ಜನಪದ ಸಾಹಿತ್ಯವು ಮಾನವೀಯ ಮೌಲ್ಯಗಳ ವಾಹಕ: ಪ್ರೊ. ಸಂಕನೂರ

KannadaprabhaNewsNetwork | Published : Nov 22, 2023 1:00 AM

ಸಾರಾಂಶ

ಗದಗ ನಗರದ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಂಭ್ರಮ-೫೦ರ ನಿಮಿತ್ತ ಕನ್ನಡ ವಿಭಾಗದ ಸಾರಥ್ಯದಲ್ಲಿ ಕೆಎಲ್‌ಇ ಕನ್ನಡ ಹಬ್ಬದ ಅಂಗವಾಗಿ ಪಪೂ ಮತ್ತು ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜನಪದ ಸಮೂಹ ನೃತ್ಯ ಮತ್ತು ವಾದ್ಯ ವಾದನ ಸ್ಪರ್ಧೆಯನ್ನು ವಿಪ ಸದಸ್ಯ ಎಸ್‌.ವಿ. ಸಂಕನೂರ ಉದ್ಘಾಟಿಸಿದರು.

ಜನಪದ ಸಮೂಹ ನೃತ್ಯ ಮತ್ತು ವಾದ್ಯ ವಾದನ ಸ್ಪರ್ಧೆ ಉದ್ಘಾಟನೆ

ಗದಗ: ಜನಪದ ಸಾಹಿತ್ಯವು ಮಾನವೀಯ ಮೌಲ್ಯಗಳನ್ನು ಬಿತ್ತುವ ಮಹತ್ವದ ಸಾಧನಗಳಾಗಿದ್ದು, ಇದನ್ನು ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಜನಪದ ವಿವಿಧ ಪ್ರಕಾರಗಳನ್ನು ತರಬೇತಿ ಪಡೆದು ಇಂತಹ ಸ್ಪರ್ಧೆಗಳಲ್ಲಿ ಪ್ರದರ್ಶಿಸುವ ಮೂಲಕ ಕಣ್ಮರೆಯಾಗುತ್ತಿರುವ ಸಂಸ್ಕೃತಿಯನ್ನು ಕಾಪಾಡಬೇಕೆಂದು ವಿಪ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಂಭ್ರಮ-೫೦ರ ನಿಮಿತ್ತ ಕನ್ನಡ ವಿಭಾಗದ ಸಾರಥ್ಯದಲ್ಲಿ ಕೆಎಲ್‌ಇ ಕನ್ನಡ ಹಬ್ಬದ ಅಂಗವಾಗಿ ಪಪೂ ಮತ್ತು ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜನಪದ ಸಮೂಹ ನೃತ್ಯ ಮತ್ತು ವಾದ್ಯ ವಾದನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಕಾಲೇಜುಗಳಲ್ಲಿ ಜಾನಪದ ಸ್ಪರ್ಧೆಗಳನ್ನು ನಡೆಸಿದರೆ ವಿದ್ಯಾರ್ಥಿಗಳಿಗೆ ನೆಲ ಮೂಲದ ಸತ್ವವು ಗೊತ್ತಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಜಾನಪದದತ್ತ ಒಲವು ತೋರಿಸಿದರೆ ಬಹುತೇಕ ದುಶ್ಚಟಗಳು ಕಡಿಮೆ ಆಗುತ್ತವೆ. ನಯಸೇನ, ಮಧುರಕವಿಯ ಕಾವ್ಯಗಳನ್ನು ಉದಾಹರಿಸುತ್ತ ವಿದ್ಯಾರ್ಥಿಗಳಿಗೆ ಜನಪದದ ಮಹತ್ವವನ್ನು ತಿಳಿಸಿದರು.

