ಜನಪದ ಕಲೆ ನಿಂತ ನೀರಲ್ಲ, ಅದು ಚಲನಶೀಲವಾದದ್ದು: ಚಿಂತಕ ಬಂಜಗೆರೆ ಜಯಪ್ರಕಾಶ್

KannadaprabhaNewsNetwork | Published : Aug 1, 2024 12:17 AM

ಸಾರಾಂಶ

ಜನಪದ ಕಲೆ, ಸಂಸ್ಕೃತಿ ನಿಂತ ನೀರಲ್ಲ, ಅದು ನಿರಂತರವಾಗಿ ಚಲನಶೀಲವಾಗುವಂತದ್ದು ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅವರು ಅಭಿಪ್ರಾಯಪಟ್ಟರು. ಚಾಮರಾನಗರದಲ್ಲಿ ’ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾನಪದ ಸಂಭ್ರಮ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಚಾಮರಾಜನಗರ

ಜನಪದ ಕಲೆ, ಸಂಸ್ಕೃತಿ ನಿಂತ ನೀರಲ್ಲ, ಅದು ನಿರಂತರವಾಗಿ ಚಲನಶೀಲವಾಗುವಂತದ್ದು ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಅವರು ಅಭಿಪ್ರಾಯಪಟ್ಟರು.

ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಕರ್ನಾಟಕ ಜಾನಪದ ಅಕಾಡಮಿ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆಕಾಶವಾಣಿ ಮೈಸೂರು ಎಫ್.ಎಂ. ೧೦೦.೦೬ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ’ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ವರ್ತಮಾನದ ತಲ್ಲಣಗಳು ಹಾಗೂ ಜಾನಪದ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.

ಜನರ ಬಾಯಲ್ಲಿ ಬರುವ ಪದವೇ ಜನಪದ. ಜನಪದ ಸಂಸ್ಕೃತಿ, ಸಂಗೀತ ಕಲೆಗಳು ಗ್ರಾಮೀಣ ಜನರ ವೃತ್ತಿಬದುಕಿನ ಮೇಲೆ ಅವಲಂಬಿತವಾಗಿವೆ. ಜನರು ದಿನನಿತ್ಯದ ದುಡಿಮೆಯ ಬಿಡುವಿನ ವೇಳೆಯಲ್ಲಿ ಕಲೆಗಳನ್ನು ಅಸ್ವಾದಿಸುತ್ತಾರೆ. ಸುಗ್ಗಿ ಕಣ, ಕಳೆ ಕೀಳುವಾಗ, ಗದ್ದೆ ನಾಟೀ ಮಾಡುವಾಗ, ದೋಣಿ ನಡೆಸುವಾಗ ಜನಪದ ಕಾವ್ಯಗಳು ಮೇಳೈಸುತ್ತವೆ. ಜನಪದ ಎಂದಿಗೂ ಕಳೆಗುಂದಿಲ್ಲ. ಅದು ತನ್ನ ಚಲನಶೀಲತೆಯನ್ನು ಇಂದಿಗೂ ಉಳಿಸಿಕೊಂಡಿದೆ. ವಿಕಾಸ ಹಾಗೂ ವಿಸ್ತರಣೆ ಜನಪದ ಕಲೆಯ ಅವಿಭಾಜ್ಯ ಅಂಗಗಳಾಗಿದ್ದು, ಜನರ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿವೆ ಎಂದರು.

ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳಿಗೆ ಇಡೀ ರಾಜ್ಯದ ಕೇಂದ್ರಸ್ಥಾನವಾಗಿದೆ. ಸಾಹಿತ್ಯ, ಸಂಸ್ಕೃತಿಗೆ ದಕ್ಷಿಣದ ಹೆಬ್ಬಾಗಿಲು ಆಗಿದೆ. ಕರ್ನಾಟಕಕ್ಕೆ ಮಾದರಿಯಾಗುವ ಜನಪದ ಕಲೆಗಳು ಇಲ್ಲಿವೆ. ಚಾಮರಾಜನಗರಕ್ಕೆ ಜನಪದ ಕಲೆ ದೈವಕಲೆಯಾಗಿದೆ. ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿಯಂತಹ ಸಾಧುಸಂತರು ನಡೆದಾಡಿದ ಪುಣ್ಯಭೂಮಿ ಇದಾಗಿದೆ. ಎಲ್ಲಾ ಬಗೆಯ ಜನಪದ ಕಲಾವಿದರು ಇಲ್ಲಿದ್ದಾರೆ. ಕಲಾವಿದರಲ್ಲಿ ಇತ್ತೀಚೆಗೆ ಜಾಗೃತ ಪ್ರಜ್ಞೆ ಮೂಡಿದೆ. ವರ್ತಮಾನದಲ್ಲಿ ನಮ್ಮ ಉದ್ಯೋಗಕ್ಕೂ ಬದುಕಿನ ಕಲೆಗೂ ಸಂಬಂಧವಿದೆ ಎಂದು ತಿಳಿಸಿದರು.

