆಮರೆ ಕಾಯಿಯಂತೆ ಬದುಕುತ್ತಿದ್ದು, ಅಂಥವರನ್ನು ಇಂಥ ವೇದಿಕೆಗೆ ತಂದು ಜನಪದ ಕಲೆಗಳನ್ನು ಪ್ರದರ್ಶಿಸಿ ಪರಿಚಯಿಸುತ್ತಿರುವ ರಾಜ್ಯ ಯುವ ಸಂಘಗಳ ಒಕ್ಕೂಟ ಮತ್ತು ಜನಪದ ಪರಿಷತ್ ಕಾರ್ಯ ಶ್ಲಾಘನೀಯ ಎಂದು ಸಾಮಾಜಿಕ ಕಾರ್ಯಕರ್ತ ನೇತಾಜಿ ನಲವಡೆ ಹೇಳಿದರು.ಜನಪದ ಸಂಸ್ಕೃತಿ, ಕಲೆ ಮತ್ತು ಕಲಾವಿದರ ಸೇವೆಯನ್ನು ಸ್ಮರಿಸಲು ರಾಜ್ಯ ಯುವ ಸಂಘಗಳ ಒಕ್ಕೂಟ, ಜಿಲ್ಲಾ ಘಟಕ ಹಾಗೂ ಕನ್ನಡ ಜಾನಪದ ಪರಿಷತ್, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ 66ನೇ ವಿಶ್ವ ಜಾನಪದ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಾಗಲಕೋಟೆ ಕರ್ನಾಟಕ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ವಿಜಯಶಂಕರ್ ಮಾತನಾಡಿ, ಬೇರೆ ರಾಷ್ಟ್ರಗಳು ನಮ್ಮ ಸಂಸ್ಕೃತಿಯನ್ನು ಅಪ್ಪಿಕೊಳ್ಳುತ್ತಿವೆ. ಭಾರತೀಯರಾದ ನಾವು ಇಂಥ ಜಾನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕೆಲಸ ನಮ್ಮ ಹೆಗಲ ಮೇಲಿದೆ ಎಂದು ಹೇಳಿದರು.ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅರವಿಂದ್ ಕೊಪ್ಪ ಮಾತನಾಡಿ, ಮನುಷ್ಯ ಪಥದಿಂದ ದೈವತ್ವದ ಪತದತ್ತ ಸಾಗಲು ದಾರಿ ತೋರಿಸಿಕೊಟ್ಟವರು ನಮ್ಮ ಜನಪದರು. ಲಿಖಿತವಿಲ್ಲ, ಶಾಸನವಿಲ್ಲ ಏನು ಇಲ್ಲದೆ ಬಾಯಿಂದ ಬಾಯಿಗೆ ಬಂದ ಪದವೇ ಜಾನಪದ. ಜನರ ಮನಸ್ಸನ್ನು ಸ್ವಚ್ಛಗೊಳಿಸಿ ಸುಂದರ ಜೀವನ ರೂಪಿಸಿದ ಸಾಹಿತ್ಯವೇ ಜಾನಪದ ಸಾಹಿತ್ಯ. ನಮ್ಮ ಅಡುಗೆ, ನಡುಗೆ, ಊಟ, ಆಟ, ಪಾಠದಲ್ಲಿ ಜಾನಪದವಿದೆ. ಇಂಥ ಶ್ರೀಮಂತ ಸಾಹಿತ್ಯ ಬೇರೆ ಎಲ್ಲಿಯೂ ಇಲ್ಲ. ಇಂಥ ಜಾನಪದ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಹಸನಾಗುತ್ತದೆ ಎಂದರು.
ಕಾರ್ಯಕ್ರಮವನ್ನು ನೇತಾಜಿ ನಲವಡೆ, ಸತೀಶ್ ಓಶ್ವಾಲ್ ಉದ್ಘಾಟಿಸಿದರು. ಪ್ರಾಂಶುಪಾಲ ಎಸ್.ಎಸ್.ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ರಾಯನಗೌಡ ತಾತರಡ್ಡಿ, ಉದ್ಯಮಿ ಗಣೇಶ ಅನ್ನಗೌನಿ, ಪತ್ರಕರ್ತ ಬಿ.ಬಿ.ವಿಜಯಶಂಕರ, ದಾನಯ್ಯಸ್ವಾಮಿ ಹಿರೇಮಠ, ಅಶೋಕ ನಾಡಗೌಡ, ಕ.ಹಾ.ಪ ಅಧ್ಯಕ್ಷ ಎ.ಆರ್.ಮುಲ್ಲಾ. ಜಾನಪದ ಯುವ ಬ್ರಿಗೇಡ್ ನಗರ ಸಂಚಾಲಕ ಕೃಷ್ಣಾ ಕುಂಬಾರ್, ಉಪಾಧ್ಯಕ್ಷ ಆಕಾಶ ನಾಲತವಾಡ, ಬಸವರಾಜ್ ಮೇಟಿ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಸ್ವಾಗತಿಸಿದರು. ಐ.ಬಿ.ಹಿರೇಮಠ ಸಂಯೋಜಿಸಿದರು.