ಜನಪದ ಕಲೆಗಳು ತಳ ಸಮುದಾಯದಿಂದ ಉಳಿದಿವೆ

KannadaprabhaNewsNetwork | Published : Dec 12, 2024 12:31 AM

ಸಾರಾಂಶ

ಜನಪದ ಕಲೆಗಳು ಉಳಿದಿರುವುದು ತಳ ಸಮುದಾಯದವರಿಂದ ಮಾತ್ರ ಎಂದು ನಿವೃತ್ತ ಕಾರಾಗೃಹ ಅಧೀಕ್ಷಕ ಹರ್ತಿಕೋಟೆ ವೀರೇಂದ್ರ ಸಿಂಹ ಹೇಳಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಜನಪದ ಕಲೆಗಳು ಉಳಿದಿರುವುದು ತಳ ಸಮುದಾಯದವರಿಂದ ಮಾತ್ರ ಎಂದು ನಿವೃತ್ತ ಕಾರಾಗೃಹ ಅಧೀಕ್ಷಕ ಹರ್ತಿಕೋಟೆ ವೀರೇಂದ್ರ ಸಿಂಹ ಹೇಳಿದರು.

ತಾಲೂಕಿನ ಹರ್ತಿಕೋಟೆಯಲ್ಲಿ ಚೀಳಂಗಿ ಮಂಜುನಾಥಸ್ವಾಮಿ ಉರುಮೆ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ- 2024ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನಪದ ಕಲೆಗಳು ಗ್ರಾಮೀಣ ಭಾರತದ ಸಂಸ್ಕೃತಿಯ ಸೊಗಡಾಗಿವೆ. ಅವುಗಳ ಉಳಿವಿನ ಜವಾಬ್ದಾರಿಯನ್ನು ಇವತ್ತಿಗೂ ತಳ ಸಮುದಾಯಗಳೇ ಹೊತ್ತಿವೆ. ಜನಪದ ಕಲೆಗಳನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸಹ ಶಿಕ್ಷಕ ರಾಘವೇಂದ್ರಾಚಾರಿ ಉಪನ್ಯಾಸ ನೀಡಿ, ಪ್ರಾಚೀನ ಕಾಲದ ಜನರು ತಮ್ಮ ಜೀವನದ ಆಸರೆ, ಬೇಸರ ಕಳೆಯಲು ಸಂಜೆಯ ಬಿಡುವಿನ ಸಮಯದಲ್ಲಿ ಹಾಡು, ಅಭಿನಯದ ಮೂಲಕ ಪ್ರಾರಂಭಿಸಿದ ಕಲೆ ಜನರಿಂದ ಜನರಿಗೆ, ಬಾಯಿಂದ ಬಾಯಿಗೆ ಮುಂದುವರೆದು ಜನಪದವಾಯಿತು. ಜನಪದ ಕಳೆಯು ಪ್ರಾಚೀನ ಗ್ರಾಮೀಣ ಭಾರತದ ತಾಯಿಬೇರಾಗಿದೆ ಎಂದು ತಿಳಿಸಿದರು.

ಜಾನಪದ ಕಲೆ, ವೀರಗಾಸೆ, ಕಂಸಾಳೆ, ಡೊಳ್ಳುಕುಣಿತ, ಪೂಜಾಕುಣಿತ, ಪಟ ಕುಣಿತ, ಕೊಂಬು ಕಹಳೆ, ಯಕ್ಷಗಾನ, ಬಯಲಾಟ, ಉರುಮೆ, ಹಗಲುವೇಷ , ಭಜನೆ, ಮೇಳ, ಸಮೇಳ, ವಾದ್ಯಗೋಷ್ಟಿ ಹೀಗೆ ಅನೇಕ ಪ್ರಕಾರಗಳು ಮೈ ಮನಸುಗಳನ್ನು ರೋಮಾಂಚನಗೊಳಿಸುತ್ತವೆ ಎಂದರು.

ಮೊದಲಿನಿಂದಲೂ ಎಲ್ಲಾ ಪೂಜಾ ಕಾರ್ಯಗಳು, ರಥೋತ್ಸವಗಳು, ದೇವರ ಮೆರವಣಿಗೆಗಳು ಜನಪದ ಕಲೆಗಳಿಲ್ಲದೇ ನಡೆಯುತ್ತಿರಲಿಲ್ಲ. ಇದೀಗ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚೀಳಂಗಿ ಹನುಮಂತಪ್ಪನವರ ಕುಟುಂಬ ಮತ್ತು ಕಲಾವಿದರು ಇಂತಹ ಸಂಸ್ಕೃತಿ ನಶಿಸಲು ಬಿಡದೇ ಕಾಪಾಡುತ್ತಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹರ್ತಿಕೋಟೆ ಹರ್ತಿ ಸಂಸ್ಥಾನದ ಗುರುಗಳಾದ ಎಂ.ಜಿ. ಸಣ್ಣವೀರಪ್ಪಯ್ಯ ಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಹರ್ತಿಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷ ಪರಮೇಶ್ವರಪ್ಪ, ಕಾರ್ಯಕ್ರಮ ಆಯೋಜಕ ಸಿ.ಎಚ್. ಶಿವಕುಮಾರ್, ಮೂಡಲಗಿರಿಯಪ್ಪ, ಪಾಂಡುರಂಗಪ್ಪ, ಸುನೀಲ್ ವಿಶ್ವಕರ್ಮ, ಅರಳಾಪುರ ರಾಮಚಂದ್ರಪ್ಪ, ಎಚ್.ಎಸ್ ಮಾರುತೇಶ್, ಗಂಗಾಧರ್, ಮೈಲಾರಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರುಗಳು , ಕಲಾವಿದರು ಹಾಜರಿದ್ದರು.

Share this article