ಮೊಹರಂ ಹಬ್ಬದಲ್ಲಿ ಜನಪದ ಕಲೆ ಕಣ್ಣರೆ

KannadaprabhaNewsNetwork |  
Published : Jul 4, 2025 11:54 PM IST
ಪೋಟೊ4ಕೆಎಸಟಿ1: ಕುಷ್ಟಗಿ ಪಟ್ಟಣದಲ್ಲಿ ಕಡಬಡ ಸೋಗಿನಲ್ಲಿ ಕುಣಿಯುತ್ತಿರುವ ಯುವಕರು. ಹಾಗೂ ಹುಲಿ ವೇಷ ಧರಿಸಿದ ಬೋದೂರು ತಾಂಡಾದ ಉಮೇಶ ರಾಠೋಡ. | Kannada Prabha

ಸಾರಾಂಶ

ಯುವಜನತೆ ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಇಂತಹ ಚರಿತ್ರೆ ಸಾರುವ ಕಲೆಗಳಿಂದ ದೂರುಳಿಯುತ್ತಿದ್ದು ಕೆಲವು ಹಳ್ಳಿಗಳಲ್ಲಿ ಮಾತ್ರ ಇಂತಹ ಕಲೆ ಉಳಿಸಿ-ಬೆಳೆಸಲು ಹೆಜ್ಜೆ ಮೇಳ, ರಿವಾಯಿತಿ ಪದಗಳ ಸ್ಪರ್ಧೆ ಏರ್ಪಡಿಸುತ್ತಿದ್ದಾರೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ:

ಕಾಲಿಗೆ ಗೆಜ್ಜೆ, ತಾಳಕ್ಕೆ ತಕ್ಕಂತೆ ಹೆಜ್ಜೆ. ಇದು ಭಾವೈಕ್ಯದ ಮೊಹರಂ ಹಬ್ಬದಲ್ಲಿ ಹೆಜ್ಜೆ ಮೇಳ, ರಿವಾಯಿತಿ ಪದಗಳು, ಕಡಬಡ ಸೋಗು, ಫಕೀರ, ಹುಲಿವೇಷದಂತಹ ಹಲವು ಜನಪದ ಕಲೆಗಳು ಮೇಳೈಸಿದಾಗ ಕಂಡು ಬರುವ ದೃಶ್ಯಗಳು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಜನಪದ ಕಲೆಗಳು ಮರೆಯಾಗುತ್ತಿವೆ.

ಹಲವು ದಶಕಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಮೊಹರಂ ಬಂತೆಂದರೆ 15-20 ದಿನಗಳ ಮೊದಲು ಓಣಿಗೊಂದು ಹೆಜ್ಜೆ ಮೇಳಗಳು ರಾತ್ರಿಯಿಡಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಚರ್ಮದ ಹಲಗೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ತಯಾರಿ ನಡೆಸುವ ಮೂಲಕ ಮಹಮ್ಮದ್‌ ಪೈಗಂಬರ, ಹಸೇನಿ-ಹುಸೇನಿ ಅವರ ಜೀವನ ಚರಿತ್ರೆ ತಿಳಿಸುವ ರಿವಾಯಿತಿ ಪದಗಳ ತಯಾರಿ ನಡೆಯುತ್ತಿತ್ತು. ಆದರೆ, ಯುವಜನತೆ ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಇಂತಹ ಚರಿತ್ರೆ ಸಾರುವ ಕಲೆಗಳಿಂದ ದೂರುಳಿಯುತ್ತಿದ್ದು ಕೆಲವು ಹಳ್ಳಿಗಳಲ್ಲಿ ಮಾತ್ರ ಇಂತಹ ಕಲೆ ಉಳಿಸಿ-ಬೆಳೆಸಲು ಹೆಜ್ಜೆ ಮೇಳ, ರಿವಾಯಿತಿ ಪದಗಳ ಸ್ಪರ್ಧೆ ಏರ್ಪಡಿಸುತ್ತಿದ್ದಾರೆ.

ಮೊಹರಂ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ವಯಸ್ಕರು ಸಹ ಕೈಯಲ್ಲೊಂದು ಕೋಲು ಹಿಡಿದು ಚರ್ಮದ ಹಲಗೆಯ ತಾಳಕ್ಕೆ ತಕ್ಕಂತೆ ವಿವಿಧ ಬಗೆಯ ಹೆಜ್ಜೆ ಹಾಕುತ್ತಾರೆ. ಅವುಗಳಲ್ಲಿ ಸುತ್ತು ಹೆಜ್ಜಿ, ದಾರಿ ಹೆಜ್ಜಿ, ಪಟ್ಟಿ ಹೆಜ್ಜಿ, ಸಾದಾ ಹೆಜ್ಜಿ, ತೆಕ್ಕೆಜ್ಜಿ, ಹುಡೇದ ಹೆಜ್ಜಿ, ಹುಸಿ ಹೆಜ್ಜಿ ಪ್ರಮುಖವಾದವುಗಳಾಗಿವೆ.

