ಜನಪದ ಕಲೆ, ಸಾಹಿತ್ಯ ಸಾಂಸ್ಕೃತಿಕ ಜೀವನಕ್ಕೆ ಬುನಾದಿ

KannadaprabhaNewsNetwork | Published : Nov 9, 2024 1:21 AM

ಸಾರಾಂಶ

ನಾಳೆ ಜಿಲ್ಲಾ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ: ವಿಜಯಕುಮಾರ ತೇಗಲತಿಪ್ಪಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲಾ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನ ನ.10 ರಂದು ನಗರದ ಕನ್ನಡ ಭವನದಲ್ಲಿ ನಡೆಯಲಿದ್ದು, ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನಪದ ಕಲೆ ಮತ್ತು ಸಾಹಿತ್ಯ ಒಬ್ಬರಿಂದ ಒಬ್ಬರಿಗೆ ಹರಿದು ಬಂದಿದ್ದು, ನಮ್ಮ ಸಾಂಸ್ಕೃತಿಕ ಜೀವನಕ್ಕೆ ಬುನಾದಿಯಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳೀದರು.

ನಗರದ ಕನ್ನಡ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಮಾಹಿತಿ ನೀಡಿದ ಅವರು, ಎಲ್ಲಾ ಸಾಹಿತ್ಯದ ಪ್ರಕಾರಗಳಿಗೆ ಜನಪದ ಸಾಹಿತ್ಯವೇ ತಾಯಿ ಬೇರಾಗಿದೆ. ಇಂದು ಜನಸಾಮಾನ್ಯರ ಜೀವನ ಮಟ್ಟ ಎತ್ತರಿಸಲು ಮತ್ತು ಸಾಂಸ್ಕೃತಿಕ ಬದುಕನ್ನು ಕಟ್ಟಿಕೊಳ್ಳಲು ಜನಪದ ಸಾಹಿತ್ಯ ತುಂಬಾ ಪರಿಣಾಮಕಾರಿಯಾಗಿದೆ. ಆಧುನಿಕ ಜೀವನ ಶೈಲಿಯಿಂದ ನಮ್ಮ ಜನಪದ ಕಲೆ ಮತ್ತು ಸಂಸ್ಕೃತಿ ಮರೀಚಿಕೆಯಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವಲ್ಲಿ ಇಂಥ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಜನಪದ ಸಾಹಿತ್ಯ ಸಮ್ಮೇಳನದ ಮೂಲಕ ಇಂದಿನ ಯುವ ಪೀಳಿಗೆಗೆ ಜನಪದ ಸಾಹಿತ್ಯದ ಮೌಲ್ಯಗಳನ್ನು ತಿಳಿಸಿ ಕೊಡಬೇಕಾಗಿದೆ. ಈ ಹಿನ್ನೆಲೆಯಾಗಿ ಪ್ರಪ್ರಥಮ ಬಾರಿಗೆ ಜನಪದ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ. ಜನಪದ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಲು ಇಂಥ ಸಮ್ಮೇಳನಗಳು ಅವಶ್ಯಕವಾಗಿವೆ ಎಂದು ಹೇಳಿದರು.

ಅಂದು ಬೆಳಗ್ಗೆ 9:30ಕ್ಕೆ ನಗರದ ಮಿನಿ ವಿಧಾನ ಸೌಧದಿಂದ ಕನ್ನಡ ಭವನದವರೆಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಚಾಲನೆ ನೀಡಲಿದ್ದಾರೆ. ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘದ ಜಿಲ್ಲಾಧ್ಯಕ್ಷ ಧರ್ಮರಾಜ ಜವಳಿ ನೇತೃತ್ವ ವಹಿಸಲಿದ್ದಾರೆ. ಕಸಾಪದ ವಿವಿಧ ತಾಲೂಕು ಅಧ್ಯಕ್ಷರು ಉಪಸ್ಥಿತರಿರುವರು.

