ಜನಪದ ಹಾಡುಗಳಲ್ಲಿದೆ ಅನುಭವದ ನೀತಿ: ಜನಪದ ಕಲಾವಿದ ವೆಂಕೋಬ ಪೂಜಾರ

KannadaprabhaNewsNetwork | Published : Apr 20, 2025 2:01 AM

ಸಾರಾಂಶ

ವಿದ್ಯಾರ್ಥಿಗಳು ಮೂಲ ಜನಪದ ಗೀತೆಗಳ ಕಡೆ ಆಸಕ್ತಿ ಬೆಳೆಸಿಕೊಂಡು ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಹಳ್ಳಿಗಾಡಿನ ನಮ್ಮ ಪರಂಪರೆಗಳು ಬಾಳು ಬದುಕುವ ದಾರಿ ತೋರುತ್ತವೆ. ಕಾಯಕ ತತ್ವದಡಿ ಕೂಡಿ ಬಾಳುವ ಮಾನವೀಯ ನೆಲೆಗಟ್ಟಿನ ಸತ್ಯವನ್ನು ತೋರ್ಪಡಿಸುತ್ತವೆ.

ಕೊಪ್ಪಳ:

ಜನಪದರು ತಾವು ಕಂಡ ನೋವು-ನಲಿವುಗಳನ್ನು ಹಾಡುಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಅವುಗಳಲ್ಲಿ ಅನುಭವದ ನೀತಿಯ ಸಾರವಿದ್ದು, ಸಂಸ್ಕಾರ ಕಲಿಸುತ್ತದೆ ಎಂದು ಜನಪದ ಕಲಾವಿದ ವೆಂಕೋಬ ಪೂಜಾರ ಅಭಿಪ್ರಾಯಪಟ್ಟರು.

ತಾಲೂಕಿನ ಹೊಸಬಂಡಿ ಹರ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ನಡೆದ ಜಾನಪದ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹದ ಅಬ್ಬರಕ್ಕೆ ಸಿಲುಕಿ ವಿದ್ಯಾರ್ಥಿಗಳು ಜನಪದ ಕಲೆಗಳನ್ನು ಮರೆಯುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ದೇಶಿ ಸೊಗಡು ಮರೆಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದರು.

ವಿದ್ಯಾರ್ಥಿಗಳು ಮೂಲ ಜನಪದ ಗೀತೆಗಳ ಕಡೆ ಆಸಕ್ತಿ ಬೆಳೆಸಿಕೊಂಡು ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ಹಳ್ಳಿಗಾಡಿನ ನಮ್ಮ ಪರಂಪರೆಗಳು ಬಾಳು ಬದುಕುವ ದಾರಿ ತೋರುತ್ತವೆ. ಕಾಯಕ ತತ್ವದಡಿ ಕೂಡಿ ಬಾಳುವ ಮಾನವೀಯ ನೆಲೆಗಟ್ಟಿನ ಸತ್ಯವನ್ನು ತೋರ್ಪಡಿಸುತ್ತವೆ. ಅವರು ಗ್ರಾಮೀಣ ಪರಂಪರೆಯನ್ನು ಕಣ್ಮುಂದೆ ತೆರೆದಿಟ್ಟರಲ್ಲದೆ ವಿವಿಧ ಭಾಗದ ಜಾನಪದ ಗೀತೆಗಳನ್ನು ಹಾಡುವುದರೊಂದಿಗೆ ವಿದ್ಯಾರ್ಥಿಗಳನ್ನು ರಂಜಿಸಿದರು.

ಕಾರ್ಯಕ್ರಮದ ಸಂಯೋಜಕ ಡಾ. ಹುಲುಗಪ್ಪ ಮಾತನಾಡಿ, ನಮ್ಮ ಜನಪದ ಸಾಹಿತ್ಯವು ಕಥೆ, ಕವನ, ಲಾವಣಿ ಒಗಟುಗಳ ಮೂಲಕ ಜನಸಾಮಾನ್ಯರಿಗೆ ನೀತಿ ಹಾಗೂ ಅಧ್ಯಾತ್ಮವನ್ನು ತಿಳಿಸಿದೆ, ಯುವಜನತೆ ಆಧುನಿಕ ನಾಗರಿಕತೆಯ ಪ್ರಭಾವದಿಂದ ನಮ್ಮ ಸಂಸ್ಕೃತಿಯ ಸಾರವಾದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮರೆತಿದ್ದಾರೆ. ಆದ ಕಾರಣ ಯುವಜನತೆ ಇದರ ಮಹತ್ವ ಅರಿತು ಜವಾಬ್ದಾರಿಯುತವಾಗಿ ಬದುಕಬೇಕಿದೆ ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಚನ್ನಕೃಷ್ಣ ಯಾದವ ಮಾತನಾಡಿ, ಗ್ರಾಮದ ಅಭಿವೃದ್ಧಿ ಉನ್ನತ ಶಿಕ್ಷಣದ ಮೇಲೆ ನಿಂತಿದೆ. ನಮ್ಮ ಭಾಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಜನಪದ ಸಂಸ್ಕೃತಿ ಉಳಿಸಿ-ಬೆಳೆಸಬೇಕಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ನಾಯಕ ಮಾತನಾಡಿ, ಜನಪದ ಕಲೆ, ರಂಗಭೂಮಿ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕಲಿಯುವ ಮೂಲಕ ದೇಶೀಯ ಸಂಸ್ಕೃತಿಯ ಸೊಗಡನ್ನು ಉಳಿಸಬೇಕಾಗಿದೆ. ಆಧುನಿಕ ಜೀವನ ಶೈಲಿಯಲ್ಲಿ ದೇಶಿಯ ಸಂಸ್ಕೃತಿಯನ್ನು ಮರುಕಳಿಸುವ ಉದ್ದೇಶದಿಂದ ಹಾಗೂ ದೇಶಿಯ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಕಾಲೇಜು ಶಿಕ್ಷಣ ಇಲಾಖೆ “ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ” ಶಿರ್ಷಿಕೆ ಅಡಿ ಜಾನಪದ ಉತ್ಸವವನ್ನು ಕೈಗೊಂಡಿರುವುದು ಸಂತೋಷದ ಸಂಗತಿ ಎಂದರು. ಕಾರ್ಯಕ್ರಮವನ್ನು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಶ್ರೇಷ್ಟಿ ಉದ್ಘಾಟಿಸಿದರು, ಪ್ರಾಂಶುಪಾಲ ರಮೇಶ ಅಧ್ಯಕ್ಷತೆ ವಹಿಸಿದ್ದರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article