ಕಾವೇರಿ ಜಲಾನಯನ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಮಾತನಾಡಿ, ಜಾನಪದ ಕಲೆಗಳ ತವರೂರು ಚಾಮರಾಜನಗರ. ಜನಪದ ಇಲ್ಲಿ ಸಮೃದ್ಧವಾಗಿದೆ. ಹಿಂದೆ ಹಳ್ಳಿಗಳಲ್ಲಿ ಜನಪದ ಜೀವಂತವಾಗಿತ್ತು. ಜನಪದವನ್ನು ಬರವಣಿಗೆ ಮೂಲಕ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಕಲಾವಿದರು ಮುಂದಾಗಬೇಕು ಎಂದರು.

ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ ಮಾತನಾಡಿ, ಜಿಲ್ಲೆಯ ಜಾನಪದ ಕಲಾವಿದರು ರಾಜ್ಯಕ್ಕೆ ದೇಶಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಅವಕಾಶಗಳನ್ನು ಪಡೆದಿದ್ದಾರೆ. ಜಿಲ್ಲೆ ಅನೇಕ ಕಲಾವಿದರನ್ನು ಚಿತ್ರರಂಗಕ್ಕೂ ನೀಡಿದೆ. ಜಾನಪದ ಕಲೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಮೈಸೂರು ಆಕಾಶವಾಣಿ ಉಪನಿರ್ದೇಶಕ ಎಸ್.ಎಸ್. ಉಮೇಶ್ ಮಾತನಾಡಿ, ಜನಪದ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಆಕಾಶವಾಣಿಯು ಜನಪದ ಕಲಾವಿದರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದೆ. ಆಕಾಶವಾಣಿಯ ಧ್ವನಿಪರೀಕ್ಷೆಯ ಮಾನದಂಡದ ಆಧಾರದಲ್ಲಿ ವಿವಿಧ ಇಲಾಖೆಗಳು ಕಲಾವಿದರಿಗೆ ಕಾರ್ಯಕ್ರಮಗಳನ್ನು ನೀಡುತ್ತಿವೆ ಎಂದರು. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು ಮಾತನಾಡಿ, ಜನಪದ ಕವಿತೆಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಲ್ಲಿ ಸಫಲವಾಗಿವೆ. ಗ್ರಾಮೀಣ ಜನರು ತಮ್ಮ ದೈಹಿಕ ಶ್ರಮ ಕಡಿಮೆ ಮಾಡಿಕೊಳ್ಳಲು ಹುಟ್ಟುಹಾಕಿದ್ದು ಜನಪದ ಗೀತೆಗಳನ್ನು. ಜನಪದ ಕಲೆಗಳು ನಶಿಸದಂತೆ ತಡೆದು ಪುನಶ್ಚೇತನ ಗೊಳಿಸಬೇಕಾದ ಅಗತ್ಯವಿದೆ ಎಂದರು.

ಕರ್ನಾಟಕ ಜಾನಪದ ಅಕಾಡಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬದಲಾವಣೆಗೆ ಆಧುನಿಕತೆ ಬೇಕು. ಆದರೆ ಆಧುನಿಕತೆ ಜಾನಪದ ಕಲೆಗಳ ವಿನಾಶಕ್ಕೆ ಕಾರಣವಾಗಬಾರದು. ಕಲೆಗಳಲ್ಲಿ ಶ್ರೇಷ್ಠ, ಕನಿಷ್ಠ ಪ್ರಕ್ರಿಯೆಗಳನ್ನು ಬುಡಸಮೇತ ಕೀಳಬೇಕು. ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಲು ಜನಪದ ಆಧಾರಸ್ತಂಭವಾಗಬೇಕು. ಅಂತಹ ಶಕ್ತಿ ಜನಪದಕ್ಕಿದೆ ಎಂದರು. ವಿಧಾನ ಪರಿಷತ್ ಸದಸ್ಯ ಕೆ. ವಿವೇಕಾನಂದ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಜಾನಪದ ಅಕಾಡಮಿ ಸದಸ್ಯರಾದ ಉಮೇಶ್, ಮಲ್ಲಿಕಾರ್ಜುನ ಕಲ್ಲಹಳ್ಳಿ, ರಿಜಿಸ್ಟ್ರಾರ್ ನಮ್ರತಾ, ಗುರುರಾಜ ಹೊಸಕೋಟೆ, ಇತರರು ಕಾರ್ಯಕ್ರಮದಲ್ಲಿ ಇದ್ದರು.

Share this article