ಸಂಗೀತ ಕಲಾವಿದ ಭಗವಂತಪ್ಪ ಹೂಗಾರ ದೇಸಾಯಿ ಕಲ್ಲೂರ ವೇದಿಕೆಯಡಿಯಲ್ಲಿ ಬೆಳಗ್ಗೆ 10.45 ಕ್ಕೆ ಜರಗಲಿರುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಉದ್ಘಾಟಕರಾಗಿ ಆಗಮಿಸಲಿದ್ದು, ಹಿರಿಯ ಲೇಖಕಿ ಪ್ರೊ.ಶೋಭಾದೇವಿ ಚೆಕ್ಕಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಕಜಾಪ ರಾಜ್ಯ ಕಾರ್ಯಾಧ್ಯಕ್ಷ ಡಾ.ಎಸ್ ಬಾಲಾಜಿ, ಬೆಂಗಳೂರಿನ ಸಿಸಿಬಿ ವಿಭಾಗದ ಸಿಪಿಐ ಹಾಗೂ ಜಾನಪದ ಗಾಯಕ ಜ್ಯೋತಿರ್ಲಿಂಗ ಹೊನಕಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮಧ್ಯಾಹ್ನ 12.15ಕ್ಕೆ ನಡೆಯುವ ಚಿಂತನಾ ಗೋಷ್ಠಿಯಲ್ಲಿ ಜನಪದ ಸಾಹಿತ್ಯದ ತತ್ವ-ಸತ್ವ-ಮಹತ್ವ ಎಂಬ ವಿಷಯದ ಕುರಿತು ಡಾ. ರಾಜೇಂದ್ರ ಯರನಾಳೆ, ಜಿಲ್ಲೆಯ ಜನಪದ ಸಾಹಿತ್ಯದ ವೈವಿಧ್ಯತೆ ಕುರಿತು ಡಾ.ಚಿತ್ಕಳಾ ಮಠಪತಿ, ಸಮ್ಮೇಳನಾಧ್ಯಕ್ಷರ ಬದುಕು-ಬರಹ ಕುರಿತು ಡಾ. ಸುರೇಶ ಜಾಧವ ಮಾತನಾಡಲಿದ್ದಾರೆ.

ಸಂಜೆ 4:30ಕ್ಕೆ ಸಮಾರೋಪ ಹಾಗೂ ಸತ್ಕಾರ ಸಂಭ್ರಮದಲ್ಲಿ ಹಿರಿಯ ಲೇಖಕಿ ಡಾ.ವಿಶಾಲಾಕ್ಷಿ ಕರೆಡ್ಡಿ ಸಮಾರೋಪ ನುಡಿಗಳನ್ನಾಡುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಚಂದ್ರಕಲಾ ಬಿದರಿ, ನಾಟಕ ಅಕಾಡೆಮಿಯ ಮಾಜಿ ಸದಸ್ಯ ಬಿ. ಸಂದೀಪ, ಆಕಾಶವಾಣಿ ಕೇಂದ್ರದ ಉದ್ಘೋಷಕ ಶಾರದಾ ಜಂಬಲದಿನ್ನಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಎಂ.ಎನ್ ಸುಗಂಧಿ, ಸ್ವಾಗತ ಸಮಿತಿಯ ಅಧ್ಯಕ್ಷ ಮಹ್ಮದ್ ಇಬ್ರಾಹಿಂ, ಗೌರವಾಧ್ಯಕ್ಷ ಕಾಶಿನಾಥ ಪಲ್ಲೇರಿ, ಕಾರ್ಯಾಧ್ಯಕ್ಷ ಬಿ.ಎನ್. ಪುಣ್ಯಶೆಟ್ಟಿ ಇತರರಿದ್ದರು.

ಜಾನಪದ ಸಾಧಕರಿಗೆ ಸನ್ಮಾನ

ಜನಪದ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ಕ್ಷೇತ್ರದಲ್ಲಿ ಕೃಷಿಗೈದ ಪ್ರಮುಖರಾದ ಡಾ.ಬಿ.ಎಸ್.ಪೊಲೀಸ್ ಪಾಟೀಲ, ಡಾ.ಸ್ವಾಮಿರಾವ ಕುಲಕರ್ಣಿ, ಡಾ.ಹನುಂತರಾವ ದೊಡ್ಮನಿ, ಬಾಬುರಾವ ಜಮಾದಾರ, ಡಾ.ಶಾರದಾದೇವಿ ಜಾಧವ, ಡಾ. ಸುರೇಂದ್ರಕುಮಾರ ಕೆರಮಗಿ, ಡಾ. ಸಂಗೀತಾ ಹಿರೇಮಠ ಅವರನ್ನು ಸತ್ಕರಿಸಲಾಗುವುದು.

Share this article