ಆಡಳಿತ ಮಂಡಳಿ ಸದಸ್ಯಎಸ್.ಐ. ಮುನವಳ್ಳಿ ಮಾತನಾಡಿ, ನಮ್ಮ ನಾಡಿನ ಯಾವುದೇ ಭಾಗಕ್ಕೆ ಹೋದರೂ, ಒಂದಲ್ಲ ಒಂದು ರೀತಿಯಲ್ಲಿ ಜಾನಪದದ ಸೊಗಡು ಇದ್ದೇ ಇದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಈ ಜಾನಪದ ತೆರೆಮರೆಗೆ ಸರಿಯುತ್ತಿದೆ. ಜನಪದವನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ಅರಿವು ಮೂಡಿಸುವ ಜೊತೆಗೆ ಅದರ ದಾಖಲೀಕರಣವು ಅಗತ್ಯ. ಅದಕ್ಕಾಗಿ ಗ್ರಾಮಗಳಲ್ಲಿ ದೊರೆಯುವ ಪ್ರಾಚೀನ ವಸ್ತುಗಳು, ಗಾದೆ, ಒಗಟು, ಒಡಪು, ಅಡುಗೆ, ವೈದ್ಯ, ನಂಬಿಕೆ, ಹಬ್ಬ ಹರಿದಿನ, ಜನಪದಕಥೆ, ವೇಷ ಭೂಷಣ, ವೃತ್ತಿ, ಬದುಕು ಕುರಿತು ದಾಖಲೀಕರಣ ಕಾರ್ಯವನ್ನು ವಿದ್ಯಾರ್ಥಿಗಳು ನಡೆಸಬೇಕು ಎಂದರು

ಹಿರಿಯ ಜಾನಪದ ತಜ್ಞ ರಾಮು ಮೂಲಗಿ ಮಾತನಾಡಿ, ಆಧುನಿಕತೆ ಹೆಚ್ಚಿದಂತೆ ಮೂಲ ಜಾನಪದವು ಮಹತ್ವ ಕಳೆದುಕೊಳ್ಳುತ್ತಿದೆ. ಸಮುದಾಯ ಮತ್ತು ಶ್ರಮ ಆಧಾರಿತ ಕಲೆಗಳು ತೆರೆಮರೆಗೆ ಸರಿಯುತ್ತಿವೆ. ಇಂತಹ ಸನ್ನಿವೇಶದಲ್ಲಿ ನೆಲದ ಸಂಸ್ಕೃತಿಯನ್ನು ಬಿಂಬಿಸುವ ಮೂಲ ಜಾನಪದ ಕಲೆಗಳ ಉಳಿವಿಗಾಗಿ ಶತ ಪ್ರಯತ್ನ ನೆಡಸಬೇಕು ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ನಡೆದ ಮೆರವಣಿಗೆಯೂ ಆಕರ್ಷಕವಾಗಿ ಅಲಂಕೃತಗೊಂಡ ಬೀದಿಯಲ್ಲಿ ಭವ್ಯ ಮೆರವಣಿಗೆಯೊಂದಿಗೆ ಪೂರ್ಣಕುಂಭ ಹೊತ್ತ ವಿದ್ಯಾರ್ಥಿನಿಯರೊಂದಿಗೆ ಸಾಗಿದ ಮೆರವಣಿಗೆಗೆ ವೀರಗಾಸೆ ಮತ್ತು ಡೊಳ್ಳು ಕುಣಿತದ ತಂಡಗಳು ಮತ್ತಷ್ಟು ಮೆರಗು ತುಂಬಿದವು. ಡೊಳ್ಳು ಮತ್ತು ಸಮಾಳ ವಾಧ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳ ಹರ್ಷ ಮುಗಿಲು ಮುಟ್ಟಿತ್ತು.

ಮಹಾವಿದ್ಯಾಲಯದ ಪ್ರಾ. ಡಾ.ಎ.ಕೆ. ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಸಿ.ಸಂಶಿಮಠ, ರಜನಿ ಪಾಟೀಲ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎ.ವಿ.ದೇವಾಂಗಮಠ ಸೇರಿದಂತೆ ಕೆಎಲ್‌ಇ ಸಂಸ್ಥೆಗಳ ಎಲ್ಲ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರು, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಡಾ. ಅಂದಯ್ಯಅರವಟಗಿಮಠ ಪರಿಚಯಿಸಿದರು. ವಿಜಯಲಕ್ಮೀ ಗಾಣಿಗೇರ ನಿರೂಪಿಸಿದರು.

ಉಪ ಪ್ರಾ. ಡಾ.ವೀಣಾ ವಂದಿಸಿದರು.

Share this article