ಹರಕೆ ತೀರಿಸುತ್ತಿರುವ ಭಕ್ತರು:

ಮನೆಯಲ್ಲಿ ಯಾವುದೇ ತೊಂದರೆ ಬರಬಾರದು ಎಂದು ಮೊಹರಂನಲ್ಲಿ ಇಷ್ಟಾರ್ಥ ಸಿದ್ಧಿಸಲಿ ಎಂದು ಪಂಜಾ ದೇವರಿಗೆ (ಅಲೈದೇವರಿಗೆ) ಹರಕೆ ಹೊತ್ತ ಸರ್ವ ಧರ್ಮದವರು ಹಬ್ಬ ಮುಗಿಯುವವರೆಗೂ ಮಕ್ಕಳಿಂದ ಹಿಡಿದು ಯುವಕರು, ವಯಸ್ಕರು ಕಡಬಡ ಸೋಗು, ಹುಲಿ ವೇಷ ಹಾಗೂ ಫಕೀರರಾಗುವ ಮೂಲಕ ಹರಕೆ ತೀರಿಸುತ್ತಿರುವುದು ಕಂಡು ಬರುತ್ತಿದೆ. ಹುಲಿವೇಷದ ಬಣ್ಣ ಬಳಿಸಿಕೊಳ್ಳಲು ಹಣ ಇಲ್ಲದವರು ಮೈಗೊಂದು ಹಳೆಯ ಕಂಬಳಿ ಸುತ್ತಿಕೊಂಡು ಮೈತುಂಬಾ ಮಸಿ ಬಳಿದುಕೊಂಡು ತಲೆಗೊಂದು ಉದ್ದನೆಯ ಟೋಪಿ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವರು ಐದು ದಿನ ನಡೆಯುವ ಮೊಹರಂ ಹಬ್ಬದಲ್ಲಿ ಹೊಸ ಬಟ್ಟೆ ಧರಿಸಿ ಕೊರಳಿಗೆ, ಕೈಗೆ ಲಾಡಿ ಕಟ್ಟಿಕೊಂಡು ಹರಕೆ ತೀರಿಸುತ್ತಾರೆ. ಐದು ದಿನ ನಡೆಯುವ ಮೊಹರಂ ಹಬ್ಬದಲ್ಲಿ ಕತಲ್ ರಾತ್ರಿಗಳಲ್ಲಿ ಅಲೈ ದೇವರ ಸವಾರಿ ಹಾಗೂ ಪವಾಡಗಳು ನಡೆಯುತ್ತವೆ.

ನಿಡಶೇಸಿ, ವಣಗೇರಿ, ಯಲಬುಣಚಿ, ಎಡ್ಡೋಣಿಯ ಸೇರಿದಂತೆ ಅನೇಕ ಗ್ರಾಮಗಳ ಯುವಕರು ತಂಡೋಪತಂಡವಾಗಿ ಬಂದು ಹೆಜ್ಜೆ ಕುಣಿತ ಮಾಡುತ್ತಿರುವುದು ಕಂಡು ಬರುತ್ತಿದೆ.ಹಲವು ವರ್ಷಗಳ ಹಿಂದೆ ಗುಮರಿ, ಗೆಜ್ಜೆ ಕಟ್ಟಿಕೊಂಡು ಓಣಿಗೊಂದು ಹೆಜ್ಜಿ ಮೇಳ ಮಾಡಿಕೊಂಡು ತಯಾರಿ ನಡೆಸಿ ಕತ್ತಲ ರಾತ್ರಿ ದಿನ ಜೋಡ ಹಲಿಗಿಯೊಂದಿಗೆ ಮಸೀದಿ ಮುಂದೆ ಹೆಜ್ಜಿ ಆಡುತ್ತ ಬಂದರೆ ಮಂದಿ ನಿಂತ ನೋಡುತ್ತಿದ್ದರು. ಈಗ ಕಾಲ ಬದಲಾಗಿದ್ದು ಹೆಜ್ಜೆ ಕುಣಿತ ಆಡುವವರು ಕಡಿಮೆಯಾಗಿದ್ದಾರೆ. ನೋಡುವವರಿಗೂ ಆಸಕ್ತಿಯಿಲ್ಲದಂತಾಗಿದೆ.

ರಾಜೇಸಾಬ ಕಡಿವಾಲ ದೋಟಿಹಾಳ ನಿವಾಸಿಮೊಹರಂ ಹಬ್ಬದ ಅಂಗವಾಗಿ ನಾನು ಕಳೆದ ಐದು ವರ್ಷಗಳಿಂದ ಹುಲಿವೇಷ ಧರಿಸುತ್ತಾ ಬಂದಿದ್ದೇನೆ. ಭಕ್ತರು ಕೊಟ್ಟಿರುವ ಕಾಣಿಕೆಯನ್ನು ಅಲಾಯಿ ದೇವರಿಗೆ ಹರಕೆ ರೂಪದಲ್ಲಿ ತೀರಿಸುವ ಕೆಲಸ ಮಾಡುತ್ತೇನೆ.

ಉಮೇಶ ರಾಠೋಡ ಹುಲಿವೇಷಧಾರಿ ಬೋದೂರ

PREV