ಗದಗ: ನಮ್ಮ ಮೂಲ ಜನಪದ ಸಂಸ್ಕೃತಿಯ ವೈಭವ ಮಾಯವಾಗುತ್ತಿದೆ ಎನ್ನುವ ಭಯ ನಮ್ಮನ್ನು ಕಾಡುತ್ತಿದೆ. ಮುಂದಿನ ಪೀಳಿಗೆಗೆ ಜನಪದ ಕಲೆಗಳನ್ನು ಪರಿಚಯಿಸಿ ಉಳಿಸಿ ಬೆಳೆಸುವ ಕೆಲಸ ಹಿರಿಯ ಕಲಾವಿದರಿಂದ ಆಗಬೇಕಾಗಿದೆ. ಅದಕ್ಕೆ ಸಹಕಾರ ಕೂಡಾ ದೊರೆಯಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ಜಗತ್ತಿನಲ್ಲಿ ವಿಶಿಷ್ಟ ಜಾನಪದ ಕಲೆಗಳನ್ನು ಹೊಂದಿರುವ ನಾವು ಅವುಗಳನ್ನು ಮರೆತಿದ್ದೇವೆ. ಸ್ವಾತಂತ್ರ್ಯ ನಂತರದ ಪಿಳಿಗೆ ನಮ್ಮ ಮೂಲ ಕಲೆಗಳತ್ತ ಹೆಚ್ಚಿನ ಒಲವು ಹೊಂದಬೇಕಾಗಿತ್ತು. ಹಲವರು ಪಾಶ್ಚಾತ್ಯ ಸಂಸ್ಕೃತಿಯತ್ತ ಮುಖ ಮಾಡಿದರು. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ನಮ್ಮ ಉತ್ತರ ಕರ್ನಾಟಕದ ಜನಪದ ಸಂಸ್ಕೃತಿ, ಸಾಹಿತ್ಯ ಪ್ರಗತಿ ಕಾಣಲಿಲ್ಲ. ಈಗಲೂ ನಮ್ಮ ಮೂಲ ಕಲೆಗಳನ್ನು ಉತ್ತೇಜಿಸುವ ಕೆಲಸ ಆಗಬೇಕು ಎಂದರು.
ಕರ್ನಾಟಕ ಜಾನಪದ ಅಕಾಡೆಮಿಯ ನಮ್ರತ ಎನ್. ಮಾತನಾಡಿ, ನಮ್ಮ ಮೂಲ ಜನಪದೀಯ ಆಟಗಳನ್ನು ಇಂದಿನ ತಲೆಮಾರಿನವರಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಈ ವೇಳೆ ಮುಂಡರಗಿಯ ಸಾಹಿತಿ ಡಾ. ನಿಂಗು ಸೊಲಗಿ ಜಾನಪದ ಆಟಗಳ ಕುರಿತು ಉಪನ್ಯಾಸ ನೀಡಿದರು. ಕಲಾವಿದರಾದ ಯಲ್ಲಪ್ಪ ಡಕ್ಕಣ್ಣವರ, ಬಸವರಾಜ ಜಕ್ಕಮ್ಮನವರ, ಯಲ್ಲಪ್ಪ ಚಂದಣ್ಣವರ, ಸಂಕಪ್ಪ ಹುಲ್ಲೂರ, ದುರ್ಗಮ್ಮ ಮಾದರ, ಈರಣ್ಣ ಕಬ್ಬಿಣದ ಹಾಗೂ ಪ್ರಕಾಶ ಕುರುಬರ ಅವರನ್ನು ಸನ್ಮಾನಿಸಲಾಯಿತು.
ಬಸವರಾಜ ಈರಣ್ಣವರ ತಂಡದವರು ಪ್ರಾರ್ಥಿಸಿದರು. ವಾಣಿಜ್ಯ ಮಹಾವಿದ್ಯಾಲಯ ಪ್ರಾ. ಡಾ. ವಿ.ಟಿ. ನಾಯ್ಕರ ಸ್ವಾಗತಿಸಿದರು. ಪ್ರೊ. ಬಾಹುಬಲಿ ಜೈನರ್ ನಿರೂಪಿಸಿದರು. ಜಾನಪದ ಅಕಾಡೆಮಿಯ ಸದಸ್ಯ ಶಂಕ್ರಣ್ಣ ಸಂಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯ ಕಿರೇಸೂರ ವಂದಿಸಿದರು.